ಮಟನ್ ಕೊಡ್ತೀವಿ ಅಂದು ಚಿಕನ್ ಬಡಿಸಿದ್ರು, ಅಕ್ಷತೆ ಕಾಳು ಹಾಕಿದವ್ರೇ ಕತ್ತಿ ಕೋಲು ಹಿಡಿದ್ರು!

Published : Jul 11, 2026, 04:02 PM IST
promised mutton served chicken brawl at bihar wedding

ಸಾರಾಂಶ

Promised mutton served chicken ಮಟನ್ ಬಡಿಸುವ ಭರವಸೆ ನೀಡಿ ಚಿಕನ್ ನೀಡಿದ್ದಕ್ಕೆ ಬಿಹಾರದ ಮದುವೆ ಸಮಾರಂಭದಲ್ಲಿ ವರ-ವಧು ಕುಟುಂಬಗಳ ನಡುವೆ ಭಾರೀ ಗಲಾಟೆ ನಡೆದು ಹಲವರು ಗಾಯಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಮದುವೆಗಳು ಅಲಂಕಾರ, ಅದ್ದೂರಿ ಎಂಟ್ರಿ, ನೃತ್ಯ ಹಾಗೂ ವೈವಿಧ್ಯಮಯ ಆಹಾರ ಮೆನುಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಮದುವೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಬಿಹಾರದಲ್ಲಿ ನಡೆದ ಒಂದು ನಿಕಾಹ್ ಸಮಾರಂಭವು ಅಲಂಕಾರ ಅಥವಾ ವಧು-ವರರ ಕಾರಣಕ್ಕೆ ಅಲ್ಲ, ಊಟದ ಮೆನು ಕಾರಣದಿಂದಲೇ ದೇಶಾದ್ಯಂತ ಸುದ್ದಿಯಾಗಿದೆ.

ಬಿಹಾರದ ಸಹರ್ಸಾ ಜಿಲ್ಲೆಯ ಮಹಿಷಿ ಬ್ಲಾಕ್‌ನ ರಾಜನ್‌ಪುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರ ಮತ್ತು ವಧು ಕುಟುಂಬಗಳ ನಡುವೆ ಭಾರೀ ಘರ್ಷಣೆ ನಡೆದಿದೆ. ವರನ ಕಡೆಯವರಿಗೆ ಕುರಿ ಮಾಂಸ (ಮಟನ್) ಬಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕೊನೆಗೆ ಚಿಕನ್ ಬಡಿಸಲಾಯಿತು ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ ಅದು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಕೋಲು, ಲಾಠಿ ಹಾಗೂ ಕತ್ತಿಗಳನ್ನು ಹಿಡಿದು ಪರಸ್ಪರ ಬೆನ್ನಟ್ಟುತ್ತಿರುವ ದೃಶ್ಯಗಳು ಕಂಡುಬಂದಿವೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅತಿಥಿಗಳು ಜೀವ ಉಳಿಸಿಕೊಳ್ಳಲು ಓಡಿದ ಘಟನೆ ಕೂಡ ನಡೆದಿದೆ.

ಘಟನೆ ಎಲ್ಲಿ ನಡೆದಿದೆ?

ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿಮ್ರಿ ಭಕ್ತಿಯಾರ್‌ಪುರ ಪುರಸಭೆಯ ಬಲುಪರ್ (ವಾರ್ಡ್ ಸಂಖ್ಯೆ 12) ನಿವಾಸಿ ಎಂಡಿ ಅನ್ವರ್ ಅವರ ಪುತ್ರ ಎಂಡಿ ಅಬ್ದುಲ್ಲಾ ಅಲಿಯಾಸ್ ಚಂದ್ ಅವರ ವಿವಾಹವು ರಾಜನ್‌ಪುರ ಗ್ರಾಮದ ಎಂಡಿ ಜಾವಿದ್ (ಅಲಿಯಾಸ್ ಮೋಟೋ) ಅವರ ಪುತ್ರಿಯೊಂದಿಗೆ ನೆರವೇರಿತ್ತು.

ಏಳುಕ್ಕೂ ಹೆಚ್ಚು ಮಂದಿ ಗಾಯ

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಾತಿನ ಚಕಮಕಿ ನಂತರ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಹಲ್ಲೆ ನಡೆಸಿದರು. ಈ ಘರ್ಷಣೆಯಲ್ಲಿ ವರನ ಕಡೆಯ ಏಳುಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಶಿಕ್, ಇರ್ಫಾನ್, ಹಸನ್, ಅಬ್ಬಾಸ್, ಜಬ್ಬಾರ್, ಅತಿಫ್ ಮತ್ತು ಮಹಬೂಬ್ ಎಂದು ಗುರುತಿಸಲಾಗಿದ್ದು, ಅವರನ್ನು ಸಿಮ್ರಿ ಭಕ್ತಿಯಾರ್‌ಪುರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪೊಲೀಸರ ತನಿಖೆ ಆರಂಭ

ವರನ ಚಿಕ್ಕಪ್ಪ ಮೊಹಮ್ಮದ್ ಇರ್ಫಾನ್, ಊಟದ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಬಳಿಕ ವಧುವಿನ ಕುಟುಂಬದವರು ಮದುವೆ ಮೆರವಣಿಗೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಕುಟುಂಬ ನಿರ್ಧರಿಸಿದೆ.

ಇದೀಗ ಸಹರ್ಸಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎರಡೂ ಕುಟುಂಬಗಳ ಸದಸ್ಯರ ಹೇಳಿಕೆಗಳನ್ನು ದಾಖಲಿಸುತ್ತಿದ್ದು, ವೈರಲ್ ವಿಡಿಯೋ ಆಧರಿಸಿ ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ಈ ಚಿತ್ರದಲ್ಲಿರುವ ಒಂದು ತಪ್ಪನ್ನ ಪತ್ತೆ ಹಚ್ಚಿ.. ಶೇಕಡಾ 99 ಜನ ಫೇಲ್..!
Dhanush Politics: 'ರಾಜಕೀಯಕ್ಕೆ ಧನುಷ್ ಎಂಟ್ರಿ' ಸುದ್ದಿ ಬೆನ್ನಲ್ಲೇ ನಟನ ಭಾರೀ ಆಸ್ತಿ, ಅರಮನೆಯಂತಹ ಮನೆಯ ಸುದ್ದಿ ವೈರಲ್!