ಹುಷಾರು ತಪ್ಪಿದ ಮರಿಯನ್ನು ಪಶುವೈದ್ಯ ಆಸ್ಪತ್ರೆಗೆ ಕರೆತಂದ ಬೆಕ್ಕು: ವೀಡಿಯೋ ವೈರಲ್

Published : Jul 04, 2025, 08:09 AM IST
mother Cat brings kitten to veterinary hospital

ಸಾರಾಂಶ

ಟರ್ಕಿಯಲ್ಲಿ ಬೆಕ್ಕೊಂದು ತನ್ನ ಮರಿಯ ಕಣ್ಣಿನ ಸೋಂಕಿಗೆ ಚಿಕಿತ್ಸೆ ಕೇಳಿ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದ ಅಚ್ಚರಿಯ ಘಟನೆ ನಡೆದಿದೆ. ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಬಂದ ತಾಯಿ ಬೆಕ್ಕಿನ ವರ್ತನೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ವೈದ್ಯರು ಮರಿಗೆ ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ.

ಮನುಷ್ಯರು ಹುಷಾರು ತಪ್ಪಿದಾಗ ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದನ್ನು ನೋಡಿದ್ದೀರಿ. ಆದರೆ ಬಾಯಿ ಬಾರದ ಅಕ್ಷರ ಜ್ಞಾನದ ಅರಿವಿರದ ಪ್ರಾಣಿಗಳು ತಮ್ಮ ಮರಿಗಳು ಹುಷಾರು ತಪ್ಪಿದಾಗ ವೈದ್ಯರ ಬಳಿ ಹೋಗುವುದನ್ನು ನೋಡಿದ್ದೀರಾ? ಇಂತಹ ಘಟನೆಯೊಂದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೋಡುಗರಿಗೆ ಅಚ್ಚರಿ ಉಂಟು ಮಾಡಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಟರ್ಕಿಯಲ್ಲಿ..

ಟರ್ಕಿಯ ಸುಂಗುರ್ಲು ಸಾಕುಪ್ರಾಣಿ ಪಶುವೈದ್ಯಕೀಯ ಚಿಕಿತ್ಸಾಲಯದ ಪಶುವೈದ್ಯರು ಪ್ರತಿದಿನ ತಮ್ಮ ಪ್ರೀತಿಯ ಪ್ರಾಣಿಗಳ ಆರೈಕೆಯನ್ನು ಬಯಸುವ ಜನರೊಂದಿಗೆ ಅವರ ಪ್ರೀತಿಯ ಸಾಕು ಪ್ರಾಣಿಗಳನ್ನು ಭೇಟಿ ಮಾಡುತ್ತಿದ್ದರು. ಆದರೆ ಈ ವಾರ ಅವರ ಬಳಿ ಮಾಲೀಕರಿಲ್ಲದ ಬೀದಿ ಬೆಕ್ಕೊಂದು ತನ್ನ ಮರಿಯೊಂದಿಗೆ ಆಗಮಿಸಿ ಅವರ ಆಸ್ಪತ್ರೆಯ ಬಾಗಿಲಿನ ಬಳಿ ನಿಂತು ವೈದ್ಯರು ತನ್ನ ಮಗುವಿಗೂ ಚಿಕಿತ್ಸೆ ನೀಡುವರೋ ಇಲ್ಲವೋ ಎಂಬ ಆತಂಕ ಆಗು ಸಣ್ಣ ಭರವಸೆಯೊಂದಿಗೆ ಅವರನ್ನು ನೋಡುತ್ತಿತ್ತು.

ಹೀಗೆ ಮರಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಎತ್ತಿಕೊಂಡು ಬಂದ ತಾಯಿ ಬೆಕ್ಕು ಹಾಗೂ ಮರಿ ಇಬ್ಬರನ್ನು ವೈದ್ಯರು ಹತ್ತಿರ ಹೋಗಿ ಪರಿಶೀಲಿಸಿದರು. ಆಗ ಆ ಬೆಕ್ಕಿನ ಮರಿಗೆ ಕಣ್ಣಿನ ಸೋಂಕು ಆಗಿರುವುದು ಪಶು ವೈದ್ಯಕೀಯ ಆಸ್ಪತ್ರೆ ಸಿಬ್ಬಂದಿಗೆ ತಿಳಿಯಿತು. ಸೋಂಕಿನಿಂದಾಗಿ ಮರಿ ಬೆಕ್ಕಿನ ಕಣ್ಣುಗಳಿಂದ ಒಂದೇ ಸಮನೇ ನೀರು ಸುರಿಯುತ್ತಿತ್ತು. ಇದನ್ನು ಗಮನಿಸಿದ ವೈದ್ಯರು ಈ ಬೆಕ್ಕು ತನ್ನ ಮರಿಯ ಕಣ್ಣಿನ ಸೋಂಕಿಗೆ ಚಿಕಿತ್ಸೆ ನೀಡುವಂತೆ ಕೇಳಿ ಇಲ್ಲಿಗೆ ಬಂದಿದೆ ಎಂಬುದನ್ನು ಅರಿತುಕೊಂಡು ಮರಿಯನ್ನು ತಾಯಿಯ ಬಳಿಯಿಂದ ಹತ್ತಿರ ತೆಗೆದುಕೊಂಡು ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ.

ಅಕ್ಷರ ಜ್ಞಾನ ಇಲ್ಲದ ಈ ಮೂಕ ಪ್ರಾಣಿಗೆ ಇಲ್ಲಿ ತನ್ನ ಮರಿಗೆ ಚಿಕಿತ್ಸೆ ಸಿಗುತ್ತದೆ ಎಂದು ಅರಿವಾಗಿದ್ದು ಹೇಗೆ? ತನ್ನ ಮರಿ ಮರಿಯನ್ನು ನೋಡಿಕೊಳ್ಳುವ ಬೆಕ್ಕಿನ ತಾಯಿಯ ಗುಣ ನಮಗೆ ತುಂಬಾ ಸಂತೋಷ ಮತ್ತು ಭಾವನಾತ್ಮಕತೆಯನ್ನುಂಟುಮಾಡಿತು ಎಂದು ಕ್ಲಿನಿಕ್‌ನ ವಕ್ತಾರರು ದಿ ಡೋಡೋಗೆ ತಿಳಿಸಿದ್ದಾರೆ.

 



 

ಅದೃಷ್ಟವಶಾತ್ ಈ ಸೋಂಕು ತೀವ್ರವಾಗಿರಲಿಲ್ಲ, ಹೀಗಾಗಿ ತಾಯಿ ಹಾಗೂ ಮರಿ ಬೇಗ ಸುಧಾರಿಸಿಕೊಂಡರು. ನಾವು ಅವುಗಳಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಅಶಾವಾದಿಗಳಾಗಿದ್ದೇವೆ ಎಂದು ಈ ಮೂಕ ಪ್ರಾಣಿಗೆ ಚಿಕಿತ್ಸೆ ನೀಡಿದ ಪಶುವೈದ್ಯರು ಹೇಳಿದ್ದಾರೆ. ಅಂದಹಾಗೆ ಈ ಬೆಕ್ಕು ಮತ್ತು ಅದರ ಮರಿ ಬಹಳ ದೂರವೇನು ವಾಸ ಮಾಡುತ್ತಿರಲಿಲ್ಲ,ಕ್ಲಿನಿಕ್ ಪಕ್ಕದ ಖಾಲಿ ಜಾಗದಲ್ಲಿ ಇವು ನೆಲೆಸಿದ್ದವು.

ತಾಯಿ ಬೆಕ್ಕು ಹಣ ಪಾವತಿಸುವ ಗ್ರಾಹಕನಲ್ಲ ಎಂಬುದು ನಿಜ. ಆದರೆ ಸುಂಗುರ್ಲು ಸಾಕುಪ್ರಾಣಿ ಪಶುವೈದ್ಯಕೀಯ ಚಿಕಿತ್ಸಾಲಯದ ಸಿಬ್ಬಂದಿಗೆ, ಆ ಪುಟ್ಟ ಕುಟುಂಬಕ್ಕೆ ಸಹಾಯ ಮಾಡಿದ್ದರಿಂದ ತುಂಬಾ ದೊಡ್ಡ ತೃಪ್ತಿ ಸಿಕ್ಕಿದೆಯಂತೆ. ಈ ಬೆಕ್ಕಿನ ಮರಿಗೆ ಚಿಕಿತ್ಸೆ ಮುಂದುವರೆದಿದೆ ಮತ್ತು ಅವರು ನಮ್ಮ ಮೇಲ್ವಿಚಾರಣೆಯಲ್ಲಿದ್ದಾರೆ. ಅವರು ತುಂಬಾ ಸಂತೋಷವಾಗಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ.

ಪಶುವೈದ್ಯರಾಗಿ, ಈ ಪ್ರಾಣಿಯ ಆರೋಗ್ಯ ಸುಧಾರಿಸುತ್ತದೆ ಮತ್ತು ಚೇತರಿಸಿಕೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ಪಶುವೈದ್ಯಕೀಯ ಔಷಧವು ಸಹಾನುಭೂತಿಯ ಅಗತ್ಯವಿರುವ ವೃತ್ತಿಯಾಗಿರುವುದರಿಂದ, ಎಲ್ಲಾ ಪ್ರಾಣಿಗಳಿಗೆ ಅವು ಬೀದಿ ನಾಯಿಗಳಾಗಲಿ ಅಥವಾ ಸಾಕುಪ್ರಾಣಿಗಳಾಗಲಿ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ಅದೇನೆ ಇರಲಿ ಮೂಕಪ್ರಾಣಿಯೊಂದು ತನ್ನ ಮರಿಯನ್ನು ಎಷ್ಟು ಕಾಳಜಿಯಿಂದ ನೋಡುತ್ತದೆ. ಜೊತೆಗೆ ಮನುಷ್ಯರಷ್ಟು ಬುದ್ಧಿವಂತರಲ್ಲದಿದ್ದರು ದಿನವೂ ತನ್ನ ಸುತ್ತಲ ಚಟುವಟಿಕೆಯನ್ನು ಗಮನಿಸಿದ ತಾಯಿಗೆ ತನ್ನ ಮರಿಯ ಸೋಂಕಿಗೆ ಎಲ್ಲಿ ಮದ್ದು ಸಿಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿರುವುದು ಅಚ್ಚರಿಯ ಸಂಗತಿ ಎಂದರೆ ತಪ್ಪಾಗಲಾರದು.

ಕೆಲದಿನಗಳ ಹಿಂದೆ ಬಾಗಲಕೋಟೆಯ ಇಲಕಲ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕೋತಿಯೊಂದು ತಾನಾಗಿಯೇ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ತನ್ನ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್