"ಅದೃಷ್ಟ ಎಂಬುದು ಯಾವಾಗ, ಯಾರ ಬಾಗಿಲು ತಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ" ಎಂಬ ಮಾತಿಗೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಏಳು ಮಂದಿ ಕೂಲಿ ಕಾರ್ಮಿಕರ ಬದುಕೇ ಸಾಕ್ಷಿ. ಪ್ರತಿದಿನ ಬೆವರು ಸುರಿಸಿದರೂ ಹೊಟ್ಟೆಬಟ್ಟೆಗೆ ಪರದಾಡುತ್ತಿದ್ದ ಈ ಬಡ ಕುಟುಂಬಗಳ ಬದುಕು ಒಂದೇ ಒಂದು ವಜ್ರದಿಂದಾಗಿ ರಾತ್ರೋರಾತ್ರಿ ಬದಲಾಗಿ ಹೋಗಿದೆ.
ಪನ್ನಾ ಜಿಲ್ಲೆಯ ಸರ್ಕೋಹಾ ಗ್ರಾಮದ ಲೀಸ್ ಪಡೆದ ಗಣಿಯೊಂದರಲ್ಲಿ ಏಳು ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಒಂದು ದಿನ ಮಳೆಯ ಸಮಯದಲ್ಲಿ ಗಣಿಯನ್ನು ಪರಿಶೀಲಿಸುತ್ತಿದ್ದಾಗ, ಮಣ್ಣಿನ ರಾಶಿಯಲ್ಲಿ ಏನೋ ಹೊಳೆಯುವುದನ್ನು ಗುತ್ತಿಗೆದಾರ ಅಖಿಲೇಶ್ ಪಾಲ್ ಗಮನಿಸಿದರು. ಹತ್ತಿರ ಹೋಗಿ ಮಣ್ಣು ಶುಚಿಗೊಳಿಸಿ ನೋಡಿದಾಗ, ಅದು ಸಾಮಾನ್ಯ ಕಲ್ಲಲ್ಲ, ಬದಲಾಗಿ ಬೃಹತ್ ವಜ್ರ ಎಂಬುದು ತಿಳಿದುಬಂದಿದೆ.
ಪರಿಶೀಲನೆಯ ನಂತರ, ಇದು ಬರೋಬ್ಬರಿ 17.96 ಕ್ಯಾರೆಟ್ ತೂಕದ ಅಪರೂಪದ ವಜ್ರ ಎಂದು ತಿಳಿದುಬಂದಿದೆ. ಪ್ರಸ್ತುತ ಮಾರುಕಟ್ಟೆ ಅಂದಾಜಿನ ಪ್ರಕಾರ ಇದರ ಮೌಲ್ಯ 50 ಲಕ್ಷ ರೂಪಾಯಿಗೂ ಅಧಿಕ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಈ ಅದೃಷ್ಟದ ವಜ್ರವನ್ನು ನೋಡಲು ಹರಿದುಬಂದಿದೆ.
ಸರ್ಕಾರದ ನಿಯಮದಂತೆ, ಈ ವಜ್ರವನ್ನು ಪನ್ನಾದ ವಜ್ರದ ಕಚೇರಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಶೀಘ್ರದಲ್ಲೇ ನಡೆಯಲಿರುವ ಬಹಿರಂಗ ಹರಾಜಿನಲ್ಲಿ ಇದರ ಅಂತಿಮ ಬೆಲೆ ನಿರ್ಧಾರವಾಗಲಿದೆ. ಹರಾಜಿನಲ್ಲಿ ಬಂದ ಒಟ್ಟು ಮೊತ್ತದಲ್ಲಿ ಸರ್ಕಾರದ ರಾಯಲ್ಟಿಯನ್ನು ಕಡಿತಗೊಳಿಸಿದ ನಂತರ, ಉಳಿದ ಸಂಪೂರ್ಣ ಹಣವನ್ನು ಈ ಏಳು ಮಂದಿ ಕೂಲಿ ಕಾರ್ಮಿಕರಿಗೆ ಸಮಾನವಾಗಿ ಹಂಚಲಾಗುತ್ತದೆ.
ಈ ಹಣವು ಕಾರ್ಮಿಕರ ಜೀವನದಲ್ಲಿ ಹೊಸ ಭರವಸೆ ಮೂಡಿಸಿದೆ. ವಿಶೇಷವಾಗಿ ಈ ತಂಡದಲ್ಲಿರುವ 30 ರಿಂದ 38 ವರ್ಷ ವಯಸ್ಸಿನ ಸಂತೋಷ್, ಶರ್ಮನ್ ಮತ್ತು ಅರುಣ್ ಎಂಬುವವರು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಇದುವರೆಗೆ ಮದುವೆಯಾಗಿರಲಿಲ್ಲ. ಈಗ ಬಂದ ಹಣದಿಂದ ಮದುವೆಯಾಗಿ ಸಂಸಾರ ಹೂಡುವ ಕನಸು ಕಾಣುತ್ತಿದ್ದಾರೆ. ಉಳಿದವರು ತಮ್ಮ ಹಳೆಯ ಓರೆಕೋರೆ ಮನೆಗಳನ್ನು ಸರಿಪಡಿಸಿ ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ.
"ನಮ್ಮ ಮಕ್ಕಳು ನಮ್ಮಂತೆ ಕೂಲಿಗಳಾಗಬಾರದು, ಅವರಿಗೆ ಉತ್ತಮ ಶಾಲೆಗಳಲ್ಲಿ ಓದಿಸುವುದೇ ನಮ್ಮ ಮೊದಲ ಆದ್ಯತೆ" ಎಂದು ಕಾರ್ಮಿಕರು ಭಾವುಕರಾಗಿ ನುಡಿದಿದ್ದಾರೆ. ವರ್ಷಗಳ ಕಾಲ ಪಟ್ಟ ಕಷ್ಟಕ್ಕೆ ಹಾಗೂ ತಮ್ಮ ಒಗ್ಗಟ್ಟಿನ ಶ್ರಮಕ್ಕೆ ಭಗವಂತ ನೀಡಿದ ವರ ಇದಾಗಿದೆ ಎಂದು ಈ ಏಳು ಗೆಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.