
ನವದೆಹಲಿ (ಆ.29): ಆನ್‌ಲೈನ್ ಕ್ಯಾಬ್ ಅಗ್ರಿಗೇಟರ್ 'ಓಲಾ' (Ola) ಆ್ಯಪ್ ಮೂಲಕ 6 ಗಂಟೆಗಳ ಅವಧಿಗೆ ಕ್ಯಾಬ್ ಬುಕ್ ಮಾಡಿದ್ದ ಫ್ರೆಂಡ್ಸ್ ಗ್ರೂಪ್‌ಗೆ ಓಲಾ ಭರ್ಜರಿ ಸ್ಕ್ಯಾಮ್ ಮಾಡಿದೆ. ಕೇವಲ 60 ಕಿಲೋಮೀಟರ್ ಪ್ರಯಾಣದ ಬಾಡಿಗೆಗೆ 240 ಕಿ.ಮೀ ಹೆಚ್ಚುವರಿ ಚಾರ್ಜ್ ಸೇರಿಸಿ, ಬರೋಬ್ಬರಿ 5,662 ರೂಪಾಯಿ ಬಿಲ್ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕರು ಎಕ್ಸಿಬಿಷನ್‌ನಲ್ಲಿ ಪಾಲ್ಗೊಳ್ಳಲು ದೆಹಲಿಯ ಮಹಿಪಾಲ್‌ಪುರದಲ್ಲಿದ್ದ ತಮ್ಮ ಹೋಟೆಲ್‌ನಿಂದ ಯಶೋಭೂಮಿಗೆ ತೆರಳಿ, ಅಲ್ಲಿಂದ ನೇರವಾಗಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGI Airport) ತೆರಳಲು ಬೆಳಿಗ್ಗೆ 10 ಗಂಟೆಗೆ 6 ಗಂಟೆಗಳ (60 ಕಿ.ಮೀ limit) ಪ್ಯಾಕೇಜ್‌ನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿದ್ದರು.
ಕ್ಯಾಬ್ ಬುಕ್ ಮಾಡುವ ಸಮಯದಲ್ಲಿ ಮೂಲ ಬಾಡಿಗೆ (Base Fare) 1,285 ರೂಪಾಯಿ ಎಂದು ಆ್ಯಪ್‌ನಲ್ಲಿ ತೋರಿಸಲಾಗಿತ್ತು. ಹೀಗಾಗಿ ಇದರ ಆಸುಪಾಸಿನಲ್ಲೇ ಬಿಲ್ ಬರಬಹುದು ಎಂದು ಪ್ರಯಾಣಿಕರು ಭಾವಿಸಿದ್ದರು. ಯಶೋಭೂಮಿಯಲ್ಲಿ ಎಕ್ಸಿಬಿಷನ್ ಮುಗಿಸಿಕೊಂಡು ಮಧ್ಯಾಹ್ನ 3:45ಕ್ಕೆ ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರಿಗೆ ಚಾಲಕ ನೀಡಿದ ಅಂತಿಮ ಬಿಲ್ ನೋಡಿ ತಲೆತಿರುಗಿದಂತಾಗಿದೆ.
ಆ್ಯಪ್‌ನಲ್ಲಿ ಅಂತಿಮ ಬಿಲ್ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಾಗಿ ಅಂದರೆ 5,662 ರೂಪಾಯಿ ತಲುಪಿತ್ತು! ಬಿಲ್ ರಸೀದಿಯನ್ನು ಪರಿಶೀಲಿಸಿದಾಗ, ಮೂಲ ಪ್ರಯಾಣದ ಜೊತೆಗೆ ಟೋಲ್ ಶುಲ್ಕ ಹಾಗೂ ಬರೋಬ್ಬರಿ 240.5 ಕಿಲೋಮೀಟರ್ ಹೆಚ್ಚುವರಿ ಪ್ರಯಾಣದ ಚಾರ್ಜ್ ಸೇರಿಸಿರುವುದು ಕಂಡುಬಂದಿದೆ. 'ನಾವು ಪ್ರಯಾಣಿಸಿದ್ದು ಕೇವಲ 60 ಕಿ.ಮೀ ವ್ಯಾಪ್ತಿಯಲ್ಲಿ, ಆದರೆ 250 ಕಿ.ಮೀ ಹೆಚ್ಚುವರಿ ಚಾರ್ಜ್ ಹೇಗೆ ಬಂತು ಎಂಬುದು ನಮಗೆ ತಿಳಿಯುತ್ತಿಲ್ಲ' ಎಂದು ಸಂತ್ರಸ್ತ ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಓಲಾ ಗ್ರಾಹಕರ ಸೇವಾ ವಿಭಾಗವನ್ನು (Customer Care) ಸಂಪರ್ಕಿಸಲು ಪ್ರಯಾಣಿಕರು ಯತ್ನಿಸಿದರಾದರೂ, ವಾರಾಂತ್ಯ (Weekend) ಎಂಬ ಕಾರಣಕ್ಕೆ ಯಾವುದೇ ಮಾನವ ಪ್ರತಿನಿಧಿ ಸಿಗದೆ ಪರದಾಡುವಂತಾಯಿತು. ಯಾವುದೇ ಸೂಕ್ತ ಉತ್ತರ ಸಿಗದ ಹಿನ್ನೆಲೆಯಲ್ಲಿ ಬಿಲ್ ರಸೀದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ನೆರವು ಕೋರಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಓಲಾ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನೀವು ಎಕ್ಸಿಬಿಷನ್ ವೀಕ್ಷಿಸಲು ತೆರಳಿದ್ದಾಗ, ಚಾಲಕ ಕಾರನ್ನು ಅಲ್ಲಿಯೇ ಪಾರ್ಕ್ ಮಾಡದೆ ಬೇರೆಡೆ ಸವಾರಿ ನಡೆಸಿರಬಹುದು' ಎಂದು ಒಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.'ನನ್ನ ಜೊತೆಯೂ ದೆಹಲಿ ವಿಮಾನ ನಿಲ್ದಾಣದಲ್ಲಿ ಓಲಾ ನಿಂದ ಇದೇ ರೀತಿಯ ವಂಚನೆಯಾಗಿತ್ತು. ಎಲ್ಲ ವಿವರಗಳನ್ನು ಇಮೇಲ್ ಮಾಡಿ ಹಾಗೂ ಆ್ಯಪ್‌ನ ಸೆಕ್ಯುರಿಟಿ/ಸಪೋರ್ಟ್ ವಿಭಾಗಕ್ಕೆ ಕರೆ ಮಾಡಿ' ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
"ಗೂಗಲ್ ಟೈಮ್‌ಲೈನ್ (Google Timeline) ಸಾಕ್ಷಿಯಾಗಿ ಬಳಸಿ, ನೀವು ಕಾರಿನಲ್ಲಿ ಪ್ರಯಾಣಿಸಿಲ್ಲ ಮತ್ತು ಚಾಲಕ ಫ್ರೀ ರೈಡ್‌ಮಾಡಿದ್ದಾನೆ ಎಂದು ತೋರಿಸಿ ಹಣ ವಾಪಸ್ ಪಡೆಯಿರಿ" ಎಂದು ಇನ್ನೊಬ್ಬ ಯೂಸರ್ ಸಲಹೆ ನೀಡಿದ್ದಾರೆ.