
ಬೆಂಗಳೂರು: 'ಅಮ್ಮ' ಎಂಬ ಎರಡಕ್ಷರದ ಶಕ್ತಿಗೆ ಜಗತ್ತಿನಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮನುಷ್ಯರೇ ಆಗಲಿ ಅಥವಾ ಮೂಕ ಪ್ರಾಣಿಗಳೇ ಆಗಲಿ, ಹಸಿವು ಎಂದು ಬಂದಾಗ ಮರುಗುವ ಕರುಳಿನ ಕರೆಗೆ ಓಗೊಡುವ ಗುಣ ಅಮ್ಮನಿಗಲ್ಲದೆ ಮತ್ತಾರಿಗೂ ಬರಲು ಸಾಧ್ಯವಿಲ್ಲ. ಅದರಲ್ಲೂ ಗೋಮಾತೆ ಆ ಹೆಸರಲ್ಲೇ ಅಮ್ಮ ಇದ್ದಾಳೆ.
ಗೋವು ಯಾವತ್ತೂ ಕರುಣಾಮಯಿ ತ್ಯಾಗಮಯಿ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿ ಹೇಳುವ ಭಾವನಾತ್ಮಕ ಹಾಗೂ ಮನಮಿಡಿಯುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗದೆ.
ರಸ್ತೆ ಬದಿಯಲ್ಲಿ ಹಸಿವಿನಿಂದ ಕಂಗಾಲಾಗಿ ಅನ್ನ ಹಾಲಿಗಾಗಿ ಪರಿತಪಿಸುತ್ತಿದ್ದ 7 ಪುಟ್ಟ ನಾಯಿ ಮರಿಗಳಿಗೆ ಹಸು ತನ್ನ ಕರುಗಳಂತೆ ಮಮತೆ ತೋರಿ ಹಾಲುಣಿಸಿರುವ ದೃಶ್ಯ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.
ಹಸಿವಿನಿಂದ ಬಳಲುತ್ತಿದ್ದ ಪುಟ್ಟ ನಾಯಿಮರಿಗಳು ರಸ್ತೆ ಬದಿಯಲ್ಲಿ ನಿಂತಿದ್ದ ಹಸುವನ್ನ ನೋಡಿವೆ. ಅಲ್ಲಿಗೆ ಓಡಿ ಬರುವ ನಾಯಿ ಮರಿಗಳು ಕೆಚ್ಚಲಿಗೆ ಬಾಯಿ ಹಾಕಿವೆ. ಸಾಮಾನ್ಯವಾಗಿ ಬೇರೆ ಪ್ರಾಣಿಗಳು ಹತ್ತಿರ ಬಂದರೆ ದೂರ ಸರಿಯುವ ಅಥವಾ ಬೆದರುವ ಜಾಯಮಾನ ಪ್ರಾಣಿಗಳದ್ದು. ಈ ತಾಯಿ ಹೃದಯದ ಗೋಮಾತೆ ಮಾತ್ರ ಕಿಂಚಿತ್ತೂ ಅಳುಕಿಲ್ಲದೆ, ಒಂದಿಷ್ಟೂ ಅಲುಗಾಡದೆ ಅತ್ಯಂತ ತಾಳ್ಮೆಯಿಂದ ನಿಂತು ಆ ಎಲ್ಲಾ ಏಳು ನಾಯಿಮರಿಗಳ ಹಸಿವನ್ನು ನೀಗಿಸಿದ್ದಾಳೆ.
ತನ್ನದಲ್ಲದ ಮರಿಗಳಾದರೂ ಅವುಗಳ ಹಸಿವಿನ ಸಂಕಟವನ್ನು ಅರಿತ ಆ ತಾಯಿಯ ವಾತ್ಸಲ್ಯ ಎಂಥ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಗೋವನ್ನು ಏಕೆ ತಾಯಿಯ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ? ಎಂಬ ಪ್ರಶ್ನೆಗೆ ಈ ದೃಶ್ಯವೇ ಉತ್ತರ ನೀಡುವಂತಿದೆ. ಪ್ರತಿಯೊಬ್ಬರಿಗೂ ತಾಯಿಯ ಪ್ರೀತಿಯನ್ನು ಉಣಬಡಿಸುವ ಗೋವು ನಿಜಕ್ಕೂ ಸಕಲ ಜೀವರಾಶಿಗಳಿಗೂ ಮಾತೃಸ್ವರೂಪಿಯೇ ಸರಿ.
ಇಂದಿನ ಸ್ವಾರ್ಥದ ಜಗತ್ತಿನಲ್ಲಿ ಮನುಷ್ಯರು ಜಾತಿ, ಧರ್ಮ, ಭಾಷೆ ಎಂದು ಕಚ್ಚಾಡುತ್ತಿರುವಾಗ ಪ್ರೀತಿ, ದಯೆ ಮತ್ತು ತಾಯ್ತನಕ್ಕೆ ಯಾವುದೇ ಪ್ರಬೇಧಗಳ ಗಡಿಗಳಿಲ್ಲ ಎಂಬುದನ್ನು ಈ ಮೂಕಪ್ರಾಣಿ ಜಗತ್ತಿಗೆ ತೋರಿಸಿಕೊಟ್ಟಿದೆ. ಪ್ರಕೃತಿಯ ಈ ಸುಂದರ ಹಾಗೂ ನಿರ್ಮಲ ಮುಖವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ತಾಯಿಯ ಪ್ರೀತಿಗೆ ಯಾವತ್ತೂ ಭೇದವಿಲ್ಲ, ನಿಜವಾದ ದೈವತ್ವ ಇರುವುದೇ ಇಂತಹ ಕರುಣಾಮಯಿ ಹೃದಯದಲ್ಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕೋಟ್ಯಂತರ ಮನಸ್ಸುಗಳನ್ನು ಗೆದ್ದಿರುವ ಈ ವಿಡಿಯೋ ರಾಜಸ್ಥಾನದದ್ದು ಎಂದು ಹೇಳಲಾಗುತ್ತಿದೆ. ವಿಡಿಯೋದ ಹಿನ್ನೆಲೆಯಲ್ಲಿ ಕಾಣಿಸುವ ಗೋಡೆ ಮತ್ತು ಅಂಗಡಿಗಳ ಬೋರ್ಡ್‌ಗಳ ಹೆಸರುಗಳ ಆಧಾರದ ಮೇಲೆ ಈ ಘಟನೆ ರಾಜಸ್ಥಾನದ ಫಲೋದಿ ಜಿಲ್ಲೆಯ ಬಾಪ್ ತಾಲೂಕಿನ 'ಚಾಖೂ' ಪ್ರದೇಶದಲ್ಲಿ ನಡೆದಿರಬಹುದು ಎನ್ನಲಾಗುತ್ತಿದೆ. ಸ್ಥಳ ಯಾವುದೇ ಇರಲಿ ಈ ಪುಟ್ಟ ವಿಡಿಯೋ ಮಾತ್ರ ಮಾನವೀಯತೆ ಮತ್ತು ಮಾತೃಪ್ರೇಮದ ಪಾಠವನ್ನು ಇಡೀ ಜಗತ್ತಿಗೇ ಸಾರಿದೆ. ಹಸಿದ ಮರಿಗಳ ಹೊಟ್ಟೆ ತುಂಬಿಸಿದ ಆ ಪುಣ್ಯವಂತ ಗೋಮಾತೆಯ ವಾತ್ಸಲ್ಯಕ್ಕೆ ಇಡೀ ಸಾಮಾಜಿಕ ಜಾಲತಾಣವೇ ತಲೆಬಾಗಿ ನಮಿಸುತ್ತಿದೆ.