
ಇಂದಿನ ಸ್ಪರ್ಧಾತ್ಮಕ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಬದಲಾಯಿಸುವುದು ಅಥವಾ ಹೊಸ ಕೆಲಸ ಗಿಟ್ಟಿಸಿಕೊಳ್ಳುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೆ, ದಿನಗಟ್ಟಲೆ ಸತತವಾಗಿ ಸಂದರ್ಶನ ನಡೆಸಿ, ಕೊನೆಯ ಕ್ಷಣದವರೆಗೂ ಸಕಾರಾತ್ಮಕ ಭರವಸೆ ನೀಡಿ, ಅಂತಿಮ ಪರೀಕ್ಷೆಯ ಬೆಳಿಗ್ಗೆಯೇ 'ನಿಮಗೆ ಕೆಲಸವಿಲ್ಲ' ಎಂದು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದರೆ ಆ ಅಭ್ಯರ್ಥಿಯ ಶ್ರಮ ಮತ್ತು ಮಾನಸಿಕ ಸ್ಥಿತಿ ಏನಾಗಬೇಡ? ಇಂತಹದ್ದೇ ಒಂದು ನಿರಾಶಾದಾಯಕ ಹಾಗೂ ಆಘಾತಕಾರಿ ಅನುಭವವನ್ನು ಹಂಚಿಕೊಂಡಿರುವ ಉದ್ಯೋಗಾಕಾಂಕ್ಷಿಯೊಬ್ಬರ ಪೋಸ್ಟ್ ಈಗ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ರೆಡ್ಡಿಟ್ನಲ್ಲಿ ವ್ಯಾಪಕ ಚರ್ಚೆ ಸೃಷ್ಟಿಸಿದೆ.
ರೆಡ್ಡಿಟ್ನಲ್ಲಿ ನಾನು ಅತ್ಯಂತ ಭಯಾನಕ ನೇಮಕಾತಿ ಪ್ರಕ್ರಿಯೆಯ ಮೂಲಕ ಹೋಗಿದ್ದೇನೆ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿರುವ ಆ ವ್ಯಕ್ತಿ, ತಾವು ಕಳೆದ ಐದು ವರ್ಷಗಳಿಂದ ಪ್ರಸ್ತುತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಒಂದು ತಿಂಗಳ ಹಿಂದೆ ಬೇರೆ ಉದ್ಯೋಗ ಹುಡುಕಲು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ. ನೇಮಕಾತಿ ಏಜೆನ್ಸಿಯೊಂದರ ಮೂಲಕ ಗೌಪ್ಯವಾಗಿದ್ದ ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಿದ ಇವರಿಗೆ ಸಾಲು ಸಾಲು ಸುದೀರ್ಘ ಸಂದರ್ಶನ ಸುತ್ತುಗಳನ್ನು ಎದುರಿಸಬೇಕಾಯಿತು.
ಮೊದಲು 30 ನಿಮಿಷಗಳ ನೇಮಕಾತಿದಾರರ ಕರೆ, ನಂತರ ಕಂಪನಿಯ ಅಧ್ಯಕ್ಷರೊಂದಿಗೆ 45 ನಿಮಿಷಗಳ ಸಂದರ್ಶನ, ಆ ಬಳಿಕ ಮೂವರು ಉದ್ಯೋಗಿಗಳೊಂದಿಗೆ ಸತತ 3 ಗಂಟೆಗಳ ಸ್ಥಳದಲ್ಲೇ ನಡೆದ ಸುದೀರ್ಘ ಸಭೆ ಹಾಗೂ ಕೊನೆಗೆ ಕಂಪನಿಯ ಸಿಇಒ ಅವರೊಂದಿಗೆ 45 ನಿಮಿಷಗಳ ಸಂದರ್ಶನದಲ್ಲಿ ಇವರು ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ಈ ವೇಳೆ ಸಿಇಒ ಅವರು, "ನಾವು ನಿಮಗೆ ಆಫರ್ ನೀಡಿದರೆ ನೀವು ಸ್ವೀಕರಿಸುತ್ತೀರಾ? ಎಂದು ನೇರವಾಗಿ ಕೇಳಿದ್ದರು. ಜೊತೆಗೆ, ತಾಂತ್ರಿಕ ವಿಷಯಗಳಲ್ಲಿ ಏನಾದರೂ ಕೊರತೆಯಿದ್ದರೆ ಕಂಪನಿಯೇ ತರಬೇತಿ ನೀಡುವುದಾಗಿಯೂ ಭರವಸೆ ನೀಡಲಾಗಿತ್ತು.
ಸಂದರ್ಶನದ ಅಂತಿಮ ಹಂತವಾಗಿ ೩ ಗಂಟೆಗಳ ಕಾಲಾವಧಿಯ ಅತ್ಯಂತ ಕಠಿಣವಾದ ಎಕ್ಸೆಲ್ (Excel) ಪರೀಕ್ಷೆ ಮತ್ತು ಕೇಸ್ ಸ್ಟಡಿ (Case Study) ನಿಗದಿಯಾಗಿತ್ತು. ಈ ಪರೀಕ್ಷೆಗಾಗಿ ಆ ಅಭ್ಯರ್ಥಿಯು ಸತತ ೬ ದಿನಗಳ ಕಾಲ ಪ್ರತಿದಿನ ರಾತ್ರಿ ೩ ಗಂಟೆಗಳ ಕಾಲ ಸತತವಾಗಿ ಅಭ್ಯಾಸ ನಡೆಸಿದ್ದರು. ಆದರೆ, ಪರೀಕ್ಷೆ ನಿಗದಿಯಾಗಿದ್ದ ದಿನದ ಬೆಳಿಗ್ಗೆಯೇ ನೇಮಕಾತಿದಾರರು ಕರೆ ಮಾಡಿ, "ಕಂಪನಿಯು ತನ್ನ ಆಂತರಿಕ ನೆಟ್ವರ್ಕ್ (Internal Network) ಮೂಲಕವೇ ಬೇರೊಬ್ಬ ಅಭ್ಯರ್ಥಿಯನ್ನು ಕಂಡುಕೊಂಡಿದೆ, ಹಾಗಾಗಿ ನಿಮ್ಮ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ" ಎಂಬ ಆಘಾತಕಾರಿ ಸುದ್ದಿಯನ್ನು ನೀಡಿದರು. ಇದರಿಂದ ಆ ಅಭ್ಯರ್ಥಿ ವ್ಯರ್ಥ ಮಾಡಿದ ಸಮಯ ಮತ್ತು ಪಟ್ಟ ಶ್ರಮ ನೆನೆದು ತೀವ್ರ ನಿರಾಶೆಗೊಂಡರು.
ತಾವು ಉದ್ಯೋಗ ಬದಲಾಯಿಸುತ್ತಿದ್ದ ಕಾರಣವನ್ನು ವಿವರಿಸಿದ ಆ ವ್ಯಕ್ತಿ, "ಪ್ರಸ್ತುತ ನನ್ನ ಬಳಿ ವರ್ಕ್ ಫ್ರಂ ಹೋಮ್ ಮಾಡುವ ವರ್ಷಕ್ಕೆ ಸುಮಾರು 120,000 ಡಾಲರ್ ಉತ್ತಮ ಕೆಲಸವಿದೆ. ಆದರೆ, ಮುಂದಿನ 6 ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ ಸುದೀರ್ಘ ರಜೆ ತೆಗೆದುಕೊಳ್ಳುವ ಮುನ್ನ 2-3 ವರ್ಷಗಳ ಕಾಲ ಕಠಿಣ ಸಾಂಸ್ಥಿಕ ವಾತಾವರಣದಲ್ಲಿ ಕೆಲಸ ಮಾಡುವ ಇಚ್ಛೆಯಿತ್ತು, ಎಂದು ಬರೆದುಕೊಂಡಿದ್ದಾರೆ. ಈ ಬೃಹತ್ ಹಿನ್ನಡೆಯ ಹೊರತಾಗಿಯೂ ಅವರು ಧನಾತ್ಮಕವಾಗಿಯೇ ಉಳಿದಿದ್ದು, "ನನಗೆ ಮುಂದಿನ ಎರಡು ದಿನಗಳಲ್ಲಿ ಎರಡು ಹೊಸ ಕಂಪನಿಗಳ ಮೊದಲ ಸುತ್ತಿನ ಸಂದರ್ಶನಗಳಿವೆ, ನನ್ನ ತಲೆ ಎಂದಿಗೂ ಎತ್ತರದಲ್ಲೇ ಇರುತ್ತದೆ" ಎಂದು ಸಕಾರಾತ್ಮಕವಾಗಿ ಹೇಳಿಕೊಂಡಿದ್ದಾರೆ.
ಈ ಪೋಸ್ಟ್ ಪ್ರಕಟಗೊಳ್ಳುತ್ತಿದ್ದಂತೆ ನೂರಾರು ರೆಡ್ಡಿಟ್ ಬಳಕೆದಾರರು ಕಂಪನಿಯ ಈ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಎಲ್ಲಾ ಹಂತದ ಸಂದರ್ಶನ ಮುಗಿದ ನಂತರವೂ 3 ಗಂಟೆಗಳ ಎಕ್ಸೆಲ್ ಪರೀಕ್ಷೆ ಇಡುವುದು ಕಂಪನಿಯ ಮೊದಲ ಅಪಾಯದ ಮುನ್ಸೂಚನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳ ಸಮಯವನ್ನು ಹೀಗೆ ವ್ಯರ್ಥ ಮಾಡುವುದು ಸಾಮಾನ್ಯವಾಗಿದೆ, ಇದು ನಿಜಕ್ಕೂ ಹಾಸ್ಯಾಸ್ಪದ" ಎಂದು ಕಿಡಿಕಾರಿದ್ದಾರೆ. ಇನ್ನು ಕೆಲವರು, "ಕಂಪನಿಯನ್ನು ತಕ್ಷಣವೇ ತಿರಸ್ಕರಿಸಬೇಡಿ, ಆಂತರಿಕವಾಗಿ ಆಯ್ಕೆಯಾದವರು ಆಫರ್ ನಿರಾಕರಿಸಿದರೆ ನಿಮಗೆ ಮತ್ತೆ ಅವಕಾಶ ಸಿಗಬಹುದು, ಸಂಪರ್ಕದಲ್ಲಿರಿ" ಎಂದು ಸಲಹೆ ನೀಡಿದ್ದಾರೆ.
(ಹಕ್ಕು ನಿರಾಕರಣೆ: ಈ ಲೇಖನವು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡ ವಿಷಯವನ್ನು ಆಧರಿಸಿದೆ. ಈ ಹೇಳಿಕೆಗಳನ್ನು ಮಾಧ್ಯಮಗಳು ಸ್ವತಂತ್ರವಾಗಿ ಪರಿಶೀಲಿಸಿಲ್ಲ).