
ಚಾಮರಾಜನಗರ (ಆ.3): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣ ಸಮೀಪ ಆಟೋ ಚಾಲಕರಿಂದ ನಡುರಸ್ತೆಯಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯೂ ಇದೇ ತಿರುವಿನಲ್ಲಿ ಆಟೋ ವ್ಹೀಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆಗ ಮಲೆ ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಚಾಲಕರನ್ನು ಬಂಧಿಸಿ, ಆಟೋ ವಶಪಡಿಸಿಕೊಂಡಿದ್ದರು. ಆದರೆ, ಇದೀಗ ಮತ್ತೆ ಅಂತಹದ್ದೇ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ರೀತಿಯ ಅಪಾಯಕಾರಿ ಕೃತ್ಯಗಳು ಭಕ್ತರ ಸುರಕ್ಷತೆಗೆ ಧಕ್ಕೆ ತರುವ ಸಾಧ್ಯತೆ ಇದ್ದು, ಪವಾಡ ಪುರುಷನ ಸನ್ನಿಧಿಯಲ್ಲಿ ಇಂತಹ ಅನಾಗರಿಕ ವರ್ತನೆಗೆ ಜನರು ಕಿಡಿಕಾರಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಬಸ್ ನಿಲ್ದಾಣದಂತಹ ಜನದಟ್ಟಣೆಯ ಪ್ರದೇಶದಲ್ಲಿ ಆಟೋ ಚಾಲಕರಿಂದ ವ್ಹೀಲಿಂಗ್‌ನಂತಹ ಅಜಾಗರೂಕ ಚಾಲನೆಯಿಂದ ಅಪಘಾತದ ಅಪಾಯ ಹೆಚ್ಚಾಗಿದೆ. ವೀಲಿಂಗ್ ಮಾಡಿರುವವರನ್ನ ಪತ್ತೆಹಚ್ಚಿ ಪುಂಡರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು, ಭಕ್ತರು ಆಗ್ರಹಿಸಿದ್ದಾರೆ.