ಕೇವಲ 15 ನಿಮಿಷಗಳಲ್ಲಿ ₹50 ಲಕ್ಷದ ಒಡೆಯನಾದ 66ರ ವೃದ್ಧ; ಸಾಲದ ಶೂಲಕ್ಕೆ ಸಿಲುಕಿದ್ದ ರೈತನಿಗೆ ಡಬಲ್ ಜಾಕ್‌ಪಾಟ್!

Published : Jul 15, 2026, 05:22 PM IST
Punjab farmer get Lottery

ಸಾರಾಂಶ

ಸಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ 66 ವರ್ಷದ ರೈತರೊಬ್ಬರು 15 ವರ್ಷಗಳ ನಿರಂತರ ಪ್ರಯತ್ನದ ನಂತರ ಒಂದೇ ದಿನದಲ್ಲಿ ಎರಡು ಬಾರಿ ಲಾಟರಿ ಗೆದ್ದಿದ್ದಾರೆ. ಮೊದಲು ₹20,000 ಗೆದ್ದ ಅವರು, ಅದೇ ಹಣದಲ್ಲಿ ಖರೀದಿಸಿದ ಮತ್ತೊಂದು ಟಿಕೆಟ್‌ನಲ್ಲಿ ₹50 ಲಕ್ಷದ ಬಂಪರ್ ಬಹುಮಾನ ಪಡೆದು ಲಕ್ಷಾಧಿಪತಿಯಾಗಿದ್ದಾರೆ.

ಅದೃಷ್ಟ ಎಂಬುದು ಯಾವಾಗ, ಯಾರನ್ನು, ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಜೀವನಪರ್ಯಂತ ಕಷ್ಟಪಟ್ಟರೂ ಸಿಗದ ಲಾಭ, ಒಂದೇ ಕ್ಷಣದಲ್ಲಿ ಒದಗಿ ಬರುತ್ತದೆ. ಇಂತಹದ್ದೇ ಒಂದು ರೋಚಕ ಘಟನೆ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ 66 ವರ್ಷದ ರೈತರೊಬ್ಬರಿಗೆ ಒಂದೇ ದಿನ ಎರಡು ಬಾರಿ ಲಾಟರಿ ಅದೃಷ್ಟ ಒಲಿದು ಬಂದಿದ್ದು, ಈಗ ಅವರು ಲಕ್ಷಾಧಿಪತಿಯಾಗಿದ್ದಾರೆ!

ಹದಿನೈದು ವರ್ಷದ ಕಾಯುವಿಕೆಗೆ ಸಿಕ್ಕ ಪ್ರತಿಫಲ:

ಮೋಗಾ ಜಿಲ್ಲೆಯ ನಿವಾಸಿ ಚರಣ್‌ಜಿತ್ ಸಿಂಗ್ ಕಳೆದ 15-16 ವರ್ಷಗಳಿಂದ ನಿಯಮಿತವಾಗಿ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಹವ್ಯಾಸ ಹೊಂದಿದ್ದರು. ತಾವು ಹೋದ ಕಡೆಯಲ್ಲೆಲ್ಲಾ ಹವ್ಯಾಸಕ್ಕಾಗಿ ಒಂದೊಂದು ಟಿಕೆಟ್ ಕೊಳ್ಳುತ್ತಿದ್ದ ಅವರಿಗೆ, ಹದಿನೈದು ವರ್ಷಗಳಲ್ಲಿ ದೊಡ್ಡ ಮಟ್ಟದ ಬಹುಮಾನ ಯಾವತ್ತೂ ಸಿಕ್ಕಿರಲಿಲ್ಲ. ಆದರೆ, ಇತ್ತೀಚಿನ ಒಂದು ಸಾಮಾನ್ಯ ದಿನ ಅವರ ಪಾಲಿಗೆ ಅಸಾಮಾನ್ಯವಾಗಿ ಬದಲಾಯಿತು.

ಒಂದೇ ದಿನ ಎರಡು ಬಾರಿ ಲಕ್:

ಅಂದು ಚರಣ್‌ಜಿತ್ ಸಿಂಗ್ ಮೊದಲು ಖರೀದಿಸಿದ್ದ ಲಾಟರಿಯಲ್ಲಿ ಅವರಿಗೆ 20,000 ರೂಪಾಯಿ ಬಹುಮಾನ ಬಂದಿತ್ತು. ಇದು ಅವರ ಪಾಲಿಗೆ ಮೊದಲ ಖುಷಿಯ ಸುದ್ದಿಯಾಗಿತ್ತು. ಈ ಬಹುಮಾನದ ಹಣವನ್ನು ಪಡೆಯಲು ಅವರು ಲಾಟರಿ ಅಂಗಡಿಗೆ ಹೋದಾಗ, ಅಲ್ಲಿನ ವ್ಯಾಪಾರಿ ಒಂದು ಮಾತನ್ನು ಹೇಳಿದರು. 'ನನ್ನ ಬಳಿ ಸಾವಿರ ರೂಪಾಯಿ ಮುಖಬೆಲೆಯ 'ಡಿಯರ್ ಲಾಟರಿ'ಯ (Dear Lottery) ಕೇವಲ ಒಂದು ಟಿಕೆಟ್ ಉಳಿದಿದೆ, ಇದನ್ನು ನೀವೇ ತಗೊಳ್ಳಿ' ಎಂದು ಸಲಹೆ ನೀಡಿದರು.

ತಮಗೆ ಬಂದಿದ್ದ 20 ಸಾವಿರ ರೂಪಾಯಿ ಬಹುಮಾನದಲ್ಲಿ ಸಾವಿರ ರೂಪಾಯಿ ಖರ್ಚು ಮಾಡಲು ಚರಣ್‌ಜಿತ್ ಸಿಂಗ್ ಹಿಂದೆ-ಮುಂದೆ ನೋಡಲಿಲ್ಲ. ಆ ಕೊನೆಯ ಟಿಕೆಟನ್ನು ಖರೀದಿಸಿ ಮನೆಗೆ ಮರಳಿದರು. ಆದರೆ, ಆ ಕೊನೆಯ ಟಿಕೆಟ್ ಅವರ ಜೀವನವನ್ನೇ ಬದಲಿಸುತ್ತದೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ.

50 ಲಕ್ಷ ರೂಪಾಯಿಗಳ ಬಂಪರ್ ಜಾಕ್‌ಪಾಟ್!

ಸಂಜೆ ಲಾಟರಿ ಫಲಿತಾಂಶ ಪ್ರಕಟವಾದಾಗ ಚರಣ್‌ಜಿತ್ ಸಿಂಗ್ ಅವರ ಕಣ್ಣುಗಳನ್ನೇ ಅವರಿಗೆ ನಂಬಲಾಗಲಿಲ್ಲ. ಅವರು ಖರೀದಿಸಿದ್ದ ಆ ಕೊನೆಯ ಟಿಕೆಟ್‌ಗೆ ಬರೋಬ್ಬರಿ 50 ಲಕ್ಷ ರೂಪಾಯಿಗಳ ಮೊದಲ ಬಹುಮಾನ ಬಂದಿತ್ತು! ಒಂದೇ ದಿನದಲ್ಲಿ ಮೊದಲು 20 ಸಾವಿರ, ಆಮೇಲೆ 50 ಲಕ್ಷ ರೂಪಾಯಿ ಗೆದ್ದ ಸುದ್ದಿ ಇಡೀ ಜಿಲ್ಲೆಯಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಸ್ಥಳೀಯರು ಮತ್ತು ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದರು.

ಹಣವನ್ನು ಯಾವುದಕ್ಕೆ ಬಳಸಲಿದ್ದಾರೆ?

ದಿಢೀರ್ ಆಗಿ ಬಂದ ಈ ದೊಡ್ಡ ಮೊತ್ತದ ಹಣವನ್ನು ಏನು ಮಾಡುತ್ತೀರಿ ಎಂದು ಕೇಳಿದಾಗ ಚರಣ್‌ಜಿತ್ ಸಿಂಗ್ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. 'ನನಗೆ ಬಂದಿರುವ ಈ ಹಣದಲ್ಲಿ ಮೊದಲು ನನ್ನ ಮೇಲಿರುವ ಎಲ್ಲಾ ಸಾಲಗಳನ್ನು ತೀರಿಸುತ್ತೇನೆ. ಅದಾದ ನಂತರ ಉಳಿದ ಹಣವನ್ನು ನನ್ನ ಕುಟುಂಬದ ಉನ್ನತಿಗೆ ಮತ್ತು ಸಮಾಜದ ಒಳ್ಳೆಯ ಕೆಲಸಗಳಿಗಾಗಿ ಅಥವಾ ದಾನಧರ್ಮಗಳಿಗಾಗಿ ಬಳಸುತ್ತೇನೆ' ಎಂದು ತಿಳಿಸಿದ್ದಾರೆ.

ಚರಣ್‌ಜಿತ್ ಸಿಂಗ್ ಅವರ ಈ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 'ಅದೃಷ್ಟವಿದ್ದರೆ ಕಲ್ಲು ಕೂಡ ಚಿನ್ನವಾಗುತ್ತದೆ' ಎಂಬ ಗಾದೆ ಮಾತಿಗೆ ಈ ರೈತನೇ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸತತ 15 ವರ್ಷಗಳ ಕಾಲ ಪ್ರಯತ್ನ ಬಿಡದ ಚರಣ್‌ಜಿತ್ ಅವರಿಗೆ ಕೊನೆಗೂ ಅದೃಷ್ಟ ಒಲಿದು ಬಂದಿದೆ.

PREV
Read more Articles on
click me!

Recommended Stories

15 ವರ್ಷದಿಂದ ಸಾಕಿದ ಮಾಲೀಕನ ನಿಧನ… ಅಂತ್ಯಸಂಸ್ಕಾರದ ವೇಳೆ ಕುಸಿದು ಬಿದ್ದು ಮುದ್ದಿನ ನಾಯಿಯೂ ಸಾವು !
‘ಮನೆ ಇಲ್ಲ, ಕಾರಿಲ್ಲ, ಸಂಬಳ ಜಸ್ಟ್ 25 ಸಾವಿರ’: ಮದುವೆಯಾಗಲು ನಡುರಸ್ತೆಯಲ್ಲಿ ದೊಡ್ಡ ಪ್ಲೆಕ್ಸ್ ಹಾಕಿದ ಯುವಕ!