
ವಡೋದರಾ: ಪ್ರೀತಿ ಎನ್ನುವುದು ಮನುಷ್ಯರ ಮೇಲಿರಲಿ ಅಥವಾ ಪ್ರಾಣಿಗಳ ಮೇಲಿರಲಿ, ಆ ಭಾವನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗುಜರಾತ್‌ನ ವಡೋದರಾದಲ್ಲಿ ಇಂತಹದ್ದೇ ಒಂದು ಮನಕಲಕುವ ಘಟನೆ ನಡೆದಿದೆ. ಪರೀಖ್ ಕುಟುಂಬದ ಗಿಳಿಯೊಂದು ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದು, ಅದನ್ನು ಮಗುವಿನಂತೆ ಸಾಕುತ್ತಿದ್ದ ಮಹಿಳೆ ಊಟವನ್ನೇ ತ್ಯಜಿಸಿದ್ದಾರೆ. ಗಿಳಿ ನಾಪತ್ತೆಯಾಗಿರುವುದರಿಂದ ಮಹಿಳೆಯ ಆರೋಗ್ಯವೂ ಹದಗೆಟ್ಟಿದೆ.
ವಡೋದರಾದ ಸೇವಾಸಿ ರಸ್ತೆಯ ಇಸ್ಕಾನ್ ಹೈಟ್ಸ್‌ನಲ್ಲಿ ವಾಸಿಸುವ ಪರೀಖ್ ಕುಟುಂಬದ ಆರು ತಿಂಗಳ ಆಫ್ರಿಕನ್ ಗ್ರೇ ಗಿಳಿ 'ಲಡ್ಡು' ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದೆ. ಕುಟುಂಬದವರು ಕಳೆದ ಜುಲೈ ತಿಂಗಳಲ್ಲಿ ಮುಂಬೈನಿಂದ 1.10 ಲಕ್ಷ ರೂಪಾಯಿ ನೀಡಿ ಈ ಗಿಳಿಯನ್ನು ಖರೀದಿಸಿದ್ದರು. ಲಡ್ಡು ಕಾಣೆಯಾಗಿರುವುದರಿಂದ ತಾಯಿಯಂತೆ ಆರೈಕೆ ಮಾಡುತ್ತಿದ್ದ ಜೇಸಿಕಾ ಪರೀಖ್ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಗಿಳಿಯನ್ನು ಸಾಕಿ ಬೆಳೆಸುವುದಕ್ಕಾಗಿ ಅವರು ತಮ್ಮ ಖಾಸಗಿ ಶಾಲೆಯ ಉದ್ಯೋಗವನ್ನೂ ತ್ಯಜಿಸಿದ್ದರು. ಕಳೆದ ನಾಲ್ಕು ದಿನಗಳಿಂದ ಅವರು ಒಂದು ತುತ್ತು ಅನ್ನವನ್ನೂ ಸೇವಿಸಿಲ್ಲ.
ಜೇಸಿಕಾ ಅವರ ಪ್ರಕಾರ, ಲಡ್ಡು ಬೆಳಗ್ಗೆಯಿಂದ ರಾತ್ರಿಯವರೆಗೆ ಅವರ ಸುತ್ತಮುತ್ತಲೇ ಇರುತ್ತಿತ್ತು. ಕೆಲವೊಮ್ಮೆ ಎದೆಯ ಮೇಲೆ, ಇನ್ನೊಮ್ಮೆ ಮಡಿಲಲ್ಲಿ ಕುಳಿತುಕೊಂಡು ಆಹಾರ ಸೇವಿಸುತ್ತಿತ್ತು. ಆದರೆ ಇಂದು ಮನೆಯಲ್ಲಿ ಖಾಲಿ ಪಂಜರ ಮತ್ತು ಅದರ ನೆನಪುಗಳು ಕುಟುಂಬದವರನ್ನು ಕಣ್ಣೀರಿನಲ್ಲಿ ಮುಳುಗಿಸಿವೆ.
ಗಿಳಿಯನ್ನು ಸುರಕ್ಷಿತವಾಗಿ ಹುಡುಕಿಕೊಟ್ಟವರಿಗೆ ₹1 ಲಕ್ಷ ಬಹುಮಾನ
ಕುಟುಂಬದವರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಹುಡುಕಾಟ ನಡೆಸಿದರೂ ಲಡ್ಡುವಿನ ಸುಳಿವು ಸಿಕ್ಕಿಲ್ಲ. ಇದೀಗ ಗಿಳಿಯನ್ನು ಸುರಕ್ಷಿತವಾಗಿ ಮರಳಿ ತಂದುಕೊಡುವವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಲಡ್ಡುವನ್ನು ಗುರುತಿಸಲು ಅದರ ಕಣ್ಣಿನ ಬಳಿ ಇರುವ ಗುರುತು, ಕೊಕ್ಕಿನ ಮೇಲಿನ ಒರಟಾದ ಗುರುತುಗಳು ಹಾಗೂ ಕಾಲಿನಲ್ಲಿ ಧರಿಸಿರುವ ಕಡವನ್ನು ಗಮನಿಸಬಹುದು.
ಜೇಸಿಕಾ ಜನರಲ್ಲಿ ಒಂದು ಮನವಿ ಮಾಡಿದ್ದಾರೆ. ದಯವಿಟ್ಟು ತಮ್ಮ ನೋವನ್ನು ತಮಾಷೆಯಾಗಿ ಪರಿಗಣಿಸಬೇಡಿ. ಲಡ್ಡುವನ್ನು ಹುಡುಕಲು ಸಹಾಯ ಮಾಡಿ ಎಂದು ಅವರು ಕೋರಿದ್ದಾರೆ. "ಲಡ್ಡು, ವಾಪಸ್ ಬಾ… ನಿನ್ನ ತಾಯಿ ನಿನಗಾಗಿ ಕಾಯುತ್ತಿದ್ದಾಳ ಎಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ."
ಗಿಳಿಯ ಬಗ್ಗೆ ಜೇಸಿಕಾ ಪರೀಖ್ ಹೇಳಿದ್ದೇನು?
ಜೇಸಿಕಾ ಪರೀಖ್ ಮಾತನಾಡಿ, "ಲಡ್ಡು ನನಗೆ ಕೇವಲ ಗಿಳಿಯಲ್ಲ, ನನ್ನ ಮಗ. ನಾನು ಅವನನ್ನು ನನ್ನ ಮಗುವಿನಂತೆ ಸಾಕುತ್ತಿದ್ದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಅವನು ನನ್ನ ಜೊತೆಯಲ್ಲೇ ಇರುತ್ತಿದ್ದ. ಕೆಲವೊಮ್ಮೆ ನನ್ನ ಎದೆಯ ಮೇಲೆ, ಇನ್ನೊಮ್ಮೆ ನನ್ನ ಮಡಿಲಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದ. ಕಳೆದ ನಾಲ್ಕು ದಿನಗಳಿಂದ ನಾನು ಒಂದು ತುತ್ತು ಅನ್ನವನ್ನೂ ತಿಂದಿಲ್ಲ. ಅವನು ಎಲ್ಲಿರಬಹುದು, ಊಟ ಮಾಡಿದ್ದಾನೋ ಇಲ್ಲವೋ ಎಂಬ ಚಿಂತೆ ಪ್ರತಿಕ್ಷಣವೂ ಕಾಡುತ್ತಿದೆ" ಎಂದು ಹೇಳಿದ್ದಾರೆ. ಅಲ್ಲದೇ ದಯವಿಟ್ಟು ನನ್ನ ಲಡ್ಡುವನ್ನು ನನಗೆ ಮರಳಿ ಕೊಡಿ ಎಂದು ಎಲ್ಲರಲ್ಲೂ ಕೈಮುಗಿದು ವಿನಂತಿಸುತ್ತೇನೆ. ಅವನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ" ಎಂದು ಮನವಿ ಮಾಡಿದ್ದಾರೆ.