14 ವರ್ಷ ದುಡಿದ ಕಂಪನಿಯಿಂದ ಲೇಆಫ್...56ರ ವಯಸ್ಸಿನಲ್ಲಿ ಪೋರ್ಟರ್ ಡೆಲಿವರಿ ಪಾರ್ಟ್ನರ್ ಆದ ವ್ಯಕ್ತಿ

Published : Jul 09, 2026, 04:28 PM IST
Laid off after 14 years 56 year old Noida man now works as Porter rider

ಸಾರಾಂಶ

14 ವರ್ಷಗಳ ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ 56 ವರ್ಷದ ವ್ಯಕ್ತಿ ಬದುಕಿಗಾಗಿ ಪೋರ್ಟರ್ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿರುವ ಹೃದಯಸ್ಪರ್ಶಿ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ ಬಳಿಕ ಬದುಕು ಸಾಗಿಸಲು 56 ವರ್ಷದ ವ್ಯಕ್ತಿಯೊಬ್ಬರು ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿರುವ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಲಿಂಕ್ಡ್‌ಇನ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಕಿರಣ್ ವರ್ಮಾ ಹಂಚಿಕೊಂಡಿರುವ ಈ ಪೋಸ್ಟ್ ಸಾವಿರಾರು ಮಂದಿಯ ಮನಮುಟ್ಟಿದೆ.

ನೋಯ್ಡಾದಲ್ಲಿ ಕೇವಲ ರೂಪಾಯಿ 40ಕ್ಕೆ ತುರ್ತು ಪತ್ರ ಕಳುಹಿಸಲು ಪೋರ್ಟರ್ ಸೇವೆ ಬುಕ್ ಮಾಡಿದ್ದ ಕಿರಣ್ ವರ್ಮಾ ಅವರ ಮನೆಗೆ 56 ವರ್ಷದ ಡೆಲಿವರಿ ಪಾರ್ಟ್ನರ್ ಮನೋಜ್ ಬಂದಿದ್ದರು. ಮೊದಲ ಮಹಡಿಗೆ ಮೆಟ್ಟಿಲೇರಿಕೊಂಡು ಬಂದ ಮನೋಜ್, "ಇಂದು ಕೆಲಸವೇ ಇರಲಿಲ್ಲ... ಕೆಲಸಕ್ಕಾಗಿ ಕಾಯುತ್ತಿದ್ದೆ" ಎಂದು ಹೇಳಿದ ಮಾತು ವರ್ಮಾ ಅವರ ಮನಸ್ಸನ್ನು ತಟ್ಟಿತು. ನಂತರ ಅವರನ್ನು ಕುಳ್ಳಿರಿಸಿ ಮಾತನಾಡಿದಾಗ ಅವರ ಬದುಕಿನ ಹಾದಿ ಬಗ್ಗೆ ಹೇಳಿದ್ದಾರೆ.

ಮನೋಜ್ ಅವರು 14 ವರ್ಷಗಳ ಕಾಲ ವಿಮಾ ಸಂಸ್ಥೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿದ್ದರು. ಆದರೆ 2023ರಲ್ಲಿ ನಡೆದ ಲೇಆಫ್ ವೇಳೆ ಉದ್ಯೋಗ ಕಳೆದುಕೊಂಡರು. ವಯಸ್ಸು ಮತ್ತು ಆರೋಗ್ಯ ಸಮಸ್ಯೆಯಿಂದ ಹೊಸ ಉದ್ಯೋಗ ಸಿಗದೆ, ಅನಿವಾರ್ಯವಾಗಿ ಪೋರ್ಟರ್ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಲೇಆಫ್ ಬಗ್ಗೆ ಕೇಳಿದಾಗ ಮನೋಜ್ ನೀಡಿದ ಉತ್ತರ ಅನೇಕರ ಮನ ಕಲಕಿದೆ. "ಅಡುಗೆ ಮಾಡುವಾಗ ಕರಿಬೇವಿನ ಸೊಪ್ಪನ್ನು ಮೊದಲು ಹಾಕುತ್ತಾರೆ. ಆದರೆ ಊಟ ಮಾಡುವಾಗ ಅದನ್ನೇ ಮೊದಲು ತೆಗೆದುಬಿಡುತ್ತಾರೆ," ಎಂದು ಹೇಳುವ ಮೂಲಕ ಅನುಭವಿಗಳ ಸ್ಥಿತಿಯನ್ನು ಕರಿಬೇವಿನ ಸೊಪ್ಪಿಗೆ ಹೋಲಿಸಿದರು.

ಈ ಘಟನೆ ಬಗ್ಗೆ ಪೋಸ್ಟ್ ಮಾಡಿದ ಕಿರಣ್ ವರ್ಮಾ, "ಜೀವನ ಕಷ್ಟ. ಆದರೆ ಕೆಲಸ ಮಾಡಲು ಮನಸ್ಸಿದ್ದರೂ ಅವಕಾಶ ಸಿಗದಿರುವುದು ಇನ್ನೂ ದೊಡ್ಡ ನೋವು" ಎಂದು ಬರೆದುಕೊಂಡಿದ್ದಾರೆ. ಮನೋಜ್ ಅವರ ಪರಿಶ್ರಮಕ್ಕೆ ಗೌರವ ಸೂಚಕವಾಗಿ ಡೆಲಿವರಿ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ನೀಡಿದ್ದಾಗಿ ತಿಳಿಸಿದ್ದಾರೆ.

ಈ ಪೋಸ್ಟ್ ವೈರಲ್ ಆದ ಬಳಿಕ ಸಾವಿರಾರು ಮಂದಿ ಮನೋಜ್ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅನುಭವಿ ಉದ್ಯೋಗಿಗಳಿಗೆ ಅವಕಾಶಗಳು ಕಡಿಮೆಯಾಗುತ್ತಿರುವುದು, ವಯೋಭೇದ (Ageism) ಹಾಗೂ ಗಿಗ್ ಆರ್ಥಿಕತೆಯ ಸವಾಲುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪೋರ್ಟರ್ ಸಂಸ್ಥೆಯೂ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಡೆಲಿವರಿ ಪಾರ್ಟ್ನರ್‌ಗಳ ಶ್ರಮವನ್ನು ಮೆಚ್ಚಿದೆ.

PREV
Read more Articles on
click me!

Recommended Stories

'ನಿಜ ಜೀವನದ ಹೀರೋ' ಸಾವಿನ ದವಡೆಯಿಂದ ವ್ಯಕ್ತಿಯನ್ನು ಪಾರು ಮಾಡಿದ ರೈಲ್ವೆ ಗೇಟ್‌ಮನ್; ವಿಡಿಯೋ ವೈರಲ್!
ಯಾವ ಪದಾರ್ಥ ಬೇಡ, ಇದೊಂದು ಸಲಕರಣೆ ಸಾಕು.. ಎಷ್ಟೇ ಉಜ್ಜಿದ್ರೂ ಹೋಗದ ಮೊಂಡಾದ ಜಿಡ್ಡು ಐದು ನಿಮಿಷದಲ್ಲಿ ಹೋಗುತ್ತೆ