
₹80 ಲಕ್ಷ ಇದ್ದರೆ ನಿವೃತ್ತಿ ಸಾಧ್ಯವೇ? ನೆಮ್ಮದಿಗಾಗಿ ಸರ್ಕಾರಿ ಕೆಲಸ ತೊರೆಯಲು ನಿರ್ಧರಿಸಿದ 31 ವರ್ಷದ ಮಹಿಳೆ!
ಸಾಮಾನ್ಯವಾಗಿ ಭಾರತದಲ್ಲಿ ಸರ್ಕಾರಿ ಉದ್ಯೋಗ ಅಥವಾ ಸಾರ್ವಜನಿಕ ವಲಯದ (PSU) ಕೆಲಸ ಸಿಕ್ಕರೆ ಜೀವನ ಸೆಟಲ್, ನಿರಾತಂಕ ಜೀವನ ನಮ್ಮದಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ, ಇತ್ತೀಚೆಗೆ 31 ವರ್ಷದ ಪಿಎಸ್‌ಯು ಮಹಿಳಾ ಉದ್ಯೋಗಿಯೊಬ್ಬರು ತಮಗಿರುವ ಭದ್ರತೆಯ ಸರ್ಕಾರಿ ಕೆಲಸವನ್ನು ತೊರೆದು, ನೆಮ್ಮದಿಯ ಜೀವನ ನಡೆಸಲು ನಿರ್ಧರಿಸಿರುವುದು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಬರೋಬ್ಬರಿ ₹80 ಲಕ್ಷದ ಹೂಡಿಕೆ ಅಥವಾ ಉಳಿತಾಯದ ನಿಧಿ (Corpus) ಹೊಂದಿರುವ ಈಕೆ, "ನೆಮ್ಮದಿಗಾಗಿ ಕೆಲಸ ಬಿಡುವುದು ಸರಿಯೇ ಅಥವಾ ಮೂರ್ಖತನವೇ?" ಎಂದು ರೆಡ್ಡಿಟ್‌ನಲ್ಲಿ ಸಲಹೆ ಕೇಳಿದ್ದಾರೆ.
ದಿನದ 10 ಗಂಟೆ ಕೆಲಸ, ಮಧ್ಯರಾತ್ರಿಯಲ್ಲೂ ಕಿರಿಕಿರಿ!
ಕಳೆದ 7 ವರ್ಷಗಳಿಂದ ಪಿಎಸ್‌ಯು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಮಹಿಳೆ, ತಮಗೆ ಯಾವುದೇ ಸಾಲದ (Debt) ಹೊರೆ ಇಲ್ಲ ಹಾಗೂ ತೀರಾ ಸರಳ ಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಇತ್ತೀಚೆಗೆ ಹೊಸ ಇಲಾಖೆಗೆ ವರ್ಗಾವಣೆಯಾದ ಬಳಿಕ ಅವರ ಜೀವನ ನರಕಸದೃಶವಾಗಿದೆ.
ದಿನಕ್ಕೆ 9 ರಿಂದ 10 ಗಂಟೆಗಳ ಕಾಲ ದುಡಿದರೂ ಮ್ಯಾನೇಜ್‌ಮೆಂಟ್‌ನಿಂದ "ನೀನು ಸರಿಯಾಗಿ ಕೆಲಸ ಮಾಡುತ್ತಿಲ್ಲ" ಎಂಬ ಮಾತುಗಳನ್ನೇ ಕೇಳಬೇಕಾಗಿದೆ. ವೀಕೆಂಡ್ (ವಾರಾಂತ್ಯ), ಸರ್ಕಾರಿ ರಜೆ ದಿನಗಳಲ್ಲೂ ಕೆಲಸ ಮಾಡಿಸಲಾಗುತ್ತಿದ್ದು, ಹಲವು ಬಾರಿ ಮಧ್ಯರಾತ್ರಿಯವರೆಗೂ ಆಫೀಸ್ ಕೆಲಸದಲ್ಲೇ ಮುಳುಗಿರಬೇಕಾದ ಪರಿಸ್ಥಿತಿ ಬಂದೊದಗಿದೆ.
ಅನಾರೋಗ್ಯದ ರಜೆಯಲ್ಲೂ ಆಫೀಸ್‌ಗೆ ಕರೆದರು!
ತಮ್ಮ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿರುವ ಆಕೆ, "ನನಗೆ ತೀವ್ರ ಅನಾರೋಗ್ಯವಿದ್ದಾಗಲೂ ಆಫೀಸ್‌ಗೆ ಬರುವಂತೆ ಒತ್ತಾಯಿಸಲಾಯಿತು. ಕೇವಲ ಒಂದು ದಿನದ ಕ್ಯಾಶುಯಲ್ ರಜೆ ತಗೊಂಡರೂ ನೂರಾರು ಪ್ರಶ್ನೆಗಳನ್ನು ಕೇಳಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಕೊನೆಯ ಬಾರಿಗೆ ನಾನು ನೆಮ್ಮದಿಯಾಗಿ ಬ್ರೇಕ್ ತಗೊಂಡಿದ್ದು ಯಾವಾಗ ಅಂತಲೇ ಮರೆತುಹೋಗಿದೆ. ಇನ್ನುಳಿದ 25-30 ವರ್ಷಗಳ ವೃತ್ತಿಜೀವನವನ್ನು ಇಂತಹ ಟಾಕ್ಸಿಕ್ ವಾತಾವರಣದಲ್ಲಿ ಕಳೆಯಲು ನನಗೆ ಸಾಧ್ಯವೇ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಣ್ಣ ನಗರಕ್ಕೆ ಶಿಫ್ಟ್ ಆಗಿ ಸರಳ ಜೀವನದ ಪ್ಲಾನ್!
ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಇಡಲು ಬಯಸಿರುವ ಈಕೆ, ಕೆಲಸ ಬಿಟ್ಟ ನಂತರ ಯಾವುದಾದರೂ 'ಟೈರ್-3' (ಸಣ್ಣ ನಗರ) ನಗರಕ್ಕೆ ಸ್ಥಳಾಂತರಗೊಂಡು ಸರಳ ಜೀವನ ನಡೆಸಲು ಯೋಚಿಸಿದ್ದಾರೆ. ತಮಗಿರುವ ₹80 ಲಕ್ಷ ಹೂಡಿಕೆಯ ಮೇಲಿನ ಬಡ್ಡಿ, ದೀರ್ಘಾವಧಿ ಹೂಡಿಕೆ ಹಾಗೂ ಶಿಸ್ತುಬದ್ಧ ಟ್ರೇಡಿಂಗ್ ಮೂಲಕ ಬರುವ ಆದಾಯದಲ್ಲೇ ಮುಂದಿನ ಜೀವನ ಸಾಗಿಸಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ.
ನೆಟ್ಟಿಗರು ನೀಡಿದ ಸಲಹೆಗಳೇನು?
ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಬಹುತೇಕ ನೆಟ್ಟಿಗರು ಮಹಿಳೆಗೆ ತಕ್ಷಣವೇ ರಾಜೀನಾಮೆ ನೀಡದಂತೆ ಕಿವಿಮಾತು ಹೇಳಿದ್ದಾರೆ.
ದೀರ್ಘಾವಧಿ ರಜೆ ತಗೊಳ್ಳಿ: "ಸದ್ಯಕ್ಕೆ ನೀವು ತೀವ್ರ ಮಾನಸಿಕ ಆಯಾಸಕ್ಕೆ (Burnout) ಒಳಗಾಗಿದ್ದೀರಿ. ಆದ್ದರಿಂದ ತಕ್ಷಣ ಕೆಲಸ ಬಿಡುವ ಬದಲು ವೈದ್ಯಕೀಯ ರಜೆ (Medical Leave) ಅಥವಾ ಕನಿಷ್ಠ 1 ತಿಂಗಳ ದೀರ್ಘ ರಜೆ ತಗೊಂಡು ಪ್ರವಾಸ ಮಾಡಿ. ಮನಸ್ಸು ಶಾಂತವಾದ ಬಳಿಕ ನಿರ್ಧಾರ ತಗೊಳ್ಳಿ" ಎಂದು ಹಲವರು ಸಲಹೆ ನೀಡಿದ್ದಾರೆ.
ಬೌಂಡರಿಗಳನ್ನು ಸೆಟ್ ಮಾಡಿ: "ಮತ್ತೊಬ್ಬ ಬಳಕೆದಾರರು, ಸರ್ಕಾರಿ ನಿಯಮಗಳ ಪ್ರಕಾರ ಮಹಿಳಾ ಉದ್ಯೋಗಿಗಳನ್ನು ಕಚೇರಿ ಸಮಯದ ನಂತರ ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆಯುವಂತಿಲ್ಲ. ಮ್ಯಾನೇಜರ್‌ಗಳ ಮೌಖಿಕ ಆದೇಶಗಳನ್ನು ತಿರಸ್ಕರಿಸಿ, ಲಿಖಿತ ಆದೇಶ ಕೇಳಿ ಬೌಂಡರಿ ಸೆಟ್ ಮಾಡಿ" ಎಂದು ತಿಳಿಸಿದ್ದಾರೆ.
₹80 ಲಕ್ಷ ಸಾಕಾಗಲ್ಲ: 31ನೇ ವಯಸ್ಸಿಗೆ ₹80 ಲಕ್ಷ ನಿವೃತ್ತಿ ನಿಧಿ ತೀರಾ ಕಡಿಮೆ, ಮುಂದಿನ 40 ವರ್ಷಗಳ ಜೀವನ ಸಾಗಿಸಲು ಇದು ಸಾಕಾಗದೇ ಇರಬಹುದು, ಹಾಗಾಗಿ ಆಂತರಿಕ ವರ್ಗಾವಣೆಗೆ (Internal Transfer) ಪ್ರಯತ್ನಿಸಿ ಎಂಬ ಆರ್ಥಿಕ ಸಲಹೆಗಳೂ ಕೇಳಿಬಂದಿವೆ.