ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ವಿಡಿಯೋಗಳು ವೈರಲ್ ಆಗ್ತಾನೆ ಇರ್ತಾವೆ. ಇವುಗಳಲ್ಲಿ ಕೆಲವು ವಿಡಿಯೋಗಳು ರಂಜಿಸಿದರೆ, ಮತ್ತೆ ಕೆಲವು ವಿಡಿಯೋಗಳು ಜಗತ್ತಿನಲ್ಲಿ ಇಂತಹವರು ಇರ್ತಾರ ಎಂದು ಯೋಚಿಸುವಂತೆ ಮಾಡುತ್ತವೆ. ಸದ್ಯ ಅಂತಹ ಒಂದು ವಿಡಿಯೋ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ವಿಡಿಯೋದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿರುವುದು ಬಾಲಕನ ಮುಗ್ಧತೆ. ಇದು ಎಲ್ಲರ ಹೃದಯ ಗೆದ್ದಿದೆ. ನಿಮ್ಮಲ್ಲಿ ಉತ್ತಮ ಮೌಲ್ಯಗಳಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ ಎಂದು ಬಾಲಕ ತೋರಿಸಿದ್ದಾನೆ. ಇದು ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಬಾಲಕನ ನಡವಳಿಕೆಗೆ ಫಿದಾ ಆದ ಜನ್ರು
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಓರ್ವ ಬಾಲಕ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಪ್ರಯಾಣದ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಇದ್ದಕ್ಕಿದ್ದಂತೆ ಅವನ ಕೈಯಿಂದ ನೆಲದ ಮೇಲೆ ಬೀಳುತ್ತದೆ. ಬಾಟಲಿ ಬಿದ್ದ ತಕ್ಷಣ, ಡ್ರಿಂಕ್ಸ್ ಚೆಲ್ಲುತ್ತದೆ ಮತ್ತು ನೆಲವು ಒದ್ದೆಯಾಗುತ್ತದೆ. ಅಂತಹ ಪರಿಸ್ಥಿತಿ ಬಂದಾಗ ನಮ್ಮ ಮಕ್ಕಳು ಏನು ಮಾಡಬಹುದು ಎಂದು ಯೋಚಿಸಿ. ನಮ್ಮ ಮಕ್ಕಳು ಏನ್ ಮಾಡ್ತಾರೋ ಗೊತ್ತಿಲ್ಲ ಆದ್ರೆ ಆ ಮಗು ಏನು ಮಾಡಿದೆ ಅಂತೀರಾ?. ಸದ್ಯ ಬಾಲಕನ ಆ ನಡವಳಿಕೆಯೇ ಇಂದು ವಿಡಿಯೋ ವೈರಲ್ ಆಗಲು ಕಾರಣವಾಗಿದೆ. ಇದೇ ಕಾರಣಕ್ಕೆ ಜನರು ಇದನ್ನು ಹೆಚ್ಚೆಚ್ಚು ಶೇರ್ ಮಾಡ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಇನ್ನು ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ ಕೂಲ್ ಡ್ರಿಂಕ್ಸ್ ಬಾಟಲ್ ಕೆಳಗೆ ಬಿದ್ದ ತಕ್ಷಣ, ಬಾಲಕ ತನ್ನ ಬ್ಯಾಗ್‌ನಿಂದ ಟಿಶ್ಯೂ ಪೇಪರ್ ತೆಗೆದು ಚೆಲ್ಲಿದ ಪಾನೀಯವನ್ನು ತನ್ನ ಮನೆ ಎಂಬಂತೆಯೇ ಒರೆಸುತ್ತಾನೆ. ಈ ದೃಶ್ಯವನ್ನು ನೋಡಿ ಅಲ್ಲಿದ್ದ ಇತರ ಪ್ರಯಾಣಿಕರು ಶಾಕ್ ಆಗ್ತಾರೆ. ಯಾಕಂದ್ರೆ ಅಲ್ಲಿ ನರೆದಿದ್ದ ಜನರು ಬಾಲಕನು ಈ ರೀತಿ ನಡೆದುಕೊಳ್ಳುತ್ತಾನೆ ಎಂದು ಊಹಿಸಿರಲಿಲ್ಲ. ಬಹುತೇಕರು ಸಾರ್ವಜನಿಕ ಸ್ಥಳವೆಂದರೆ ಸಾಕು ಕಸ ಹಾಕುವ ಅಥವಾ ನಿರುಪಯುಕ್ತ ವಸ್ತುಗಳನ್ನು ಚೆಲ್ಲಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಈ ಬಾಲಕನ ನಡೆ ಇದೀಗ ಎಲ್ಲರಿಗೂ ದೊಡ್ಡ ಪಾಠವನ್ನು ಕಲಿಸಿದೆ.
ವಿಡಿಯೋ ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಮತ್ತು ಈ ಘಟನೆ ಚೀನಾದಲ್ಲಿ ನಡೆದಿದೆ ಎಂಬುದು ತಿಳಿದುಬಂದಿದೆ. ಆದರೂ, ಆ ಮಗು ಹಿರಿಯರಿಗೆ ಮಾದರಿಯಾಗಿ ನಿಂತ ರೀತಿ ಎಲ್ಲರನ್ನೂ ಆಕರ್ಷಿಸಿದೆ. ಇದು ಕೇವಲ ಸಾಮಾನ್ಯ ವಿಡಿಯೋ ಅಲ್ಲ, ಮಾನವೀಯತೆ ಮತ್ತು ಉತ್ತಮ ಮೌಲ್ಯಗಳ ಒಂದು ನೋಟ. ಈ ಕ್ಲಿಪ್ ಅನ್ನು Insta @ghantaa ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ಮಗುವನ್ನು ಜನರು ಇನ್ನಿಲ್ಲದಂತೆ ಪ್ರಶಂಸಿಸುತ್ತಿರುವುದನ್ನು ಕಾಣಬಹುದು. ಪೋಷಕರ ಸರಿಯಾದ ಪಾಲನೆಯ ಪರಿಣಾಮವು ಮಕ್ಕಳ ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಕೆಲವರು ಹೇಳುತ್ತಾರೆ, ಮತ್ತೆ ಕೆಲವರು ಜವಾಬ್ದಾರಿ ಅನ್ನೋದು ವಯಸ್ಸಿನ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳುತ್ತಾರೆ.
ಕೇರಳದಲ್ಲಿ ಗಮನಸೆಳೆದ ಮತ್ತೋರ್ವ ಬಾಲಕ
ಕೇರಳದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ, ಒರ್ವ ವಿದ್ಯಾರ್ಥಿ ತನ್ನ ಅದ್ಭುತ ಮತ್ತು ವಿಶಿಷ್ಟ ಪ್ರದರ್ಶನದಿಂದ ಎಲ್ಲರ ಹೃದಯ ಗೆದ್ದಿದ್ದಾನೆ. ವಿಡಿಯೋವನ್ನು @kailash_mannady ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಆದ್ದರಿಂದ ಇಂದಿನ ಸುದ್ದಿಯಲ್ಲಿ ಈ ವಿಡಿಯೋದ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ..
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಈ ವಿಡಿಯೋದಲ್ಲಿ ವಿದ್ಯಾರ್ಥಿಯನ್ನು ಆಸ್ಟ್ರಿಚ್ ನಂತೆ ಡ್ರೆಸ್ ಮಾಡಲಾಗಿದೆ. ತಲೆಯಿಂದ ಪಾದದವರೆಗೆ ದೊಡ್ಡ ಕೊಕ್ಕು, ಉದ್ದವಾದ ಗರಿಗಳು ಮತ್ತು ತೆಳುವಾದ ಉದ್ದ ಕಾಲುಗಳನ್ನು ಹೊಂದಿರುವ ವೇಷಭೂಷಣವನ್ನು ಧರಿಸಲಾಗಿದೆ. ಥಟ್ ಅಂತ ನೋಡಿದರೆ, ನಿಜವಾದ ಆಸ್ಟ್ರಿಚ್ ವೇದಿಕೆಯ ಮೇಲೆ ಬಂದಂತೆ ತೋರುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಈ ಉಡುಪಿನಲ್ಲಿ ಅವನಿಗೆ ಸ್ವಲ್ಪ ತೊಂದರೆಯಾಗುತ್ತಿರುವಂತೆ ಕಂಡುಬರುತ್ತದೆ. ಆದ್ದರಿಂದ ಇಬ್ಬರು ಶಿಕ್ಷಕರು ಅವನನ್ನು ವೇದಿಕೆಯ ಮೇಲೆ ಕರೆತಂದು ಪ್ರದರ್ಶನದ ಉದ್ದಕ್ಕೂ ಸಹಾಯ ಮಾಡುತ್ತಲೇ ಇದ್ದರು.
ಕೊನೆಯಲ್ಲಿ ಕಂಡುಬಂದ ಟ್ವಿಸ್ಟ್
ಈ ಪುಟ್ಟ ಆಸ್ಟ್ರಿಚ್ ವೇದಿಕೆಗೆ ಬಂದ ತಕ್ಷಣ ಅಲ್ಲಿದ್ದ ಜನರೆಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ವಿದ್ಯಾರ್ಥಿಯ ಸ್ಟೆಪ್ಸ್ ಮತ್ತು ವೇಷಭೂಷಣವು ವಾತಾವರಣವನ್ನು ಇನ್ನಷ್ಟು ಮೋಜಿನಿಂದ ಕೂಡಿಸಿತು. ಪ್ರೇಕ್ಷಕರ ಮುಖದಲ್ಲಿ ನಗು ಇತ್ತು ಮತ್ತು ಅವನ ಮುದ್ದಾದ ವರ್ತನೆಗಳನ್ನು ನೋಡಿ ಎಲ್ಲರೂ ಮಂತ್ರಮುಗ್ಧರಾದರು. ಶೋನ ಅತ್ಯಂತ ತಮಾಷೆಯ ಕ್ಷಣವು ಕೊನೆಯಲ್ಲಿ ಕಂಡುಬಂದಿತು. ಅದೇನಪ್ಪಾ ಅಂದ್ರೆ ಈ ಆಸ್ಟ್ರಿಚ್ ಮೊಟ್ಟೆ ಇಟ್ಟಿತು. ಇದನ್ನು ನೋಡಿ ಅಲ್ಲಿದ್ದ ಜನರೆಲ್ಲರೂ ನಗಲು ಪ್ರಾರಂಭಿಸಿದರು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ಈ ವಿಶಿಷ್ಟ ನಟನೆಯನ್ನು ನೋಡಿ ಎಲ್ಲರೂ ನಕ್ಕರು.