
ನವದೆಹಲಿ (ಮೇ.26) ಭಾರತ ಹಾಗೂ ಪಾಕಿಸ್ತಾನದ ಗಡಿ ಯಾವತ್ತು ಗರಿಷ್ಠ ಭದ್ರತೆಯಲ್ಲಿರುತ್ತೆ. ಒಂದೆಡೆ ಫೆನ್ಸಿಂಗ್, ಮತ್ತೊಂದೆಡೆ ಬಂಕರ್, ಪೋಸ್ಟ್ ಹೀಗೆ ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗುತ್ತೆ. ಸುಂದರ ಪ್ರದೇಶದಲ್ಲಿ ಭಾರತೀಯ ಯೋಧರು ಕಾಯುತ್ತಿರುವ ವಿಡಿಯೋ, ಅಪ್ರಚೋದಿತ ಗುಂಡಿನ ದಾಳಿ ವೇಳೆ ತಿರುಗೇಟು ಕೊಟ್ಟ ವಿಡಿಯೋ ಹೀಗೆ ಗಡಿಯ ಹಲವು ವಿಡಿಯೋಗಳು, ಅಲ್ಲಿನ ಪ್ರದೇಶದ ವಿಡಿಯೋಗಳು ಈಗಾಗಲೇ ಹರಿದಾಡಿದೆ. ಆದರೆ ಇದೇ ಭಾರತ ಹಾಗೂ ಪಾಕಿಸ್ತಾನ ಗಡಿ ರಾತ್ರಿ ವೇಳೆ ಹೇಗೆ ಕಾಣಿಸುತ್ತೆ? ವಿಮಾನದಿಂದ ತೆಗೆದ ವಿಡಿಯೋ ಒಂದು ಇದೀಗ ಭಾರಿ ಸದ್ದು ಮಾಡುತ್ತಿದೆ.
ಇಂಡಿಗೋ ವಿಮಾನ ಪ್ರಯಾಣದ ವೇಳೆ ಪೈಲೆಟ್ ಕಾಕ್‌ಪಿಟ್‌ನಿಂದ ತೆಗೆದ ಅದ್ಭುತ ವಿಡಿಯೋ ಇದು. ರಾತ್ರಿ ವೇಳೆ ಭಾರತದ ಗಡಿ ಮೇಲೆ ಹಾರಾಡುತ್ತಿದ್ದ ಇಂಡಿಗೋ ವಿಮಾನದಿಂದ ಪೈಲೆಟ್ ಪ್ರದೀಪ್ ಕೃಷ್ಣನ್ ಈ ವಿಡಿಯೋ ಸೆರೆ ಹಿಡಿದ್ದಾರೆ. ಇದೇ ವೇಳೆ ವಿಮಾನದ ಪ್ರಯಾಣಿಕರಿಗೆ ಪ್ರದೀಪ್ ಕೃಷ್ಣನ್ ಮಾಹಿತಿ ನೀಡಿದ್ದಾರೆ. ಗಡಿಯಲ್ಲಿ ಫೆನ್ಸಿಂಗ್ ಮಾಡಿ ಲೈಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಇಡೀ ಗಡಿಯ ಉದ್ದಕ್ಕೂ ಅದ್ಭುತ ದೃಶ್ಯಕಾವ್ಯವಿದೆ. ವಿಮಾನ ಮೇಲಿನಿಂದ ನೋಡುವಾಗ ಭಾರತ ಹಾಗೂ ಪಾಕಿಸ್ತಾನ ಗಡಿ ಅದ್ಭುತವಾಗಿ ಕಾಣಿಸುತ್ತಿದೆ. ಆದರೆ ಗಡಿಯಲ್ಲಿನ ಪರಿಸ್ಥಿತಿ ಭಿನ್ನ.
ಇಂಡಿಗೋ ಪೈಲೆಟ್ ಪ್ರದೀಪ್ ಕೃಷ್ಣನ್ ಭಾರತ ಹಾಗೂ ಪಾಕಿಸ್ತಾನ ಗಡಿ ಮೇಲಿನಿಂದ ವಿಮಾನ ಹಾರಾಡುತ್ತಿರುವಾಗ ಪ್ರಯಾಣಿಕರಿಗೆ ಅನೌನ್ಸ್ ಮಾಡಿ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರೆ ನೀವು ಈಗ ವಿಮಾನದಿಂದ ಕೆಳಗೆ ನೋಡಿದರೆ ಅದ್ಭುತ ದೃಶ್ಯ ಕಾಣಸಿಗುತ್ತದೆ. ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ, ಜೊತೆಗೆ ಅತೀ ಗರಿಷ್ಠ ಭದ್ರತೆಯೂ ಇಲ್ಲಿದೆ. ಇದು ಭಾರತ ಹಾಗೂ ಪಾಕಿಸ್ತಾನ ಗಡಿ ಎಂದು ಪ್ರದೀಪ್ ಕೃಷ್ಣನ್ ಮಾಹಿತಿ ನೀಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿಯ ಹಲವು ಭಾಗದಲ್ಲಿ ಈ ರೀತಿಯ ಫೆನ್ಸಿಂಗ್ ಹಾಕಲಾಗಿದೆ. ಕೆಲ ವಿವಾದಿತ ಪ್ರದೇಶ ಹಾಗೂ ಅಸಾಧ್ಯ ಪ್ರದೇಶಗಳಲ್ಲಿ ಈ ರೀತಿ ಫೆನ್ಸಿಂಗ್ ಮಾಡಿಲ್ಲ. ಭಾರತ ಹಾಗೂ ಪಾಕಿಸ್ತಾನ ಗಡಿಯ ಫೆನ್ಸಿಂಗ್ ಪ್ರದೇಶಗಳಲ್ಲಿ ರಾತ್ರಿ ವೇಳೆ ಲೈಟ್ ಹಾಕಲಾಗುತ್ತದೆ. ಇಷ್ಟೇ ಅಲ್ಲ ಬೆಳಗ್ಗೆಯಂತೆ ರಾತ್ರಿ ಕೂಡ ಭಾರತೀಯ ಯೋಧರು ಗಡಿ ಕಾಯುತ್ತಾರೆ.
ಈ ವಿಡಿಯೋ ನೋಡಿದ ಹಲವರು ಕಮೆಂಟ್ ಮಾಡಿದ್ದಾರೆ. ಅದ್ಭುತ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ವೇಳೆ ಗಡಿಯಲ್ಲಿನ ವಿದ್ಯುತ್ ಬಿಲ್ ಯಾರು ಪಾವತಿಸುತ್ತಾರೆ, ಅಲ್ಲೂ ಕೂಡ 200 ಯೂನಿಟ್ ಉಚಿತ ಇದೆಯಾ ಎಂದು ಹಾಸ್ಯ ಮಾಡಿದ್ದಾರೆ.