IAS: ಅಸ್ಸಲಾಮು ಅಲೈಕುಮ್ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿಗೆ ಟ್ರಾನ್ಸಫರ್‌ ಶಾಕ್! ದಂಗಾದ ಸೋಶಿಯಲ್‌ ಮೀಡಿಯಾ!

Published : Sep 16, 2026, 05:21 PM IST
IPS Officer

ಸಾರಾಂಶ

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ವಿಡಿಯೋದಲ್ಲಿ 'ಅಸ್ಸಲಾಮು ಅಲೈಕುಮ್' ಪದ ಬಳಸಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಹಿಂದೂ ಬಲಪಂಥೀಯ ಸಂಘಟನೆಯ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.

ಯುಪಿಎಸ್‍ಸಿ (UPSC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಲು ಹೋದ ಪಶ್ಚಿಮ ಬಂಗಾಳ ಕೆಡರ್‌ನ ಐಪಿಎಸ್ ಅಧಿಕಾರಿಯೊಬ್ಬರು ಈಗ ಭಾರಿ ವಿವಾದಕ್ಕೆ ಸಿಲುಕಿದ್ದಾರೆ. ವೀಡಿಯೊ ಒಂದರಲ್ಲಿ ಅವರು ಬಳಸಿದ ಕೆಲವೇ ಕೆಲವು ಧಾರ್ಮಿಕ ಆಶಯದ ಶಬ್ದಗಳು ಅವರ ಹುದ್ದೆಗೇ ಕಂಟಕವಾಗಿ ಪರಿಣಮಿಸಿದ್ದು, ಖರಗ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಡಿಷನಲ್ ಎಸ್‌ಪಿ) ಹುದ್ದೆಯಲ್ಲಿದ್ದ ಬುಷ್ರಾ ಬಾನೋ ಅವರನ್ನು ತಡರಾತ್ರಿ ದಿಢೀರನೆ ವರ್ಗಾವಣೆ ಮಾಡಲಾಗಿದೆ.

ವಿವಾದದ ಅಸಲಿ ಹಿನ್ನೆಲೆಯೇನು?

ಖರಗ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರು, ಸೋಷಿಯಲ್ ಮೀಡಿಯಾ 'ಎಕ್ಸ್' (X) ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದರು. ಸೌದಿ ಅರೇಬಿಯಾದಲ್ಲಿ ತಾವು ಮಾಡುತ್ತಿದ್ದ ಬೋಧಕ ವೃತ್ತಿಯನ್ನು ತೊರೆದು, ಪಿಎಚ್‌ಡಿ ಮುಗಿಸಿ ಭಾರತಕ್ಕೆ ಮರಳಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಪಡೆದ ತರಬೇತಿಯ ಬಗ್ಗೆ ಅವರು ಮಾತನಾಡಿದ್ದರು. "ಆ ಅಕಾಡೆಮಿಯಲ್ಲಿ ಸಿಕ್ಕ ಉಚಿತ ಪುಸ್ತಕಗಳು, ಲೈಬ್ರರಿ ಸೌಲಭ್ಯ ಹಾಗೂ ಮಾಕ್ ಟೆಸ್ಟ್‌ಗಳು ನನ್ನ ಐಪಿಎಸ್ ಕನಸಿಗೆ ದೊಡ್ಡ ಬಲ ನೀಡಿದವು. ನನ್ನಂತೆಯೇ ಇನ್ನುಳಿದ ಸಾಮಾನ್ಯ ಹಿನ್ನೆಲೆಯ ವಿದ್ಯಾರ್ಥಿಗಳು ಈ ವೇದಿಕೆಯನ್ನು ಬಳಸಿಕೊಂಡು ಮುಂದೆ ಬರಬೇಕು" ಎಂದು ಅವರು ಕರೆ ನೀಡಿದ್ದರು. ಆದರೆ, ಈ ಪ್ರೇರಣಾದಾಯಿ ವೀಡಿಯೊದ ಆರಂಭದಲ್ಲಿ ಅವರು "ಅಸ್ಸಲಾಮು ಅಲೈಕುಮ್" ಎಂದು ಶುಭಾಶಯ ಕೋರಿ, ಸಂಭಾಷಣೆಯ ನಡುವೆ "ಇನ್ಶಾ ಅಲ್ಲಾಹ್" ಹಾಗೂ ಕೊನೆಯಲ್ಲಿ "ಜಝಕಲ್ಲಾಹ್" ಎಂಬ ಶಬ್ದಗಳನ್ನು ಬಳಸಿದ್ದರು.

ಹಿಂದೂ ಬಲಪಂಥೀಯ ಸಂಘಟನೆಯ ತೀವ್ರ ಆಕ್ಷೇಪ!

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ 'ಹಿಂದೂ ಲೀಗಲ್ ಫಂಡ್' (HLF) ಎಂಬ ಬಲಪಂಥೀಯ ಸಂಘಟನೆಯು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ಅಧಿಕೃತ ದೂರು ನೀಡಿದೆ. "ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಸಂವಹನ ನಡೆಸುವಾಗ 'ವಂದೇ ಮಾತರಂ' ಅಥವಾ 'ಜೈ ಹಿಂದ್' ನಂತಹ ರಾಷ್ಟ್ರೀಯ ಅಭಿವ್ಯಕ್ತಿಗಳನ್ನು ಬಳಸದೆ ಧಾರ್ಮಿಕ ಶಬ್ದಗಳನ್ನು ಬಳಸಿರುವುದು ತಟಸ್ಥತೆಯ ಉಲ್ಲಂಘನೆ. ಐಪಿಎಸ್ ಅಧಿಕಾರಿಯಾಗಿ ದೇಶವನ್ನು ಪ್ರತಿನಿಧಿಸುವವರು ನಿಷ್ಪಕ್ಷಪಾತವಾಗಿರಬೇಕು" ಎಂದು ದೂರಲಾಗಿತ್ತು. ಈ ದೂರು ಬೆನ್ನಲ್ಲೇ ಸೋಮವಾರ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಭುಗಿಲೆದ್ದ ಪರ-ವಿರೋಧದ ಚರ್ಚೆ!

ಈ ವರ್ಗಾವಣೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಸರ್ಕಾರದ ಈ ಕ್ರಮವನ್ನು ಅನೇಕರು ಖಂಡಿಸಿದ್ದರೆ, ಇನ್ನು ಕೆಲವರು ಧಾರ್ಮಿಕ ತಟಸ್ಥತೆಯ ಹೆಸರಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿವಿಲ್ ಸರ್ವೆಂಟ್ ಆಶಿಶ್ ಜೋಶಿ ಬೆಂಬಲ!

ಎರಡು ಬಾರಿ ಯುಪಿಎಸ್‌ಸಿ ಉತ್ತೀರ್ಣರಾಗಿ, ಸೌದಿ ಅರೇಬಿಯಾದ ಆರಾಮದಾಯಕ ಉದ್ಯೋಗ ತೊರೆದು ದೇಶಸೇವೆಗೆ ಬಂದಿರುವ ಬುಷ್ರಾ ಬಾನೋ ಅವರ ಸಾಧನೆ ಮೆಚ್ಚುವಂತದ್ದು. ಭಾರತದ ನಿಜವಾದ ಶಕ್ತಿ ಇರುವುದು ವೈವಿಧ್ಯತೆಯಲ್ಲಿ. ಅವರ ಪದಗಳ ಆಯ್ಕೆಯು ಅವರ ವೈಯಕ್ತಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆಯೇ ವಿನಃ ದೇಶದ ಮೇಲಿನ ನಿಷ್ಠೆಯನ್ನಲ್ಲ. ವೈವಿಧ್ಯಮಯ ದೇಶದಲ್ಲಿ ಈ ಸಹಬಾಳ್ವೆಯೇ ನಮ್ಮ ಹೆಮ್ಮೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಪ್ರಶ್ನೆ ಏನು?

ಇತರ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕವಾಗಿ ತಮ್ಮ ಧಾರ್ಮಿಕ ಘೋಷಣೆಗಳನ್ನು ಕೂಗಿದಾಗ ಅದು ಸ್ವೀಕಾರಾರ್ಹ ಎಂದಾದರೆ, ಶಾಂತಿ ಕೋರುವ 'ಅಸ್ಸಲಾಮು ಅಲೈಕುಮ್' ಎಂದಿದ್ದಕ್ಕೆ ಐಪಿಎಸ್ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಪ್ರಜಾಪ್ರಭುತ್ವದ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಡವೇ? ಎಂದು ನೆಟ್ಟಿಗರೊಬ್ಬರು ನೇರವಾಗಿ ಪ್ರಶ್ನಿಸಿದ್ದಾರೆ. ಸದ್ಯ, ಅಧಿಕಾರಿ ಬುಷ್ರಾ ಬಾನೋ ಅವರ ವರ್ಗಾವಣೆ ಆದೇಶವು ಸರ್ಕಾರಿ ಅಧಿಕಾರಿಗಳ ಸಾರ್ವಜನಿಕ ವ್ಯಕ್ತಿತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಸುತ್ತ ಹೊಸದೊಂದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

PREV
Read more Articles on
click me!

Recommended Stories

ಸಿಎಂ ಯೋಗಿ ಆದಿತ್ಯನಾಥ ಅವರ ಮುಸ್ಲಿಂ ಅಭಿಮಾನಿ ಟ್ಯಾಟೂ ನೋಡಿ ಶಾಕ್! ದೇಶದ ರಾಜಕಾರಣದಲ್ಲಿ ಸಂಚಲನ ಸೃಷ್ಟಿ!
35ರಂತೆ ಕಾಣುವ 75ರ ಚೆಲುವೆ! ಏನೀ ಸೌಂದರ್ಯದ ಗುಟ್ಟು? ಅಮ್ಮನ ಕಥೆ ಕೇಳಿ ಮಗಳೇ ಬೆಚ್ಚಿಬಿದ್ದ ಸ್ಟೋರಿ ಇದು