
ಪಾನಿಪುರಿ ಅಂಗಡಿಯಲ್ಲಿ ದಿನನಿತ್ಯ ಕೊಡುವುದಕ್ಕಿಂತ 2 ಪಾನಿಪುರಿ ಕಡಿಮೆ ಕೊಟ್ಟಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬಳು ಪಾನಿಪುರಿ ಅಂಗಡಿ ಮುಂದಿರುವ ರಸ್ತೆಯ ಮಧ್ಯದಲ್ಲಿ ಕುಳಿತು ದೊಡ್ಡ ರಂಪಾಟ ಮಾಡಿದ್ದಾಳೆ. ರಸ್ತೆ ಬಿಟ್ಟು ಹೋಗುವಂತೆ ಹೇಳಿದವರ ಮುಂದೆ ನನಗೆ ಕಡಿಮೆ ಪಾನಿಪುರಿ ಕೊಟ್ಟಿದ್ದಾನೆಂದು ದುಃಖಿಸಿ ಅಳುತ್ತಾ ನೋವು ತೋಡಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ.
ಯುವತಿಯರು, ಮಹಿಳೆಯರು ಹೆಚ್ಚಾಗಿ ಪಾನಿಪುರಿಯನ್ನು ತುಸು ಹೆಚ್ಚಾಗಿಯೇ ಇಷ್ಟಪಡುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಂದು ಬಾರಿ ಪಾನಿಪುರಿ ಮಾರಾಟ ಮಾಡುವವನೇ ಅವರ ಫೇವರೀಟ್ ಆಗಿರುತ್ತಾನೆ. ಗಂಡ ಅಥವಾ ಲವ್ವರ್ ಧಾರಾಳವಾಗಿ ಪಾನಿಪುರಿ ಕೊಡಿಸುವವರಾಗಿದ್ದರೆ ಇನ್ನೂ ಹೆಚ್ಚು ಪಾನಿಪುರಿ ತಿನ್ನುತ್ತಾರೆ. ಕೆಲವೊಮ್ಮೆ ಕಡಿಮೆ ಪಾನಿಪುರಿ ಕೊಟ್ಟರೆ ಅವರಿಗಾಗುವ ಬೇಸರಕ್ಕೆ ಮಿತಿಯೇ ಇರುವುದಿಲ್ಲ. ಇಲ್ಲಿಯೂ ಕೂಡ ಒಬ್ಬ ಯುವತಿಗೆ ಕೇವಲ ಎರಡು ಪಾನಿಪುರಿ ಕಡಿಮೆ ಕೊಟ್ಟಿದ್ದಕ್ಕೆ ಭಾರೀ ಕೋಪಗೊಂಡು ರಸ್ತೆಯಲ್ಲಿಯೇ ಅಳುತ್ತಾ ಕುಳಿತುಕೊಂಡಿದ್ದಾಳೆ. ದಾರಿ ಹೋಕರು ರಸ್ತೆಯಿಂದ ಸೈಡಿಗೆ ಹೋಗುವಂತೆ ಹಾಗೂ ಸುಮ್ಮನಿರುವಂತೆ ಮನವಿ ಮಾಡಿದರೂ ದುಃಖವನ್ನು ತಡೆಯಲಾಗದೇ ದುಃಖಿಸಿ ಅಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಈ ಘಟನೆ ಗುಜರಾತ್‌ನ ವಡೋದರ ನಗರದಲ್ಲಿ ನಡೆದಿದೆ. ಕೇವಲ 2 ಪಾನೀಪುರಿ ಕಡಿಮೆ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡ ಮಹಿಳೆಯೊಬ್ಬರು ರಸ್ತೆಯ ಮಧ್ಯೆ ಕುಳಿತುಕೊಂಡು ಧರಣಿ ನಡೆಸಿದ್ದಾಳೆ. ವಡೋದರ ನಗರದ ಸುರಸಾಗರ್ ಕೆರೆಯ ಹತ್ತಿರ ಇರುವ ಪಾನೀಪುರಿ ಅಂಗಡಿಗೆ ಹೋಗಿ ₹20 ನೀಡಿ ಪಾನೀಪುರಿ ಖರೀದಿಸಿದ್ದರು. ಸಾಮಾನ್ಯವಾಗಿ 6 ಪಾನೀಪುರಿ ನೀಡಬೇಕಾದಲ್ಲಿ, ಅಂಗಡಿಯವರು ಕೇವಲ 4 ಪಾನೀಪುರಿ ಮಾತ್ರ ನೀಡಿದರೆಂದು ಆಕೆ ಆರೋಪಿಸಿದರು. ಇದರಿಂದ ಬೇಸರಗೊಂಡ ಆಕೆ, ತಕ್ಷಣವೇ ರಸ್ತೆಯ ಮಧ್ಯೆ ಕುಳಿತುಕೊಂಡು ಧರಣಿ ಆರಂಭಿಸಿದರು.
ಅಕಸ್ಮಾತ್ತಾಗಿ ರಸ್ತೆ ಮಧ್ಯೆ ಕುಳಿತ ಮಹಿಳೆಯನ್ನು ನೋಡಲು ಸುತ್ತಮುತ್ತಲಿನ ಜನರು ಗುಂಪಾಗಿ ಸೇರುತ್ತಿದ್ದರು. ಜನರು ಕಾರಣ ವಿಚಾರಿಸಿದಾಗ, ಆಕೆ ಕಣ್ಣೀರಿನಿಂದ ತತ್ತರಿಸಿ ಮಾತನಾಡುತ್ತಾ, 'ನಾನು 6 ಪಾನೀಪುರಿಗಾಗಿ ಹಣ ಕೊಟ್ಟಿದ್ದೇನೆ, ಆದರೆ ಕೇವಲ 4 ಮಾತ್ರ ಕೊಟ್ಟಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಘಟನಾ ಸ್ಥಳದಲ್ಲಿ ಜನಸ್ತೋಮ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಸಮಾಧಾನಪಡಿಸಿ ಧರಣಿ ಮುಗಿಸಲು ಮನವೊಲಿಸಿದರು. ನಂತರ ಪರಿಸ್ಥಿತಿ ಶಾಂತಗೊಂಡಿತು.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಟ್ವಿಟ್ಟರ್ (X) ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ನೆಟ್ಟಿಗರು ಹಾಸ್ಯಾತ್ಮಕ ಟೀಕೆಗಳ ಜೊತೆಗೆ ಗಂಭೀರ ಚರ್ಚೆಯನ್ನೂ ಪ್ರಾರಂಭಿಸಿದ್ದಾರೆ. ಒಬ್ಬರು ವ್ಯಂಗ್ಯವಾಗಿ, 'ಭಾರತದ ಸಂವಿಧಾನದ 21ನೇ ವಿಧಿ ಜೀವಿಸುವ ಹಕ್ಕು ನೀಡುತ್ತದೆ. ಇದರಲ್ಲಿ ₹20 ಕೊಟ್ಟವರಿಗೆ 6 ಪಾನೀಪುರಿ ಸಿಗುವ ಹಕ್ಕೂ ಸೇರಿದೆ. ಕಡಿಮೆ ಕೊಡುವುದು ಸಂವಿಧಾನ ಉಲ್ಲಂಘನೆ!' ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ಗುಜರಾತ್‌ನಲ್ಲಿ ಇಷ್ಟು ಬಡತನವೇ? 2 ಪಾನೀಪುರಿಗೆ ಹೀಗೆ ಕುಳಿತು ಪ್ರತಿಭಟನೆ? ಎಂದು ಪ್ರಶ್ನಿಸಿದ್ದಾರೆ. ಹೆಚ್ಚುಮಂದಿ ಈ ಘಟನೆಯನ್ನು ಪಾನೀಪುರಿ ಪ್ರೇಮದ ಉದಾಹರಣೆಯೆಂದು ಹೇಳಿ ಮೆಮೆಗಳು ಹಂಚುತ್ತಿದ್ದಾರೆ. ಕೇವಲ ಎರಡು ಪಾನೀಪುರಿಗಾಗಿ ನಡೆದ ಈ ಧರಣಿ, ಆಹಾರ ಮಾರಾಟಗಾರರ ಮೇಲೆ ನೈತಿಕತೆ ಮತ್ತು ಗ್ರಾಹಕ ಹಕ್ಕುಗಳ ಚರ್ಚೆಯನ್ನು ಪ್ರಾರಂಭಿಸಿದೆ. ಸಣ್ಣ ವಿಷಯಕ್ಕೂ ಕಾನೂನು ಪ್ರಕ್ರಿಯೆ ಬಳಸುವ ಸ್ಥಿತಿ ಸಮಾಜದ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.