
ನವದೆಹಲಿ: ಐಐಟಿಯಲ್ಲಿ ಅಭ್ಯಾಸ ಮಾಡಿ ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ನಲ್ಲಿ (Google) ಕೆಲಸ ಮಾಡಬೇಕೆಂಬ ಬಾಲ್ಯದ ಕನಸು ಕೈಗೂಡದಿದ್ದರೂ, ಧೃತಿಗೆಡದೆ ತನ್ನದೇ ಹಾದಿ ನಿರ್ಮಿಸಿಕೊಂಡು ಗೂಗಲ್‌ನಿಂದಲೇ ವಿಶೇಷ ಆಹ್ವಾನ ಪಡೆದ ಕಂಟೆಂಟ್ ಕ್ರಿಯೇಟರ್ ಒಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖ್ಯಾತ Content Creator ಭವಿಷ್ಯ ರಾಘವ್ ಅವರು ಗೂಗಲ್ ಕಚೇರಿಯಲ್ಲಿ ತೆಗೆಸಿಕೊಂಡ ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಮ್ಮೆ ತಲುಪಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ಕನಸು, ಅನಿರೀಕ್ಷಿತ ರೀತಿಯಲ್ಲಿ ತಮ್ಮ ಜೀವನದಲ್ಲಿ ಹೇಗೆ ಸಾಕಾರಗೊಂಡಿತು ಎಂಬುದನ್ನು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ರಾಘವ್, ನಾನು 11 ನೇ ತರಗತಿಯಲ್ಲಿದ್ದಾಗ ನನಗೊಂದು ದೊಡ್ಡ ಕನಸಿತ್ತು. ಕುಟುಂಬದ ಆಸೆಯಂತೆ ಕಷ್ಟಪಟ್ಟು ಓದಿ, ಐಐಟಿ ಸೇರಿ, ಅಲ್ಲಿ ಉತ್ತಮ ಸಾಧನೆ ಮಾಡಿ, ಒಂದು ದಿನ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ನನ್ನ ಗುರಿಯಾಗಿತ್ತು ಎಂದಿದ್ದಾರೆ.
ಆದರೆ, ಅವರು ಅಂದುಕೊಂಡಂತೆ ವಿಷಯಗಳು ನಡೆಯಲಿಲ್ಲ. ನನಗೆ ಐಐಟಿಯಲ್ಲಿ ಸೀಟು ಪಡೆಯಲು ಸಾಧ್ಯವಾಗಲಿಲ್ಲ. ಆ ಹಂತದಲ್ಲಿ ನಾನು ಗೂಗಲ್ ತಲುಪುವ ಕನಸನ್ನು ಸದ್ದಿಲ್ಲದೆ ಕೈಬಿಟ್ಟೆ. ಗೂಗಲ್‌ನಲ್ಲಿ ಕೆಲಸ ಮಾಡುವುದು ಬಹುಶಃ ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿದ್ದೆ ಎಂದು ರಾಘವ್ ತಿಳಿಸಿದ್ದಾರೆ.
ಐಐಟಿ ತಪ್ಪಿದರೂ ನಿರಾಸೆಗೊಳ್ಳದ ರಾಘವ್, ಕಂಟೆಂಟ್ ಕ್ರಿಯೆಟರ್ ಕ್ಷೇತ್ರಕ್ಕೆ ಕಾಲಿಟ್ಟರು. ನಿರಂತರ ಕಲಿಕೆ, ಶ್ರಮ ಮತ್ತು ಅಡೆತಡೆಗಳ ನಡುವೆಯೂ ಕಂಟೆಂಟ್ ಮಾಡುತ್ತ ಸಾಗಿದ ಅವರಿಗೆ ಅದೃಷ್ಟ ಒಲಿದುಬಂದಿದೆ.
ಜೀವನ ನನಗಾಗಿ ಬೇರೆಯದೇ ಯೋಜನೆಯನ್ನು ಹಮ್ಮಿಕೊಂಡಿತ್ತು. ನಾನು ಕಂಟೆಂಟ್ ಕ್ರಿಯೇಟ್ ಮಾಡಲು ಪ್ರಾರಂಭಿಸಿದೆ. ನಿರಂತರವಾಗಿ ಕಲಿಯುತ್ತಾ, ಶ್ರಮಿಸುತ್ತಾ ಮುನ್ನಡೆದೆ. ಇಂದು 'ಗೂಗಲ್ ಪಿಕ್ಸೆಲ್ 11' ಸರಣಿಯ ವಿಶೇಷ ಬಿಡುಗಡೆ ಕಾರ್ಯಕ್ರಮಕ್ಕೆ ಗೂಗಲ್ ನನ್ನನ್ನು ಅಧಿಕೃತವಾಗಿ ಆಹ್ವಾನಿಸಿದೆ! ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ತಮ್ಮ ವೃತ್ತಿಜೀವನದ ಈ ಅನಿರೀಕ್ಷಿತ ತಿರುವನ್ನು ಸ್ಮರಿಸಿದ ರಾಘವ್, ನಾನು ಅಂದುಕೊಂಡಿದ್ದ ಸಾಂಪ್ರದಾಯಿಕ ಬಾಗಿಲಿನ ಮೂಲಕ ಗೂಗಲ್ ಪ್ರವೇಶಿಸಲಿಲ್ಲ. ಬದಲಾಗಿ, ನನಗಾಗಿ ನಾನೇ ಸಂಪೂರ್ಣ ಹೊಸ ಬಾಗಿಲೊಂದನ್ನು ನಿರ್ಮಿಸಿಕೊಂಡು ಒಳಗೆ ಹೆಜ್ಜೆ ಇಟ್ಟೆ. ಕೆಲವೊಮ್ಮೆ ಕನಸುಗಳು ಸಾಯುವುದಿಲ್ಲ, ಅವು ತಮಗಾಗಿ ಬೇರೆಯದೇ ಮಾರ್ಗವನ್ನು ಕಂಡುಕೊಳ್ಳುತ್ತವೆ! ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
ರಾಘವ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ನೆಟ್ಟಿಗರ ಮನಗೆದ್ದಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕಷ್ಟಪಟ್ಟು ಅಂದುಕೊಂಡಿದ್ದನ್ನು ಸಾಧಿಸಿದ ಅವರ ಪರಿಶ್ರಮಕ್ಕೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಒಬ್ಬ ಬಳಕೆದಾರರು "ಇದನ್ನು ನಿಜವಾದ ಲೈಫ್ ಸರ್ಕಲ್ moment ಎನ್ನಬಹುದು!" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು "ಕನಸುಗಳು ನಿಜವಾಗಿಯೂ ತಮ್ಮದೇ ಆದ ಹೊಸ ದಾರಿಯನ್ನು ಹುಡುಕಿಕೊಳ್ಳುತ್ತವೆ" ಎಂದು ಬರೆದಿದ್ದಾರೆ.
"ಐಐಟಿ ಸೀಟು ತಪ್ಪಿದ ಕ್ಷಣದಿಂದ ಗೂಗಲ್‌ನಿಂದ ವಿಐಪಿ ಆಹ್ವಾನ ಪಡೆಯುವವರೆಗಿನ ಪ್ರಯಾಣ ನಿಜಕ್ಕೂ ಸ್ಪೂರ್ತಿದಾಯಕ" ಎಂದು ಹಲವರು ಕೊಂಡಾಡಿದ್ದಾರೆ.