
ಕಳೆದ 10 ವರ್ಷಗಳಿಂದ ಜಪಾನ್‌ನಲ್ಲಿ ವಾಸಿಸುತ್ತಿದ್ದು ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿಪರ ಅಂಕಿತ್ ಪುರೋಹಿತ್ ಹಂಚಿಕೊಂಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಜಪಾನ್‌ನ ಕಚೇರಿ ಸಂಸ್ಕೃತಿ ಹೇಗಿರುತ್ತದೆ ಎಂಬುದನ್ನು ವಿವರಿಸಿರುವ ಅವರ ಅನುಭವ ಸಾವಿರಾರು ಜನರ ಗಮನ ಸೆಳೆದಿದ್ದು, ಅನೇಕರು ಜಪಾನ್‌ನ ಕೆಲಸದ ಶೈಲಿಯನ್ನು ಮೆಚ್ಚಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಅಂಕಿತ್, "ಜಪಾನ್‌ನಲ್ಲಿ ಕೆಲಸ ಸಿಗುವುದು ಅಷ್ಟು ಕಷ್ಟವಲ್ಲ. ಆದರೆ ಅಲ್ಲಿನ ಕಚೇರಿ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ" ಎಂದು ಹೇಳಿದ್ದಾರೆ. ಕಳೆದ ಒಂದು ದಶಕದ ಅನುಭವದ ಆಧಾರದಲ್ಲಿ ಅಲ್ಲಿನ ಕೆಲಸದ ವಾತಾವರಣವನ್ನು ಅವರು ವಿವರಿಸಿದ್ದಾರೆ.
ಅವರ ಪ್ರಕಾರ, ಸಮಯಪಾಲನೆಗೆ ಜಪಾನ್‌ನಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿದೆ. ಬೆಳಗ್ಗೆ 9 ಗಂಟೆಗೆ ಕಚೇರಿ ಆರಂಭವಾದರೆ ಅದಕ್ಕೂ ಮುಂಚೆಯೇ ಸಿಬ್ಬಂದಿ ಹಾಜರಿರುತ್ತಾರೆ. ಕಂಪನಿಯ ಸಿಇಒ ಸಹ ರೈಲಿನಲ್ಲೇ ಕಚೇರಿಗೆ ಬರುತ್ತಾರೆ. ಯಾರು ಕಾರಿನಲ್ಲಿ, ಯಾರು ಬೈಕ್‌ನಲ್ಲಿ ಅಥವಾ ರೈಲಿನಲ್ಲಿ ಬಂದರು ಎನ್ನುವುದಕ್ಕೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ.
ಅವರು ಮತ್ತೊಂದು ವಿಶೇಷ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಊಟದ ವಿರಾಮವನ್ನು ಉದ್ಯೋಗಿಗಳ ವೈಯಕ್ತಿಕ ಸಮಯವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಉದ್ಯೋಗಿಗಳು ಮನೆಯಿಂದ ಊಟ ತರುವ ಬದಲು ಬೆಂಟೊ ಬಾಕ್ಸ್‌ಗಳನ್ನು ಖರೀದಿಸಿ ಊಟ ಮಾಡುತ್ತಾರೆ.
ಜಪಾನ್‌ನ ಕಚೇರಿಗಳಲ್ಲಿ ಲಿಫ್ಟ್ ಹತ್ತಿದಾಗ ವಿಶೇಷ ನಿಯಮವನ್ನು ಪಾಲಿಸ ಬೇಕು. ಲಿಫ್ಟ್‌ನ ಬಟನ್‌ಗಳ ಬಳಿ ನಿಂತಿರುವವರು ಎಲ್ಲರೂ ಹೊರಬರುವವರೆಗೆ ಬಾಗಿಲು ತೆರೆದಿಟ್ಟುಕೊಂಡು ಕೊನೆಯದಾಗಿ ಹೊರಬರುವುದು ಸಾಮಾನ್ಯ ಸಂಪ್ರದಾಯವಾಗಿದೆ.
ಅತ್ಯಂತ ಗಮನ ಸೆಳೆದ ವಿಚಾರವೆಂದರೆ, 15 ನಿಮಿಷ ಹೆಚ್ಚುವರಿ ಕೆಲಸ ಮಾಡಿದರೂ ಅದರ ಸಂಬಳವನ್ನು ಕಂಪನಿಗಳು ನೀಡುತ್ತವೆ. ದಿನದ ಕೆಲಸ ಮುಗಿದ ನಂತರ ಮ್ಯಾನೇಜರ್ ಉದ್ಯೋಗಿಗಳಿಗೆ ಕರೆ ಮಾಡಿ ಕೆಲಸ ಮಾಡುವಂತೆ ಒತ್ತಾಯಿಸುವುದಿಲ್ಲ. ರಜೆ ದಿನಗಳಲ್ಲಿಯೂ ಕೆಲಸದ ಒತ್ತಡ ಇರುವುದಿಲ್ಲ. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲಾಗುತ್ತದೆ.
ವಿಡಿಯೊ ಜೊತೆಗೆ ಬರೆದಿರುವ ಪೋಸ್ಟ್‌ನಲ್ಲಿ ಅಂಕಿತ್, ಜಪಾನ್‌ನಲ್ಲಿ ಕೆಲಸ ಮಾಡುವುದು ಎಂದರೆ ಕೇವಲ ಉದ್ಯೋಗವಲ್ಲ; ಶಿಸ್ತು, ಗೌರವ, ಜವಾಬ್ದಾರಿ ಮತ್ತು ತಂಡದ ಕೆಲಸಕ್ಕೆ ಮೌಲ್ಯ ನೀಡುವ ಸಂಸ್ಕೃತಿಯ ಭಾಗವಾಗುವುದು ಎಂದಿದ್ದಾರೆ.
ಸಮಯಪಾಲನೆ
ವೃತ್ತಿಪರತೆ
ಪರಿಣಾಮಕಾರಿ ಸಂವಹನ
ತಂಡದ ಕೆಲಸ
ಗುಣಮಟ್ಟದ ಕೆಲಸಕ್ಕೆ ಆದ್ಯತೆ
ನಿರಂತರ ಕಲಿಕೆ ಮತ್ತು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು
ಈ ಅಭ್ಯಾಸಗಳು ಕೇವಲ ಉತ್ತಮ ಉದ್ಯೋಗಿಯಾಗಲು ಮಾತ್ರವಲ್ಲ, ಉತ್ತಮ ವ್ಯಕ್ತಿಯಾಗಿ ಬೆಳೆಯಲೂ ಸಹಾಯ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಈ ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಜಪಾನ್‌ನಲ್ಲಿ ಜನರು ಇನ್ನೂ ಪರಸ್ಪರ ಗೌರವಿಸುತ್ತಾರೆ", "ಜಪಾನಿಯರು ಬೇರೆ ಆಯಾಮದ ಜನರಂತೆ ಕಾಣುತ್ತಾರೆ", "ನನಗೂ ಜಪಾನ್‌ನಲ್ಲಿ ಕೆಲಸ ಮಾಡುವ ಆಸೆ ಇದೆ" ಎಂಬಂತಹ ಕಾಮೆಂಟ್‌ಗಳು ಹರಿದುಬಂದಿವೆ.
ಜಪಾನ್‌ನ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗಿಗಳ ಖಾಸಗಿ ಜೀವನಕ್ಕೆ ನೀಡುವ ಗೌರವದ ಕುರಿತು ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.