
ಮುಂಬೈನಂತಹ ಕಾಸ್ಟ್‌ಲಿ ನಗರದಲ್ಲಿ, ತಾನು ತಿಂಗಳಿಗೆ ₹18,000ಕ್ಕಿಂತ ಕಡಿಮೆ ಖರ್ಚಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದು, ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮುಂಬೈನಲ್ಲಿ ಜೀವನ ನಡೆಸುವುದು ಎಷ್ಟು ದುಬಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಈ ಯುವತಿಯ ಮಾತು ಕೇಳಿ ಹಲವರು ಅಚ್ಚರಿಗೊಂಡಿದ್ದಾರೆ. Instagram ನಲ್ಲಿ ಶ್ರೇಯಾ ಗಣ್ ಎಂಬ ಈ ಯುವತಿ, ತನ್ನ ತಿಂಗಳ ಖರ್ಚಿನ ವಿವರಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಅವರು, 'ಬನ್ನಿ, ಮುಂಬೈನಲ್ಲಿ ಒಬ್ಬಳೇ ವಾಸಿಸುತ್ತಿರುವ ನನ್ನ ತಿಂಗಳ ಖರ್ಚು ಎಷ್ಟು ಅಂತ ಇವತ್ತು ಹೇಳ್ತೀನಿ. ನಾನು 1RK ಬಾಡಿಗೆ ಮನೆಯಲ್ಲಿದ್ದೇನೆ, ಅದರ ಬಾಡಿಗೆ ₹11,500. ಕರೆಂಟ್ ಬಿಲ್ ಸುಮಾರು ₹300 ರಿಂದ ₹400 ಆಗುತ್ತೆ. ಮೊಬೈಲ್ ರೀಚಾರ್ಜ್‌ಗೆ ₹300. ಆಫೀಸ್‌ಗೆ ಹೋಗಿ ಬರಲು ಲೋಕಲ್ ಟ್ರೈನ್ ಬಳಸುತ್ತೇನೆ, ಕೆಲವೊಮ್ಮೆ ಆಟೋ-ಟ್ಯಾಕ್ಸಿ ಸೇರಿ ಸುಮಾರು ₹500 ಖರ್ಚಾಗುತ್ತೆ. ದಿನಸಿ ಸಾಮಾನುಗಳಿಗೆ ₹1500 ರಿಂದ ₹1800, ಹಾಗೇ ಸ್ವಲ್ಪ ಆನ್‌ಲೈನ್ ಶಾಪಿಂಗ್ ಕೂಡ ಮಾಡ್ತೀನಿ, ಅದಕ್ಕೆ ಸುಮಾರು ₹2000. ಇನ್ನು ಇತರೆ ಸಣ್ಣಪುಟ್ಟ ಖರ್ಚುಗಳು ಸುಮಾರು ₹1000. ಒಟ್ಟಾರೆಯಾಗಿ, ನಾನು ಒಬ್ಬಳೇ ಇದ್ದು ತಿಂಗಳಿಗೆ ₹17,500 ರಿಂದ ₹18,000 ಖರ್ಚು ಮಾಡುತ್ತೇನೆ' ಎಂದು ಹೇಳಿದ್ದಾರೆ.
ನೆಟಿಜನ್ಸ್ ಏನಂದ್ರು?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ಈ ಲೆಕ್ಕಾಚಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ಬಾಡಿಗೆಯ ಬಗ್ಗೆಯೇ ಹೆಚ್ಚು ಪ್ರಶ್ನೆಗಳು ಎದ್ದಿವೆ. ಮುಂಬೈನಲ್ಲಿ ಒಂದು ಸಾಮಾನ್ಯ 1RK ಫ್ಲ್ಯಾಟ್‌ಗೆ ಕೂಡ ಇದಕ್ಕಿಂತ ಹೆಚ್ಚು ಬಾಡಿಗೆ ಇರುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು, 'ಇಷ್ಟು ಕಡಿಮೆ ಬಾಡಿಗೆ ಯಾವ ಏರಿಯಾದಲ್ಲಿ ಸಿಕ್ತು? ಯಾಕಂದ್ರೆ ಸಾಮಾನ್ಯವಾಗಿ ಮುಂಬೈನಲ್ಲಿ 1RK ಮನೆಗೆ ₹25,000 ದಿಂದ ₹30,000 ಬಾಡಿಗೆ ಇರುತ್ತೆ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಈ ₹11,500 ಬಾಡಿಗೆ ಮುಂಬೈನಲ್ಲಿ ಎಲ್ಲಿ ಸಿಗುತ್ತಿದೆ?' ಎಂದು ಆಶ್ಚರ್ಯದಿಂದ ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ನೇರವಾಗಿಯೇ, 'ಇದು ಯಾವ ಮುಂಬೈ? 1RK ಮನೆ ₹11.5 ಸಾವಿರಕ್ಕಾ?' ಎಂದು ಪ್ರಶ್ನಿಸಿದ್ದಾರೆ. 'ಬಾಡಿಗೆ ಇಷ್ಟು ಕಡಿಮೆ ಹೇಗೆ ಸಾಧ್ಯ? ಎಂದು ಒಬ್ಬರು ಕೇಳಿದರೆ, 'ಮುಂಬೈನಲ್ಲಿ ಇದು ಸಾಧ್ಯವೇ ಇಲ್ಲ' ಎಂದು ಮತ್ತೊಬ್ಬರು ಹೇಳಿದ್ದಾರೆ.
ಕೆಲವರು ಈ ಬಜೆಟ್‌ನಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟ ಎಂಬುದನ್ನು ಉಲ್ಲೇಖಿಸಿ, 'ಇದು ಕೇಳೋಕೆ ಸವಾಲಿನಂತೆ ಅನಿಸುತ್ತಿದೆ! ನಿಜಕ್ಕೂ ತುಂಬಾ ಕಡಿಮೆ ಖರ್ಚು" ಎಂದು ಅಭಿಪ್ರಾಯಪಟ್ಟಿದ್ದಾರೆ.