
ಆನೆಗಳು ಕೇವಲ ಬಲಿಷ್ಠ ಪ್ರಾಣಿಗಳಷ್ಟೇ ಅಲ್ಲ, ಅವು ತುಂಬಾ ಬುದ್ಧಿವಂತ ಹಾಗೂ ಭಾವನಾತ್ಮಕ ಜೀವಿಗಳೂ ಹೌದು. ಇದಕ್ಕೆ ಸಾಕ್ಷಿಯಾಗುವ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ಇಷ್ಟಪಟ್ಟಿದ್ದು, ಆನೆಯ ಬುದ್ದಿವಂತಿಕೆ ಹಾಗೂ ಆ ಕ್ಷಣದ ಕ್ಯೂಟ್ ನಡವಳಿಕೆ ನೋಡಿ ಜನ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಪುಟಾಣಿ ಮರಿ ಆನೆ ಮಾಡಿದ್ದೇನು ಗೊತ್ತಾ?
ಆನೆಗಳ ಅಭಯಾರಣ್ಯದಲ್ಲಿ ಸಿಬ್ಬಂದಿಗಳು ಅನೆ ಮರಿಯೊಂದರ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ಹಣ್ಣುಗಳಿಂದ ಅಲಂಕರಿಸಿದ ಬಫೆಯನ್ನು ಸಿದ್ಧಪಡಿಸಿದ್ದರು. . ಆದರೆ ಅದನ್ನು ನೋಡಿದ ಆನೆ ನೇರವಾಗಿ ಮೇಜಿನ ಬಳಿ ಹೋಗಲಿಲ್ಲ. ಬದಲಿಗೆ, ತನ್ನ ಬೆನ್ನನ್ನು ತಿರುಗಿಸಿ ನಿಂತು, ಸರ್ಪ್ರೈಸ್ ಹಾಳಾಗದಂತೆ ಕಾಯುತ್ತಿರುವಂತೆಯೇ ವರ್ತಿಸಿತು. ಈ ಮುದ್ದಾದ ಕ್ಷಣ ಅಲ್ಲಿದ್ದ ಎಲ್ಲರ ಮುಖದಲ್ಲಿ ನಗು ಮೂಡಿಸಿತು. ಸ್ವಲ್ಪ ಸಮಯದ ಬಳಿಕ ಹಿಮ್ಮುಖವಾಗಿಯೇ ಟೇಬಲ್ ಬಳಿ ಬಂದ ಮರಿ ಆನೆ ನಂತರ ತಿರುಗಿ ನೋಡಿ, ತನ್ನ ಮುಂದೆ ಇದ್ದ ತಿಂಡಿಗಳನ್ನು ಖುಷಿಯಿಂದ ತನ್ನ ಸೊಂಡಿಲು ಚಾಚಿ ತಿನ್ನತೊಡಗಿದೆ.
ಅನೆಮರಿಯ ಹುಟ್ಟುಹಬ್ಬದ ಬಫೆಯಲ್ಲಿ ತಾಜಾ ಕಲ್ಲಂಗಡಿಗಳು, ಮಾವಿನಹಣ್ಣುಗಳು, ಬಾಳೆಹಣ್ಣುಗಳು ಮತ್ತು ಅದರ ಕೇರ್ ಟೇಕರ್ ತಯಾರಿಸಿದ ಇತರ ರುಚಿಕರವಾದ ತಿನಿಸುಗಳನ್ನು ಇಟ್ಟಿದ್ದರು. ಇದೆಲ್ಲಾ ಮರಿ ಆನೆಗಾಗಿ ಮಾಡಿದ ಸರ್ಪ್ರೈಸ್ ಆಗಿತ್ತು. ಅದನ್ನು ಕೆಡಿಸಲು ಪಾಪ ಆನೆಗೂ ಇಷ್ಟವಿರಲಿಲ್ಲ, ಹಾಗಾಗಿಯೇ ಅದು ಹಿಮ್ಮುಖವಾಗಿ ಬಂದು, ಟೇಬಲ್ ಬಳಿ ಬಂದು ನಂತರ ತಿರುಗಿ ಸಂತೋಷದಿಂದ ಹಣ್ಣುಗಳನ್ನು ಒಂದೊಂದಾಗಿ ತಿನ್ನತೊಡಗಿದೆ. ಸುತ್ತಲು ನೆರೆದ ಸಿಬ್ಬಂದಿಗಳು ಮರಿ ಆನೆಗೆ ಹ್ಯಾಪಿ ಬರ್ತ್ ಡೇ ಟು ಯೂ ಎಂದು ಹಾಡು ಹಾಡುತ್ತಿರುವುದನ್ನು ಸಹ ಕೇಳಬಹುದು. ಈ ಹೃದಯಸ್ಪರ್ಶಿ ಕ್ಯೂಟ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತನ್ನ ಕೇರ್ ಟೇಕರ್ ಗಳು ಹಾಗೂ ಆನೆಯ ನಡುವಿನ ಮುದ್ದಾದ ಸಂಬಂಧವನ್ನು ಇದು ಅಷ್ಟೇ ಮುದ್ದಾಗಿ ಬಿಂಬಿಸಿದೆ. ಈ ವಿಡಿಯೋ ನೋಡುಗರ ಮನೆ ಸೆಳೆಯುವಂತಿತ್ತು.
ಆನೆಗಳು ತಮ್ಮ ಅದ್ಭುತ ನೆನಪಿನ ಶಕ್ತಿ, ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗುಣ ಮತ್ತು ಮನುಷ್ಯರೊಂದಿಗೆ ಗಾಢ ಬಾಂಧವ್ಯ ಬೆಳೆಸುವ ಸಾಮರ್ಥ್ಯಕ್ಕೆ ಪ್ರಸಿದ್ಧ. ಈ ವಿಡಿಯೋ ಕೂಡ ಅದಕ್ಕೆ ಮತ್ತೊಂದು ಸುಂದರ ಉದಾಹರಣೆಯಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, "ಇಷ್ಟು ಬುದ್ಧಿವಂತ ಆನೆ ನೋಡಿರಲಿಲ್ಲ", "ಇದರ ಮುದ್ದಾದ ವರ್ತನೆ ಮನಸ್ಸನ್ನೇ ಕರಗಿಸಿತು", "ಹ್ಯಾಪಿ ಬರ್ತ್‌ಡೇ ಕ್ಯೂಟಿ!" ಎಂದು ಕಾಮೆಂಟ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.