Viral News: ಚೀನಾಗಾಗಿ ಪಾಕಿಸ್ತಾನದಲ್ಲಿ ಪ್ರತಿದಿನ ನೂರಾರು ಕತ್ತೆಗಳ ಮಾರಣಹೋಮ! ಅಸಲಿ ಕಾರಣ ಏನು?

Published : Sep 16, 2026, 07:30 PM IST
Pakistan

ಸಾರಾಂಶ

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಚೀನಾಕ್ಕೆ ಕತ್ತೆಗಳ ಮಾಂಸ ಮತ್ತು ಚರ್ಮವನ್ನು ರಫ್ತು ಮಾಡುವ ಬೃಹತ್ ದಂಧೆಯನ್ನು ಆರಂಭಿಸಿದೆ. ಚೀನಾದ ಸಾಂಪ್ರದಾಯಿಕ ಔಷಧಿ 'ಎಜಿಯಾವೊ' ತಯಾರಿಕೆಗೆ ಕತ್ತೆ ಚರ್ಮದ ಬೇಡಿಕೆ ಹೆಚ್ಚಾಗಿದ್ದು, ಇದಕ್ಕಾಗಿ ಚೀನಾ ಪಾಕಿಸ್ತಾನದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದೆ. ಈ ಉದ್ಯಮದಿಂದ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಹರಿದುಬರುವ ನಿರೀಕ್ಷೆಯಿದೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ತತ್ತರಿಸುತ್ತಿರುವ ಪಾಕಿಸ್ತಾನ, ಇದೀಗ ತನ್ನ ಆರ್ಥಿಕ ಚೇತರಿಕೆಗೆ ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ಹಾದಿಯೊಂದನ್ನು ಕಂಡುಕೊಂಡಿದೆ. ತನ್ನ ದೇಶದಲ್ಲಿರುವ ಕತ್ತೆಗಳನ್ನು ಭಾರಿ ಪ್ರಮಾಣದಲ್ಲಿ ವಧೆ ಮಾಡಿ, ಅವುಗಳ ಮಾಂಸ ಮತ್ತು ಚರ್ಮವನ್ನು ಚೀನಾಕ್ಕೆ ರಫ್ತು ಮಾಡುವ ಬೃಹತ್ ದಂಧೆಗೆ ಪಾಕಿಸ್ತಾನ ಅಧಿಕೃತವಾಗಿ ಚಾಲನೆ ನೀಡಿದೆ. ಈ ಉದ್ಯಮಕ್ಕಾಗಿ ಚೀನಾದ ಕಂಪನಿಯೊಂದು ಪಾಕಿಸ್ತಾನದಲ್ಲಿ ಬರೋಬ್ಬರಿ $50 ಮಿಲಿಯನ್ (ಸುಮಾರು 415 ಕೋಟಿ ರೂಪಾಯಿ) ಹೂಡಿಕೆ ಮಾಡಿದ್ದು, ನೂರಾರು ಸ್ಥಳೀಯರಿಗೆ ಉದ್ಯೋಗ ನೀಡಿ ಕತ್ತೆ ಸಂಸ್ಕರಣಾ ಘಟಕವನ್ನು ಆರಂಭಿಸಿದೆ.

ಪ್ರತಿದಿನ ನೂರಾರು ಕತ್ತೆಗಳ ಮಾರಣಹೋಮ!

ಬಲೂಚಿಸ್ತಾನದ ಗ್ವಾದರ್ ಬಳಿ ‘ಹ್ಯಾಂಗೆಂಗ್ ಗ್ರೂಪ್ ಪಾಕಿಸ್ತಾನ್’ (Hangeng Group Pakistan) ಎಂಬ ಚೀನಿ ಆಡಳಿತದ ಕಂಪನಿಯು ಅತ್ಯಾಧುನಿಕ ಕಸಾಯಿಖಾನೆಯನ್ನು ತೆರೆದಿದೆ. ಇಲ್ಲಿ ಪ್ರತಿದಿನ ನೂರಾರು ಕತ್ತೆಗಳನ್ನು ಕೊಂದು, ಅವುಗಳ ಚರ್ಮ ಹಾಗೂ ಮಾಂಸವನ್ನು ರಫ್ತಿಗಾಗಿ ಸಂಸ್ಕರಿಸಲಾಗುತ್ತಿದೆ. ಸದ್ಯದಲ್ಲೇ ಈ ಘಟಕದಲ್ಲಿ ದಿನಕ್ಕೆ ಬರೋಬ್ಬರಿ 800 ಕತ್ತೆಗಳನ್ನು ವಧೆ ಮಾಡುವ ಬೃಹತ್ ಯೋಜನೆ ಹೊಂದಲಾಗಿದೆ. ಈ ಘಟಕದಲ್ಲಿ ಒಂಬತ್ತು ಚೀನೀ ಮ್ಯಾನೇಜರ್‌ಗಳು ಮತ್ತು ಸುಮಾರು 500 ಸ್ಥಳೀಯ ಪಾಕಿಸ್ತಾನಿ ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಚೀನಾಕ್ಕೆ ಕತ್ತೆಗಳೇ ಏಕೆ ಬೇಕು? 'ಎಜಿಯಾವೊ' ಕೌತುಕ!

ಈ ಭಾರಿ ವ್ಯಾಪಾರದ ಹಿಂದೆ ಕೇವಲ ಕತ್ತೆ ಮಾಂಸದ ಬೇಡಿಕೆ ಮಾತ್ರವಿಲ್ಲ. ಚೀನಾದಲ್ಲಿ ಕತ್ತೆ ಮಾಂಸವನ್ನು ಸೇವಿಸಲಾಗುತ್ತದೆಯಾದರೂ, ನಿಜವಾದ ಬೇಡಿಕೆ ಇರುವುದು ಕತ್ತೆಯ ಚರ್ಮಕ್ಕೆ! ಕತ್ತೆಯ ಚರ್ಮವನ್ನು ಗಂಟೆಗಟ್ಟಲೆ ಕುದಿಸಿ, ಅದರಿಂದ ಕಾಲಜನ್ (Collagen) ಹೊರತೆಗೆದು ‘ಎಜಿಯಾವೊ’ (Ejiao) ಎಂಬ ವಿಶೇಷ ಜೆಲಾಟಿನ್ ತಯಾರಿಸಲಾಗುತ್ತದೆ. ಈ ‘ಎಜಿಯಾವೊ’ ಅನ್ನು ಸಾಂಪ್ರದಾಯಿಕ ಚೀನೀ ಔಷಧಿಗಳಲ್ಲಿ ಹಾಗೂ ಅತ್ಯಂತ ದುಬಾರಿ ಸೌಂದರ್ಯ ವರ್ಧಕ (Cosmetic) ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಆಫ್ರಿಕಾ ಬ್ಯಾನ್ ಮಾಡಿದ್ದಕ್ಕೆ ಪಾಕಿಸ್ತಾನದತ್ತ ಚೀನಾ ಕಣ್ಣು!

ಚೀನಾದಲ್ಲಿ ಎಜಿಯಾವೊಗೆ ಇರುವ ಭಾರಿ ಬೇಡಿಕೆಯಿಂದಾಗಿ ಅಲ್ಲಿನ ಸ್ವಂತ ಕತ್ತೆಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿತು. ಇದರಿಂದಾಗಿ ಚೀನಾ ವಿದೇಶಗಳಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಶುರುಮಾಡಿತು. ಆರಂಭದಲ್ಲಿ ಆಫ್ರಿಕಾ ಖಂಡವು ಚೀನಾಕ್ಕೆ ಪ್ರಮುಖ ಕತ್ತೆ ಪೂರೈಕೆದಾರನಾಗಿತ್ತು. ಆದರೆ 2024ರಲ್ಲಿ 'ಆಫ್ರಿಕನ್ ಯೂನಿಯನ್' ಇಡೀ ಖಂಡದಾದ್ಯಂತ ಚರ್ಮಕ್ಕಾಗಿ ಕತ್ತೆಗಳ ವಧೆ ಹಾಗೂ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಿತು. ಹೀಗಾಗಿ ಕತ್ತೆಗಳಿಗಾಗಿ ಪರದಾಡುತ್ತಿದ್ದ ಚೀನಿಯರಿಗೆ ಪಾಕಿಸ್ತಾನ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾಗಳು ಹೊಸ ಹೆಬ್ಬಾಗಿಲಾಗಿ ಕಂಡವು.

60 ಲಕ್ಷ ಕತ್ತೆಗಳಿರುವ ಪಾಕಿಸ್ತಾನಕ್ಕೆ ಇದು 'ಡಾಲರ್' ತರುವ ಉದ್ಯಮ!

ಪಾಕಿಸ್ತಾನದ 2025-26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ಕತ್ತೆಗಳಿವೆ. ಪಾಕಿಸ್ತಾನ ಸರ್ಕಾರವು ಚೀನಾದ ಈ ವಿಚಿತ್ರ ಬೇಡಿಕೆಯನ್ನು ವಿದೇಶಿ ವಿನಿಮಯ ಗಳಿಸುವ ದೊಡ್ಡ ಅವಕಾಶವಾಗಿ ಕಂಡುಕೊಂಡಿದೆ.

ವಿಶೇಷ ತಳಿ ಸಾಕಣೆ; ಕೆಲಸ ಮಾಡುವ ಕತ್ತೆಗಳ ಸಂಖ್ಯೆ ಸಂಪೂರ್ಣವಾಗಿ ಖಾಲಿಯಾಗಬಾರದೆಂದು, ಗ್ವಾದರ್ ಮುಕ್ತ ವಲಯಕ್ಕೆ (Free Zone) ಮಾತ್ರ ಈ ಕಸಾಯಿಖಾನೆಗಳನ್ನು ಸೀಮಿತಗೊಳಿಸಲಾಗಿದೆ ಮತ್ತು ಕತ್ತೆ ಸಾಕಣೆ ಕೇಂದ್ರಗಳನ್ನು (Breeding Farms) ಪ್ರೋತ್ಸಾಹಿಸಲಾಗುತ್ತಿದೆ.

ಆಹಾರ ಭದ್ರತೆ; ಈ ಕತ್ತೆ ಮಾಂಸವು ಯಾವುದೇ ಕಾರಣಕ್ಕೂ ಪಾಕಿಸ್ತಾನದ ಸ್ಥಳೀಯ ಆಹಾರ ವ್ಯವಸ್ಥೆಗೆ ಸೇರದಂತೆ ಕಟ್ಟುನಿಟ್ಟಿನ ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ವಿಧಿಸಲಾಗಿದೆ.

ಕೋಟಿ ಕೋಟಿ ಹರಿಯಲಿದೆ ಡಾಲರ್ ಹದಿನೈದು!

ಈಗಾಗಲೇ ವಾಣಿಜ್ಯ ರಫ್ತು ಶುರುವಾಗಿದ್ದು, ಜುಲೈನಲ್ಲಿ ಗ್ವಾದರ್‌ನಿಂದ ಹೊರಟ ಮೊದಲ ಕತ್ತೆ ಮಾಂಸದ ರವಾನೆ ಚೀನಾದ ಟಿಯಾಂಜಿನ್ ಬಂದರನ್ನು ತಲುಪಿದೆ. ಆರಂಭದಲ್ಲೇ ಸುಮಾರು USD 1,95,000 ಮೌಲ್ಯದ ಹೆಪ್ಪುಗಟ್ಟಿದ ಮಾಂಸ ಮತ್ತು ಚರ್ಮ ರಫ್ತಾಗಿದೆ. ಹ್ಯಾಂಗೆಂಗ್ ಕಂಪನಿಯ ಸಿಇಒ ಆಂಡಿ ಲಿಯಾವೊ ನೀಡಿರುವ ಮಾಹಿತಿಯ ಪ್ರಕಾರ, ಮುಂದಿನ 6 ತಿಂಗಳಲ್ಲಿ ಈ ಉದ್ಯಮದಿಂದ ಪಾಕಿಸ್ತಾನಕ್ಕೆ ತಿಂಗಳಿಗೆ $5 ಮಿಲಿಯನ್ ಮತ್ತು 2 ವರ್ಷಗಳಲ್ಲಿ ತಿಂಗಳಿಗೆ $7 ಮಿಲಿಯನ್ ವಿದೇಶಿ ವಿನಿಮಯ ಹರಿದುಬರಲಿದೆ. ಪಾಕಿಸ್ತಾನದಲ್ಲಿ ಇಷ್ಟು ದಿನ ಸಾಧಾರಣವಾಗಿ ಬೊರೆ ಹೊರಲು ಬಳಕೆಯಾಗುತ್ತಿದ್ದ ದುಡಿಯುವ ಕತ್ತೆ, ಇವತ್ತು ಆ ದೇಶದ ಪಾಲಿಗೆ ವಿದೇಶಿ ಡಾಲರ್ ತಂದುಕೊಡುವ 'ಅಪರೂಪದ ಸರಕಾಗಿ' ಬದಲಾಗಿದೆ!

PREV
Read more Articles on
click me!

Recommended Stories

ಒಂದೇ ದಿನ ಎರಡು ವಿಚಿತ್ರ ಪ್ರಕರಣ: ಪತ್ನಿಯರಿಂದ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದ ಇಬ್ಬರು ಪತಿರಾಯರು!
IAS: ಅಸ್ಸಲಾಮು ಅಲೈಕುಮ್ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿಗೆ ಟ್ರಾನ್ಸಫರ್‌ ಶಾಕ್! ದಂಗಾದ ಸೋಶಿಯಲ್‌ ಮೀಡಿಯಾ!