
ಖಠ್ಮಂಡು/ನುವಾಕೋಟ್(ಸೆ.1): ನೇಪಾಳದ ತ್ರಿಶೂಲಿ ನದಿ ಉಕ್ಕಿ ಹರಿದು ಭೀಕರ ಜಲಪ್ರಳಯ ಉಂಟಾಗಿ ಸಾವಿರಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ಕ್ಷಣಾರ್ಧದಲ್ಲಿಯೇ ಸಾಲು ಸಾಲು ಕಟ್ಟಡಗಳು, ವಾಹನಗಳು ಮತ್ತು ಜನರ ಆಸ್ತಿಪಾಸ್ತಿಗಳು ನೀರಿನ ರಭಸಕ್ಕೆ ಕೊಚ್ಚಿಹೋದವು. ಆದರೆ ನುವಾಕೋಟ್ ಜಿಲ್ಲೆಯ ಈ ಭೀಕರ ಪ್ರವಾಹದ ಮಧ್ಯೆಯೂ 40 ವರ್ಷ ಹಳೆಯ, ಹಸಿರು ಬಣ್ಣ ಬಳಿದ ಮೂರು ಅಂತಸ್ತಿನ ಮನೆಯೊಂದು ಅಚ್ಚರಿಯ ರೀತಿಯಲ್ಲಿ ಅಖಂಡವಾಗಿ ನಿಂತಿತ್ತು. ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಅತ್ಯಂತ ಬೆರಗುಗೊಳಿಸುವ ದೃಶ್ಯವಾಗಿ ಈ ಮನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಮನೆಯ ಮಾಲೀಕ ಪ್ರಕಾಶ್ ಅವರಿಗೆ ಇದು ಪವಾಡಕ್ಕಿಂತ ಕಡಿಮೆಯೇನಲ್ಲ. ಪ್ರವಾಹದ ನೀರು ಮನೆಯನ್ನು ಆವರಿಸಿ, ಮೇಲಿನ ಮಹಡಿಗಳತ್ತ ಏರತೊಡಗಿದಾಗ ಜೀವನ ಮುಗಿಯಿತೆಂದೇ ಅವರು ಭಾವಿಸಿದ್ದರು. "ನಮ್ಮ ಜೀವನದ ಕೊನೆಯ ಕ್ಷಣಗಳು ಇವೇ ಇರಬಹುದು ಎಂದು ಅನಿಸಿದಾಗ ಮನಸ್ಸಿನಲ್ಲಿ ಏನು ಯೋಚಿಸಲು ಸಾಧ್ಯ? ಬಹುಶಃ ನಮ್ಮ ಆಯುಷ್ಯ ಮುಗಿಯಿತು ಎಂದೇ ನಾನು ಭಾವಿಸಿದ್ದೆ" ಎಂದು ಪ್ರಕಾಶ್ ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನೊಂದೆಡೆ ಪ್ರಕಾಶ್ ಅವರ ಪತ್ನಿ ಲಕ್ಷ್ಮೀ ಪಾಂಡೆ, ಇದೆಲ್ಲವೂ ದೇವರ ಕೃಪೆ ಎಂದು ಹೇಳಿದ್ದಾರೆ. ಪ್ರತಿ ದಿನ ನಾವು ದೇವರನ್ನು ಪೂಜೆ ಮಾಡುತ್ತೇವೆ. ದೇವರ ಮೇಲೆ ನಂಬಿಕೆಯಿಟ್ಟು ಪೂಜೆ ಮಾಡುತ್ತೇವೆ. ಅದೇ ಕಾರಣಕ್ಕಾಗಿ ದೇವರು ನಮ್ಮನ್ನು ಕಾಪಾಡಿದ್ದಾನೆ. ನಾವು ನೀರಿನ ನಡುವೆ ಸಿಕ್ಕಿಹಾಕಿಕೊಂಡಾಗ ಪ್ರತಿ ಕ್ಷಣ ಕೂಡ ನಾನು 'ಓಂ ನಮಃ ಶಿವಾಯ' ಎಂದೇ ಹೇಳುತ್ತಿದ್ದೆ. ಪ್ರತಿ ದಿನ ಪೂಜೆ ಮಾಡುವಾಗ ನಾನು ಹನುಮಾನ್ ಚಾಲೀಸಾವನ್ನು ಓದುತ್ತೇವೆ. ಆ ದಿನವೂ ಕೂಡ ಹನುಮಾನ್ ಚಾಲೀಸಾ ಓದಿಯೇ ಅಂಗಡಿಗೆ ಹೋಗಿದ್ದೆ. ನಮ್ಮನ್ನು ರಕ್ಷಿಸುವಲ್ಲಿ ಭಗವಂತನೇ ಕೃಪೆಯೇ ಹೆಚ್ಚು ಎಂದು ಹೇಳಿದ್ದಾರೆ.
ನೀರು ನಿರಂತರವಾಗಿ ಏರುತ್ತಿದ್ದಂತೆ ಕುಟುಂಬಸ್ಥರು ಮೇಲಿನ ಮಹಡಿಗಳತ್ತ ಓಡಬೇಕಾಯಿತು. ಪ್ರಕಾಶ್ ತಮ್ಮ ಹತ್ತಿರದ ಅಂಗಡಿಯಲ್ಲಿದ್ದಾಗ ನೀರು ಏರುತ್ತಿರುವ ಬಗ್ಗೆ ಅಲರ್ಟ್ ಸಿಕ್ಕಿತ್ತು. ತಕ್ಷಣ ಮನೆಗೆ ಓಡಿಬಂದ ಅವರು ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು. ಆದರೆ ಪರಿಸ್ಥಿತಿ ನಿಮಿಷಗಳಲ್ಲಿ ಕೈಮೀರಿತು. ಹೊರಗೆ ಬಂದು ನೋಡಿದಾಗ ತಮ್ಮ ವಾಹನ ನೀರಿನ ರಭಸಕ್ಕೆ ಉರುಳಿ ಬೀಳುತ್ತಿರುವುದು ಕಂಡುಬಂದಿದೆ. ತಕ್ಷಣ ಅವರು ಮತ್ತೆ ಮನೆ ಒಳಗೆ ಧಾವಿಸಿದರು.
ಆಗ ಮನೆಯಲ್ಲಿ ಪ್ರಕಾಶ್ ಸೇರಿದಂತೆ ಕುಟುಂಬದ ಐವರು ಸದಸ್ಯರಿದ್ದರು. ಅವರೆಲ್ಲರೂ ಮೊದಲು 4ನೇ ಮಹಡಿಗೆ ಹೋದರು. ಆದರೆ ನೀರು ಅಲ್ಲಿಗೂ ತಲುಪಿದಾಗ, ಕಟ್ಟಡದ ತುದಿಯ ಅತ್ಯಂತ ಮೇಲ್ಭಾಗದ ಮೇಲ್ಛಾವಣಿಗೆ ಏರಬೇಕಾಯಿತು. ಈ ಎಲ್ಲಾ ಗೊಂದಲಗಳ ನಡುವೆ, ಶಾಲೆಗೆ ಹೋಗಿದ್ದ ತಮ್ಮ ಮಗನ ಬಗ್ಗೆ ಪ್ರಕಾಶ್ ತೀವ್ರವಾಗಿ ಚಿಂತಿತರಾಗಿದ್ದರು. "ಎಲ್ಲರೂ ಒಂದೆಡೆ ಇದ್ದೆವು, ಆದರೆ ಮಗ ಶಾಲೆಯಲ್ಲಿದ್ದ. ನಮಗೆ ಏನಾದರೂ ಆದರೆ ಅವನ ಕಥೆ ಏನು ಎಂಬ ಯೋಚನೆಯೇ ನನ್ನನ್ನು ಕಾಡುತ್ತಿತ್ತು" ಎಂದು ಅವರು ನೆನಪಿಸಿಕೊಂಡಿದ್ದಾರೆ.
Laxmi Pandey, owner of the viral 'miracle house' that survived the disastrous Nepal floods:
I prayed to Lord Shiva and i recite Hanuman Chalisa daily! That day i recited hanuman chalisa! I feel god protected our house!
And now, Barkha Dutt is devastated!pic.twitter.com/b9K5lfSzT3— Keh Ke Peheno (@coolfunnytshirt) September 1, 2026
ಸುತ್ತಮುತ್ತಲಿನ ಹೊಸ ಕಟ್ಟಡಗಳು ಕೊಚ್ಚಿಹೋದರೂ ಈ ಹಸಿರು ಬಣ್ಣದ ಮನೆ ಹೇಗೆ ಉಳಿಯಿತು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಇದರ ಯಶಸ್ಸನ್ನು ಪ್ರಕಾಶ್ ಅವರು ಮನೆಯ ಗಟ್ಟಿಮುಟ್ಟಾದ ಅಡಿಪಾಯ ಮತ್ತು ನಿರ್ಮಾಣದ ಗುಣಮಟ್ಟಕ್ಕೆ ನೀಡುತ್ತಾರೆ.'ಇದು ಸುಮಾರು 40 ವರ್ಷ ಹಳೆಯ ಮನೆ. ಆ ಕಾಲದಲ್ಲಿದ್ದ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳ ಗುಣಮಟ್ಟ ಅತ್ಯುತ್ತಮವಾಗಿತ್ತು. ಜೊತೆಗೆ ಮನೆ ನದಿಯ ತೀರಾ ಹತ್ತಿರದಲ್ಲಿದ್ದ ಕಾರಣ ನಾವು ಅಡಿಪಾಯವನ್ನು ಗಟ್ಟಿಗೊಳಿಸಲು ಭಾರಿ ಹಣ ವ್ಯಯಿಸಿದ್ದೆವು. ಸುರಕ್ಷತೆಯ ದೃಷ್ಟಿಯಿಂದ ಅಡಿಪಾಯದ ಕೆಳಗೆ ಎರಡರಿಂದ ಮೂರು ಪದರಗಳ ರೋಡ್ ಮೆಟೀರಿಯಲ್ ಬಳಸಿ ಗಟ್ಟಿ ಮಾಡಿದ್ದೆವು," ಎಂದು ಪ್ರಕಾಶ್ ವಿವರಿಸಿದ್ದಾರೆ.
ಮನೆಯ ಮಾಲೀಕರಾದ ಲಕ್ಷ್ಮಿ ಪಾಂಡೆ ಅವರು, "ನಮಗೆ ಇದು ಎರಡನೇ ಜನ್ಮ ಸಿಕ್ಕಂತೆ ಭಾಸವಾಗುತ್ತಿದೆ. ಹಿಂದೆ ನೇಪಾಳ ಭೂಕಂಪ ಸಂಭವಿಸಿದಾಗಲೂ ಭಾರಿ ಕಂಪನವಾಗಿ ಸುತ್ತಮುತ್ತಲಿನ ಮನೆಗಳು ಬಿದ್ದಿದ್ದವು. ಆಗಲೂ ನೆರೆಹೊರೆಯವರು ನಮ್ಮನ್ನು ರಕ್ಷಿಸಿದ್ದರು" ಎಂದು 'ಎಎನ್ಐ'ಗೆ ತಿಳಿಸಿದ್ದಾರೆ.
ಕುಟುಂಬಸ್ಥರು ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಕಾಲ ಸಾವಿನ ನಡುವೆ ಹೋರಾಡುತ್ತಾ ಮನೆಯ ಮೇಲ್ಛಾವಣಿಯಲ್ಲೇ ಸಿಲುಕಿದ್ದರು. ನೀರಿನ ಮಟ್ಟ ಕೊಂಚ ಕಡಿಮೆಯಾಗುತ್ತಿದ್ದಂತೆ, ಹತ್ತಿರದ ಟೋಲ್ ಪ್ರದೇಶದಲ್ಲಿದ್ದ ಸಾರ್ವಜನಿಕರು ರಕ್ಷಣೆಗೆ ಬಂದರು. ಕಟ್ಟಡಗಳ ನಡುವೆ ದೊಡ್ಡ ಪೈಪ್ ಒಂದನ್ನು ಇಟ್ಟು, ಹಗ್ಗದ ಸಹಾಯದಿಂದ ಪ್ರಕಾಶ್ ಅವರ ಕುಟುಂಬವನ್ನು ಸುರಕ್ಷಿತವಾಗಿ ಪಾರುಮಾಡಲಾಯಿತು.
ಮನೆಯ ಕೆಳಮಹಡಿಯಲ್ಲಿದ್ದ ಗೋದಾಮು ಹಾಗೂ ದಿನಸಿ ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಎರಡು ವಾಹನಗಳು, ಬೈಕ್‌ಗಳು ಹಾಗೂ ಸ್ಕೂಟರ್‌ಗಳು ನೀರಿನಲ್ಲಿ ಕೊಚ್ಚಿಹೋಗಿವೆ. "ಆಸ್ತಿಪಾಸ್ತಿ, ಅಂಗಡಿಯ ಸಾಮಗ್ರಿಗಳು ಕೊಚ್ಚಿಹೋಗಿವೆ ಅಥವಾ ಮಣ್ಣಿನಲ್ಲಿ ಹೂತುಹೋಗಿವೆ. ಆದರೆ ನನ್ನ ಕುಟುಂಬದ ಪ್ರತಿಯೊಬ್ಬರೂ ಜೀವಂತವಾಗಿದ್ದಾರೆ. ಸದ್ಯ ನಾವು ಖಠ್ಮಂಡುವಿನಲ್ಲಿ ತಂಗಿದ್ದೇವೆ," ಎಂದಿದ್ದಾರೆ ಪ್ರಕಾಶ್.
ನುವಾಕೋಟ್‌ನಿಂದ ರಸುವಾ ಕಡೆಗೆ ಹೋಗುವ ಮಾರ್ಗದಲ್ಲಿ ನಿಂತಿರುವ ಈ ಹಸಿರು ಮನೆ ಈಗ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನ ತಲುಪುವ ಸ್ಥಳದಿಂದ 1.25 ಕಿ.ಮೀ ನಡೆದೇ ಸಾಗಬೇಕಾದ ಪರಿಸ್ಥಿತಿಯಿದೆ. ಸದ್ಯ ನೇಪಾಳ ಸೈನ್ಯವು ಈ ಭಾಗದಲ್ಲಿ ಸುದೀರ್ಘ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಪ್ರತಿಯೊಂದನ್ನೂ ಕಳೆದುಕೊಂಡಿದ್ದರೂ ಪ್ರಕಾಶ್ ಕುಟುಂಬ, "ನಾವು ಮತ್ತೆ ಶೂನ್ಯದಿಂದ ಜೀವನ ಕಟ್ಟಿಕೊಳ್ಳುತ್ತೇವೆ" ಎಂಬ ದೃಢ ನಿರ್ಧಾರ ತಳೆದಿದೆ.