
ಹೆಚ್ಚಿನ ಹದಿಹರೆಯದವರು ಓದು, ಕಾಲೇಜು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ವಯಸ್ಸಿನಲ್ಲಿ, ಮಧ್ಯಪ್ರದೇಶದ ಈ ಯುವಕ ತನ್ನ ಜೀವನದಲ್ಲಿ ಎದುರಾದ ಆರ್ಥಿಕ ಸಂಕಷ್ಟವನ್ನೇ ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡಿದ್ದಾನೆ. ಕೇವಲ 19ನೇ ವಯಸ್ಸಿನಲ್ಲೇ ₹95 ಲಕ್ಷದ ಸಾಲವನ್ನು ಎದುರಿಸಿ, ಬಳಿಕ ₹50 ಕೋಟಿಗೂ ಹೆಚ್ಚು ಮೌಲ್ಯದ ಉದ್ಯಮ ಕಟ್ಟಿದ ಅಂಶ್ ಪಾಟಿದಾರ್.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಬೋರ್ಲಾ ಗ್ರಾಮದಲ್ಲಿ ಜನಿಸಿದ ಅಂಶ್ ಪಾಟಿದಾರ್ ಕೃಷಿ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರೂ, ಪದೇಪದೇ ಬೆಳೆ ಹಾಳಾಗುವುದು ಮತ್ತು ಕೃಷಿ ಉತ್ಪನ್ನಗೆ ಸೂಕ್ತ ಬೆಲೆ ಸಿಗದಿರುವುದು ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಆದರೆ ತಮ್ಮ ವಿದ್ಯಾಭ್ಯಾಸಕ್ಕಾಗಿ ತಾಯಿ ಆಭರಣಗಳನ್ನು ಮಾರಾಟ ಮಾಡುವುದನ್ನು ಅವರು ಬಯಸಲಿಲ್ಲ. ಬದಲಾಗಿ, ಕುಟುಂಬದ ಪರಿಸ್ಥಿತಿಯನ್ನು ಬದಲಿಸಲು ತಾವೇ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು.
ತಂದೆಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಅಂಶ್, ರೈತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು. ಒಂದೇ ರೀತಿಯ ರಾಸಾಯನಿಕ ಸಂಯೋಜನೆ ಹೊಂದಿರುವ ಕೀಟನಾಶಕಗಳಿಗೆ ರೈತರು ಹೆಚ್ಚಿನ ಬೆಲೆ ಪಾವತಿಸುತ್ತಿರುವುದನ್ನು ಅವರು ಗಮನಿಸಿದರು. ಇದೇ ವಿಚಾರ ಅವರ ಮೊದಲ ಉದ್ಯಮದ ಕಲ್ಪನೆಗೆ ಕಾರಣವಾಯಿತು. ಕೇವಲ ₹3,000 ಬಂಡವಾಳದೊಂದಿಗೆ ಗುಜರಾತ್‌ನ ತಯಾರಕರಿಂದ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ, ಸ್ಥಳೀಯ ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಆರಂಭಿಸಿದರು. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಿದ ಪರಿಣಾಮ ರೈತರಲ್ಲಿ ಅಂಶ್ ಅವರ ಮೇಲೆ ವಿಶ್ವಾಸ ಮೂಡಿತು. ಹೀಗಾಗಿ ಅವರ ವ್ಯಾಪಾರ ನಿಧಾನವಾಗಿ ಸುತ್ತಮುತ್ತಲಿನ ಹಳ್ಳಿಗಳಿಗೂ ವಿಸ್ತರಿಸಿತು.
ವರದಿಗಳ ಪ್ರಕಾರ, ಅಂಶ್ ಕೇವಲ 15ನೇ ವಯಸ್ಸಿನಲ್ಲೇ ಜಿಎಸ್‌ಟಿ ನೋಂದಣಿ ಪಡೆದ ಭಾರತದ ಅತ್ಯಂತ ಕಿರಿಯ ಉದ್ಯಮಿಗಳಲ್ಲಿ ಒಬ್ಬರಾದರು. ಒಂದೆಡೆ ಶಾಲಾ ಶಿಕ್ಷಣ, ಮತ್ತೊಂದೆಡೆ ಉದ್ಯಮ. ಎರಡನ್ನೂ ಸಮತೋಲನಗೊಳಿಸಲು ಅಂಶ್ ಹಗಲು ಸಮಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸಂಜೆ ವೇಳೆ ವಿವಿಧ ಹಳ್ಳಿಗಳಿಗೆ ತೆರಳಿ ರೈತರನ್ನು ಭೇಟಿ ಮಾಡುತ್ತಿದ್ದರು. ರಾತ್ರಿ ಮನೆಗೆ ಮರಳಿ ಓದುತ್ತಿದ್ದರು. ಅವರ ಪರಿಶ್ರಮಕ್ಕೆ ಶೀಘ್ರದಲ್ಲೇ ಫಲ ಸಿಕ್ಕಿತು. ಕೇವಲ 18 ತಿಂಗಳ ಅವಧಿಯಲ್ಲಿ ಅವರ ಉದ್ಯಮ ಸುಮಾರು ₹40 ಲಕ್ಷ ವಹಿವಾಟು ದಾಖಲಿಸಿತು ಎಂದು ವರದಿಯಾಗಿದೆ.
ವ್ಯವಹಾರವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಅಂಶ್ ಕೃಷಿ ತಂತ್ರಜ್ಞಾನ ವೇದಿಕೆಯೊಂದನ್ನು ಆರಂಭಿಸಿದರು. ಆದರೆ ಈ ಉದ್ಯಮ ನಿರೀಕ್ಷಿಸಿದಂತೆ ಯಶಸ್ವಿಯಾಗಲಿಲ್ಲ. ಇದರ ಪರಿಣಾಮ ಕೇವಲ 17ನೇ ವಯಸ್ಸಿನಲ್ಲೇ ಅಂಶ್ ಅವರ ಮೇಲೆ ಬರೋಬ್ಬರಿ ₹95 ಲಕ್ಷದ ಸಾಲದ ಹೊರೆ ಬಂತು. ಇಷ್ಟು ದೊಡ್ಡ ಮೊತ್ತದ ಸಾಲವನ್ನು ಎದುರಿಸಿದಾಗ ಅನೇಕರು ಉದ್ಯಮವನ್ನೇ ಕೈಬಿಡಬಹುದು. ಆದರೆ ಅಂಶ್ ಸೋಲನ್ನು ಒಪ್ಪಿಕೊಳ್ಳಲಿಲ್ಲ. ರೈತರೊಂದಿಗೆ ವ್ಯವಹರಿಸುವ ಮೂಲಕ ಮತ್ತೆ ಅವರ ವಿಶ್ವಾಸವನ್ನು ಗಳಿಸಿದರು. ಬಳಿಕ ತಮ್ಮ ಮೇಲಿದ್ದ ಸಾಲ ಮತ್ತು ಬಾಕಿ ಹೊಣೆಗಾರಿಕೆಗಳನ್ನು ಹಂತ ಹಂತವಾಗಿ ಮರುಪಾವತಿಸಿದರು.
2022ರಲ್ಲಿ ಅಂಶ್ ಪಾಟಿದಾರ್ ಅರಿವಾ ಆರ್ಗಾನಿಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಜೈವಿಕ ಕೀಟನಾಶಕಗಳು ಮತ್ತು ಡ್ರೋನ್ ಆಧಾರಿತ ಕೃಷಿ ಪರಿಹಾರಗಳತ್ತ ಸಂಸ್ಥೆ ಗಮನಹರಿಸಿತು. ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸುವ ಮೂಲಕ ರೈತರಿಗೆ ನೀರು, ರಸಗೊಬ್ಬರ ಮತ್ತು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪರಿಹಾರಗಳನ್ನು ಸಂಸ್ಥೆ ಪರಿಚಯಿಸಿತು. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ನವೀನತೆಯನ್ನು ಅಳವಡಿಸಿಕೊಂಡ ಪರಿಣಾಮ ಉದ್ಯಮ ವೇಗವಾಗಿ ಬೆಳೆಯಿತು. ವರದಿಗಳ ಪ್ರಕಾರ, ಕೇವಲ ಒಂದು ವರ್ಷದೊಳಗೆ ಕಂಪನಿಯ ಮೌಲ್ಯಮಾಪನ ₹50 ಕೋಟಿಗೂ ಅಧಿಕವಾಯಿತು. ಇದರೊಂದಿಗೆ ಸುಮಾರು 15,000 ಎಕರೆ ಕೃಷಿ ಭೂಮಿಯಲ್ಲಿ 5,000ಕ್ಕೂ ಹೆಚ್ಚು ರೈತರಿಗೆ ಸಂಸ್ಥೆ ಬೆಂಬಲ ನೀಡಿದೆ ಎಂದು ಹೇಳಲಾಗಿದೆ.
ಕೇವಲ 17ನೇ ವಯಸ್ಸಿನಲ್ಲಿ ₹95 ಲಕ್ಷ ಸಾಲದ ಸುಳಿಗೆ ಸಿಲುಕಿದ್ದ ಯುವಕ, ಕೆಲವೇ ವರ್ಷಗಳಲ್ಲಿ ಅದೇ ಸವಾಲನ್ನು ಮೆಟ್ಟಿನಿಂತು ₹50 ಕೋಟಿಗೂ ಅಧಿಕ ಮೌಲ್ಯದ ಉದ್ಯಮ ಕಟ್ಟಿರುವುದು ಅಚ್ಚರಿ ಮೂಡಿಸುವಂತಿದೆ. ಅಂಶ್ ಪಾಟಿದಾರ್ ಅವರ ಕಥೆ ಕೇವಲ ಒಬ್ಬ ಯುವ ಉದ್ಯಮಿಯ ಯಶೋಗಾಥೆಯಲ್ಲ. ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿ, ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಧೈರ್ಯವಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಬದಲಿಸಬಹುದು ಎಂಬುದನ್ನು ತೋರಿಸುವ ಪ್ರೇರಣಾದಾಯಕ ಕಥೆಯಾಗಿದೆ.