Viral: ನಡುಆಕಾಶದಲ್ಲೇ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದ ಲಘು ವಿಮಾನ: ರೆಕ್ಕೆ ಸೀಳಿಬಿದ್ದರೂ ಪ್ರಾಣಾಪಾಯದಿಂದ ಪಾರಾದ ಮಹಿಳೆ!

Published : May 25, 2026, 06:31 PM IST
Plane Hits Paraglider Mid-Air

ಸಾರಾಂಶ

ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಮಹಿಳೆಗೆ ಲಘು ವಿಮಾನವೊಂದು ಡಿಕ್ಕಿ ಹೊಡೆದಿದೆ. ವಿಮಾನದ ಪ್ರೊಪೆಲ್ಲರ್‌ನಿಂದ ಪ್ಯಾರಾಚೂಟ್ ಹರಿದರೂ, ಮಹಿಳೆ ತನ್ನ ತುರ್ತು ಪ್ಯಾರಾಚೂಟ್ ಬಳಸಿ ಪವಾಡಸದೃಶವಾಗಿ ಪಾರಾಗಿದ್ದು, ಈ ದೃಶ್ಯ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಯೆನ್ನಾ (ಮೇ.25): ನಡುಆಕಾಶದಲ್ಲಿ ಹಾರಾಡುತ್ತಿದ್ದ ಪ್ಯಾರಾಗ್ಲೈಡರ್‌ಗೆ ಲಘು ವಿಮಾನವೊಂದು ನೇರವಾಗಿ ಡಿಕ್ಕಿ ಹೊಡೆದು, ಅದರ ಪ್ಯಾರಾಚೂಟ್ ರೆಕ್ಕೆಗಳನ್ನು ಸೀಳಿಕೊಂಡು ಹೋದ ಅತ್ಯಂತ ಭಯಾನಕ ಹಾಗೂ ರೋಚಕ ಘಟನೆಯೊಂದು ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಸಂಭವಿಸಿದೆ. ವಿಮಾನ ಡಿಕ್ಕಿಯಾದ ರಭಸಕ್ಕೆ ಮಹಿಳಾ ಪ್ಯಾರಾಗ್ಲೈಡರ್ ನಿಯಂತ್ರಣ ತಪ್ಪಿ ಆಕಾಶದಿಂದ ಭೂಮಿಯತ್ತ ವೇಗವಾಗಿ ಸುರುಳಿಸುತ್ತುತ್ತಾ ಬಿದ್ದರೂ, ಕೊನೆಕ್ಷಣದಲ್ಲಿ ತುರ್ತು ಪ್ಯಾರಾಚೂಟ್ (Reserve Parachute) ಬಳಸುವ ಮೂಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಇಡೀ ರೋಮಾಂಚಕ ದೃಶ್ಯಗಳು ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಉತ್ತರ ಆಸ್ಟ್ರಿಯಾದ ಪ್ಯಾರಾಗ್ಲೈಡಿಂಗ್‌ಗೆ ಅತ್ಯಂತ ಪ್ರಸಿದ್ಧ ತಾಣವಾಗಿರುವ 'ಶ್ಮಿಟ್ಟೆನ್‌ಹೋಹೆ' (Schmittenhohe) ಪರ್ವತದ ಬಳಿ ಶನಿವಾರ ಮಧ್ಯಾಹ್ನ ಈ ಆಘಾತಕಾರಿ ಘಟನೆ ನಡೆದಿದೆ.

ರೆಕ್ಕೆ ಸೀಳಿದ ಪ್ರೊಪೆಲ್ಲರ್; ಆಕಾಶದಲ್ಲೇ ಕಿರುಚಾಡಿದ ಸಬ್ರಿನಾ!

ಸಾಲ್ಜ್‌ಬರ್ಗ್ ರಾಜ್ಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, 44 ವರ್ಷದ ಅತ್ಯಂತ ಅನುಭವಿ ಪ್ಯಾರಾಗ್ಲೈಡರ್ ಆಗಿರುವ ಸಬ್ರಿನಾ ಎಂಬುವವರು ತಮ್ಮ ಪ್ಯಾರಾಚೂಟ್‌ಗೆ ಕ್ಯಾಮೆರಾ ಅಳವಡಿಸಿಕೊಂಡು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದರು. ಈ ವೇಳೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ದೃಶ್ಯವೀಕ್ಷಣೆ ವಿಮಾನವೊಂದು (Sightseeing Plane) ಹಠಾತ್ ಆಗಿ ಅವರ ತಲೆಯ ಕೆಲವೇ ಅಡಿಗಳ ಮೇಲಿಂದ ಹಾದುಹೋಗಿದೆ. ಈ ವೇಳೆ ವಿಮಾನದ ಪ್ರೊಪೆಲ್ಲರ್ ಪ್ಯಾರಾಗ್ಲೈಡರ್‌ನ ಮೇಲ್ಛಾವಣಿಯ (Canopy) ರೆಕ್ಕೆಗಳನ್ನು ಭೀಕರವಾಗಿ ಸೀಳಿಕೊಂಡು ಮುನ್ನುಗ್ಗಿದೆ.

ಸಬ್ರಿನಾ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಫರ್ಸ್ಟ್‌ ಪರ್ಸನ್‌ ವಿಡಿಯೋ ತುಣುಕಿನಲ್ಲಿ, ವಿಮಾನ ಡಿಕ್ಕಿಯಾದ ತಕ್ಷಣ ಪ್ಯಾರಾಚೂಟ್ ರೆಕ್ಕೆಗಳು ಎರಡು ಭಾಗವಾಗಿ ಸೀಳಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ತಕ್ಷಣವೇ ನಿಯಂತ್ರಣ ಕಳೆದುಕೊಂಡ ಸಬ್ರಿನಾ ಆಕಾಶದಲ್ಲೇ ಜೋರಾಗಿ ಕಿರುಚಾಡುತ್ತಾ ತಲೆಕೆಳಗಾಗಿ ಭೂಮಿಯತ್ತ ಬೀಳಲು ಆರಂಭಿಸಿದ್ದಾರೆ. ಆದರೆ, ಅತ್ಯಂತ ಅನುಭವಿಯಾಗಿದ್ದ ಅವರು ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೆ, ತಕ್ಷಣವೇ ತಮ್ಮ ಬಳಿಯಿದ್ದ ತುರ್ತು ಮೀಸಲು ಪ್ಯಾರಾಚೂಟ್ ಅನ್ನು (Reserve Parachute) ಎಳೆದು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಅವರು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ.

ಪೊಲೀಸ್ ಹೆಲಿಕಾಪ್ಟರ್ ಮೂಲಕ ರಕ್ಷಣೆ; ಇಬ್ಬರೂ ಸೇಫ್!

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಟ್ರಿಯನ್ ಪೊಲೀಸರು, ಹೆಲಿಕಾಪ್ಟರ್ ಮೂಲಕ ದುರಂತ ನಡೆದ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ತದನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ. "ಮೋಟರ್ ವಿಮಾನದ ಪ್ರೊಪೆಲ್ಲರ್ ಪ್ಯಾರಾಗ್ಲೈಡರ್‌ಗೆ ತೀವ್ರ ಹಾನಿ ಮಾಡಿತ್ತು. ಆದರೆ, ಅನುಭವಿ ಪ್ಯಾರಾಗ್ಲೈಡರ್ ಸಮಯಪ್ರಜ್ಞೆ ಮೆರೆದು ಮೀಸಲು ಪ್ಯಾರಾಚೂಟ್ ನಿಯೋಜಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ" ಎಂದು ಎನ್‌ಬಿಸಿ (NBC) ನ್ಯೂಸ್ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿದೆ.

ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಪ್ಯಾರಾಗ್ಲೈಡರ್ ಮಹಿಳೆ ಹಾಗೂ ಲಘು ವಿಮಾನದ ಪೈಲಟ್ ಇಬ್ಬರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆಯ ನಂತರ 'ಜೆಲ್ ಆಮ್ ಸೀ' (Zell am See) ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ 28 ವರ್ಷದ ಯುವ ಪೈಲಟ್, ಆಕಾಶದಲ್ಲಿ ಹಠಾತ್ ಆಗಿ ಎದುರಾದ ಆ ಘರ್ಷಣೆಯನ್ನು ತಪ್ಪಿಸಲು ತನಗೆ ಯಾವುದೇ ಅವಕಾಶವೇ ಸಿಗಲಿಲ್ಲ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.

ವಿಶ್ವಾಸವೇ ಆಗುತ್ತಿಲ್ಲ ಎಂದ ಮಹಿಳೆ!

ಸಾವಿನ ಅಂಚಿನಿಂದ ಪಾರಾದ ಸಬ್ರಿನಾ ತದನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜರ್ಮನ್ ಭಾಷೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ನಾನು ಇಲ್ಲಿ ಕುಳಿತು ಈ ಸಂದೇಶವನ್ನು ಟೈಪ್ ಮಾಡುತ್ತಿದ್ದೇನೆ ಎಂಬುದನ್ನು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ಮೈಮೇಲೆ ಬಿದ್ದಿರುವ ಕೆಲವು ಸಣ್ಣಪುಟ್ಟ ಗಾಯ ಹಾಗೂ ರಕ್ತಗಟ್ಟಿದ ಕಲೆಗಳನ್ನು ಹೊರತುಪಡಿಸಿದರೆ ನನಗೆ ಬೇರೆ ಯಾವುದೇ ಗಂಭೀರ ಪೆಟ್ಟಾಗಿಲ್ಲ" ಎಂದು ಬರೆದುಕೊಂಡು ತಮ್ಮ ಪ್ರಾಣ ಉಳಿದಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

 

 

 

PREV
Read more Articles on
click me!

Recommended Stories

Yash: ಟಾಕ್ಸಿಕ್‌ಗೂ ಮೊದಲೇ ರಾಮಾಯಣ; ದೀಪಾವಳಿಗೆ 'ರಾವಣ'ನಾಗಿ ಡಿಸೆಂಬರ್‌ಗೆ 'ರಾಯ'ನಾಗಲಿರುವ ಯಶ್!
AI Shock: ಎಐ ಎಂಬ ಹೊಸ ದುಶ್ಯಾಸನ, ನಟಿಯರ ಸೆರಗಿಗೆ ಕೈ ಹಾಕ್ತಿರೋ AI ಬೇತಾಳ; ಆಗ ರಶ್ಮಿಕಾ, ಈಗ ರುಕ್ಮಿಣಿ!