
ಲವ್ ಇನ್ಶುರೆನ್ಸ್: ಚೀನಾದ ವಿಶಿಷ್ಟ ವಿಮಾ ಉತ್ಪನ್ನವೊಂದು ಇದ್ದಕ್ಕಿದ್ದಂತೆ ವೈರಲ್ ಆಗಿದೆ. 2016ರಲ್ಲಿ ವು ಎಂಬ ಚೀನಾ ಯುವತಿ ಕೇವಲ 199 ಯುವಾನ್ (ಸುಮಾರು 2,300 ರೂಪಾಯಿ) ನೀಡಿ 'ಲವ್ ಇನ್ಶುರೆನ್ಸ್' ಎಂಬ ವಿಚಿತ್ರ ಪಾಲಿಸಿ ಖರೀದಿಸಿದ್ದರು. ಒಂದು ದಶಕದ ಪ್ರೇಮಾಯಣದ ನಂತರ, ಈಕೆ ಮದುವೆಯಾದಾಗ ಕೈಗೆ ಬಂದಿದ್ದು ಬರೋಬ್ಬರಿ 10,000 ಯುವಾನ್‌ಗಳು (ಸುಮಾರು 1.15 ಲಕ್ಷ ರೂಪಾಯಿ). ಹೂಡಿಕೆ ಮಾಡಿದ ಹಣಕ್ಕಿಂತ 50 ಪಟ್ಟು ಹೆಚ್ಚಿನ ಲಾಭ ಪಡೆದ ಈಕೆಯ ಕಥೆ ಈಗ ಇಡೀ ಜಗತ್ತಿನಲ್ಲಿ ವೈರಲ್ ಆಗಿದೆ.
ನಾವೆಲ್ಲಾ ಆರೋಗ್ಯ ಅಥವಾ ಜೀವ ವಿಮೆಯ ಬಗ್ಗೆ ಕೇಳಿದ್ದೇವೆ, ಆದರೆ ಚೀನಾದ ವಿಮಾ ಕಂಪನಿಗಳು 2015-16ರಲ್ಲಿ ಈ ವಿಶಿಷ್ಟ 'ಲವ್ ಇನ್ಶುರೆನ್ಸ್' ಪರಿಚಯಿಸಿದ್ದವು. ಇದು ಕೇವಲ ಪ್ರೇಮಿಗಳಿಗಾಗಿಯೇ ವಿನ್ಯಾಸಗೊಳಿಸಲಾದ ಪಾಲಿಸಿ. ಪ್ರೇಮಿಗಳು ಅಥವಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಂಬಂಧದ ಮೇಲೆ ಕಟ್ಟುವ ಒಂದು ರೀತಿಯ ಬೆಟ್ (Bet) ಇದು. ನೀವು ಇಷ್ಟಪಟ್ಟ ವ್ಯಕ್ತಿಯ ಜೊತೆಗೇ ಇರುತ್ತೀರಿ ಎಂಬ ನಂಬಿಕೆ ನಿಮಗಿದ್ದರೆ, ಈ ವಿಮೆ ಮಾಡಿಸಬಹುದಿತ್ತು. ಒಂದು ವೇಳೆ ಪ್ರೇಮಿಗಳು ಬ್ರೇಕಪ್ ಮಾಡಿಕೊಂಡರೆ ಕಂಪನಿಗೆ ಲಾಭ, ಮದುವೆಯಾದರೆ ಪ್ರೇಮಿಗಳಿಗೆ ಲಾಭ!
ಈ ವಿಮೆಯ ಹಣ ಸಿಗಬೇಕೆಂದರೆ ಅಂದುಕೊಂಡಷ್ಟು ಸುಲಭವಿರಲಿಲ್ಲ. ಪಾಲಿಸಿ ಖರೀದಿಸಿದ ಮೂರು ವರ್ಷಗಳ ಒಳಗೇ ಮದುವೆಯಾಗುವಂತಿಲ್ಲ! ಅಂದರೆ, ನಿಮ್ಮ ಪ್ರೀತಿ ಕನಿಷ್ಠ 3 ವರ್ಷಗಳ ಕಾಲ ಟೆಸ್ಟ್ ಪಾಸ್ ಮಾಡಿರಬೇಕು. ಹಾಗೆಯೇ 10 ವರ್ಷ ಮೀರುವ ಮೊದಲೇ ಮದುವೆಯಾಗಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಈ ಡೆಡ್‌ಲೈನ್ ಒಳಗೆ ಮದುವೆಯಾದರೆ ಮಾತ್ರ ಲಕ್ಷಾಂತರ ರೂಪಾಯಿ ಅಥವಾ ಅರ್ಧ ಕ್ಯಾರೆಟ್ ವಜ್ರದ ಉಂಗುರವನ್ನು ಬಹುಮಾನವಾಗಿ ಪಡೆಯಲು ಅವಕಾಶವಿತ್ತು.
ಕಂಪನಿಯ ಗಿಮಿಕ್: 98% ಪ್ರೇಮಿಗಳು ಫೇಲ್!
ವಿಮಾ ಕಂಪನಿಗಳು ಈ ಪಾಲಿಸಿಯನ್ನು ಶುರು ಮಾಡಿದ್ದೇ ಒಂದು ಲೆಕ್ಕಾಚಾರದ ಮೇಲೆ. ಅವರ ಅಂಕಿಅಂಶಗಳ ಪ್ರಕಾರ, ಕಾಲೇಜು ದಿನಗಳಲ್ಲಿ ಪ್ರೀತಿ ಶುರು ಮಾಡಿದ 98% ದಂಪತಿಗಳು ಮೂರು ವರ್ಷಗಳ ಒಳಗೇ ಬ್ರೇಕಪ್ ಮಾಡಿಕೊಳ್ಳುತ್ತಾರೆ! ಅಂದರೆ, ಬಹುತೇಕರು ಮದುವೆಯ ಮೆಟ್ಟಿಲೇರುವುದಿಲ್ಲ, ಹಾಗಾಗಿ ಕಂಪನಿಗೆ ಹಣ ನೀಡುವ ಅವಶ್ಯಕತೆಯೇ ಇರುವುದಿಲ್ಲ. ಆದರೆ ವು ಎಂಬ ಮಹಿಳೆಯಂತಹ ಕೆಲವರು ಮಾತ್ರ ಹಠ ಹಿಡಿದು ಪ್ರೀತಿಸಿ, ಮದುವೆಯಾಗಿ ಕಂಪನಿಗೆ 'ಟೋಪಿ' ಹಾಕಿದ್ದಾರೆ.
ಕೊನೆಗೂ ಸರ್ಕಾರ ಹಾಕಿತು ಬ್ರೇಕ್!
ಈ ಲವ್ ಇನ್ಶುರೆನ್ಸ್ ಕ್ರೇಜ್ ನೋಡಿ ಚೀನಾ ಸರ್ಕಾರ ಬೆಚ್ಚಿಬಿದ್ದಿತ್ತು. 2017-18ರ ಅವಧಿಯಲ್ಲಿ ಸರ್ಕಾರ ಇದನ್ನು ನಿಷೇಧಿಸಿತು. ಇದು ವಿಮೆಯಲ್ಲ, ಬದಲಾಗಿ ಇದೊಂದು ಮಾರ್ಕೆಟಿಂಗ್ ಗಿಮಿಕ್ ಮತ್ತು ಜೂಜಾಟ ಎಂದು ಅಧಿಕಾರಿಗಳು ಕಿಡಿಕಾರಿದರು. ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ತರುವ ಇಂತಹ ಯೋಜನೆಗಳು ವಿಮಾ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಈ ಲವ್ ಇನ್ಶುರೆನ್ಸ್‌ಗೆ ಎಳ್ಳು ನೀರು ಬಿಟ್ಟರು.