
ವಯಸ್ಸು ಎನ್ನುವುದು ಸಾಧನೆಗೆ ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು 91 ವರ್ಷದ ವೃದ್ಧರೊಬ್ಬರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಮೆರಿಕದ 91 ವರ್ಷ ವಯಸ್ಸಿನ ಡೇಲ್ ಸ್ಯಾಂಡರ್ಸ್ (Dale Sanders) ಅವರು ಬರೋಬ್ಬರಿ 2,193 ಮೈಲುಗಳ (ಸುಮಾರು 3,530 ಕಿ.ಮೀ) ಕಠಿಣ 'ಅಪ್ಪಲಾಚಿಯನ್ ಟ್ರೇಲ್' (Appalachian Trail) ಹೈಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ವಿಶ್ವದ ಅತ್ಯಂತ ಹಿರಿಯ ಹೈಕರ್ ಎಂಬ ತಮ್ಮ ದಾಖಲೆಯನ್ನು ಅವರು ಮರುಸ್ಥಾಪಿಸಿದ್ದಾರೆ.
ಸಾಹಸಿಗಳಿಗೆ ಅತ್ಯಂತ ಕಠಿಣ ಸವಾಲೆನಿಸಿರುವ ಈ ಸುದೀರ್ಘ ಪಯಣದಲ್ಲಿ ಡೇಲ್ ಸ್ಯಾಂಡರ್ಸ್ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಹೈಕಿಂಗ್ ಮಾಡುವಾಗ ಅವರು ಒಟ್ಟು 71 ಬಾರಿ ಬಿದ್ದಿದ್ದಾರೆ! ಅದರಲ್ಲಿ ಆರು ಬಾರಿ ತೀವ್ರ ಸ್ವರೂಪದ ಪೆಟ್ಟುಗಳಾಗಿದ್ದು, ಒಂದು ಬಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು. ಅಷ್ಟೇ ಅಲ್ಲದೆ, ಪಯಣ ಮುಗಿಯಲು ಕೇವಲ 200 ಯಾರ್ಡ್‌ಗಳಷ್ಟು ದೂರವಿರುವಾಗಲೂ ಅವರು ಮತ್ತೊಮ್ಮೆ ಬಿದ್ದಿದ್ದರು. ಇಷ್ಟೆಲ್ಲಾ ಅಡೆತಡೆಗಳಿದ್ದರೂ ಅವರು ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ.
ಟ್ರೇಲ್‌ನಲ್ಲಿ ಎಲ್ಲರೂ ಇವರನ್ನು ಪ್ರೀತಿಯಿಂದ 'ಗ್ರೇ ಬೀಯರ್ಡ್' (Grey Beard) ಎಂದು ಕರೆಯುತ್ತಾರೆ. ಮೇನ್ (Maine) ರಾಜ್ಯದ ಮೌಂಟ್ ಕಟಾಡಿನ್ (Mount Katahdin) ನುಶಿಖರವನ್ನು ತಲುಪುವ ಮೂಲಕ ಸೋಮವಾರ ತಮ್ಮ ಸುದೀರ್ಘ ಪಯಣವನ್ನು ಪೂರ್ಣಗೊಳಿಸಿದರು. ಶಿಖರ ತಲುಪಿದ ಬಳಿಕ ಅವರು ಮೊದಲು ದೇವರನ್ನು ಪ್ರಾರ್ಥಿಸಿ, ತಮ್ಮನ್ನು ಬೆಂಬಲಿಸಿದ ತಂಡಕ್ಕೆ ಧನ್ಯವಾದ ತಿಳಿಸಿದರು.
1935ರಲ್ಲಿ ಕೆಂಟುಕಿ (Kentucky) ಯಲ್ಲಿ ಜನಿಸಿದ ಡೇಲ್ ಸ್ಯಾಂಡರ್ಸ್ ಬಾಲ್ಯದಲ್ಲಿ ಸಣ್ಣಗಿದ್ದ ಕಾರಣಕ್ಕೆ ಇತರರಿಂದ ಚುಡಾಯಿಸಲ್ಪಟ್ಟಿದ್ದರು. ನಂತರ ಈಜು ಮತ್ತು ಅಕ್ರೋಬ್ಯಾಟಿಕ್ಸ್ ಮೂಲಕ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಅಮೆರಿಕದ ನೌಕಾಪಡೆಯಲ್ಲೂ ಸೇವೆ ಸಲ್ಲಿಸಿರುವ ಇವರು, ತಮ್ಮ 87ನೇ ಹುಟ್ಟುಹಬ್ಬದಂದು ಮಿಸ್ಸಿಸ್ಸಿಪ್ಪಿ ನದಿಯನ್ನು ಸಂಪೂರ್ಣವಾಗಿ ದೋಡಿಯಲ್ಲಿ (Paddle) ಕ್ರಮಿಸಿ ದಾಖಲೆ ಬರೆದಿದ್ದರು.
91ನೇ ವಯಸ್ಸಿನಲ್ಲಿ, 71 ಬಾರಿ ಬಿದ್ದು, ಆಸ್ಪತ್ರೆಗೆ ತೆರಳಿ, ಸಾವಿರಾರು ಕಿಲೋಮೀಟರ್‌ಗಳ ಕಠಿಣ ದಾರಿಯನ್ನು ಕ್ರಮಿಸಿ ಮೌಂಟ್ ಕಟಾಡಿನ್ ಶಿಖರ ತಲುಪಿರುವ ಡೇಲ್ ಸ್ಯಾಂಡರ್ಸ್, ಜಗತ್ತಿನ ಕೋಟ್ಯಂತರ ಜನರಿಗೆ 'ಛಲವಿದ್ದರೆ ವಯಸ್ಸು ಯಾವತ್ತಿಗೂ ಅಡ್ಡಿಯಾಗದು' ಎಂಬುದಕ್ಕೆ ಅಪ್ಪಟ ಸ್ಪೂರ್ತಿಯಾಗಿದ್ದಾರೆ.