'ತೀವ್ರ ಮುಟ್ಟಿನ ನೋವಿದೆ..ಆಫೀಸ್‌ಗೆ ಬರಲ್ಲ..' GenZ ಯುವತಿಯ ನೇರ ಇಮೇಲ್ ಶೇರ್ ಮಾಡಿ ಮೆಚ್ಚಿದ ಸಿಇಒ!

Published : Aug 18, 2026, 08:12 PM IST
GenZ Email

ಸಾರಾಂಶ

ಗುರುಗ್ರಾಂನಲ್ಲಿ, ಜೆನ್ ಜಿ ಉದ್ಯೋಗಿಯೊಬ್ಬರು ತೀವ್ರ ಮುಟ್ಟಿನ ನೋವಿನ ಕಾರಣ ನೀಡಿ ತಮ್ಮ ಸಿಇಒಗೆ ರಜೆ ಕೋರಿ ಇಮೇಲ್ ಮಾಡಿದ್ದಾರೆ. ಈ ಇಮೇಲ್ ಅನ್ನು ಸಿಇಒ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನವದೆಹಲಿ (ಆ.18): ತೀವ್ರ ಮುಟ್ಟಿನ ನೋವಿನಿಂದ (Menstrual Pain) ಬಳಲುತ್ತಿರುವ ಕಾರಣ ತಮಗೆ ಕಚೇರಿಗೆ ಬರಲು ಸಾಧ್ಯವಿಲ್ಲ ಎಂದು ಜೆನ್ ಜಿ (Gen Z) ಜಮಾನದಯುವ ಉದ್ಯೋಗಿಯೊಬ್ಬರು ಕಂಪನಿಯ ಸಿಇಒಗೆ ಅತ್ಯಂತ ನೇರವಾಗಿ ಇಮೇಲ್ ಕಳುಹಿಸಿ ರಜೆ ಕೋರಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಉದ್ಯೋಗಿಯ ಈ ಬಹಿರಂಗ ಹಾಗೂ ನೇರಾನೇರ ಇಮೇಲ್ ಅನ್ನು ಕಂಪನಿಯ ಸಿಇಒ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಇದು ಕಾರ್ಪೊರೇಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಗುರುಗ್ರಾಮ ಮೂಲದ 'ನಾಟ್ ಡೇಟಿಂಗ್' (Knot Dating) ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಇಒ ಜಸ್‌ವೀರ್ ಸಿಂಗ್ ಅವರು ತಮ್ಮ ಉದ್ಯೋಗಿ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಯುವ ಉದ್ಯೋಗಿಗಳಲ್ಲಿ ಮುಟ್ಟಿನಂತಹ ಸೂಕ್ಷ್ಮ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಇಒ ಜಸ್‌ವೀರ್ ಸಿಂಗ್ ಅವರ ಪೋಸ್ಟ್‌ನಲ್ಲೇನಿದೆ?

ಉದ್ಯೋಗಿಯ ಇಮೇಲ್ ಅನ್ನು ಪೋಸ್ಟ್ ಮಾಡಿದ ಜಸ್‌ವೀರ್ ಸಿಂಗ್, "ಜೆನ್ ಜಿ ಪೀಳಿಗೆಯವರು ಉದ್ಯೋಗಸ್ಥಳದಲ್ಲಿ ಇದ್ದ ಅನಗತ್ಯ ಮುಜುಗರ ಹಾಗೂ ಸಂಕೋಚಗಳನ್ನು ಇಲ್ಲದಂತೆ ಮಾಡಿದ್ದಾರೆ. ಅವರು ಯಾವುದೇ ವಿಷಯದಲ್ಲಾದರೂ ಅತ್ಯಂತ ಸ್ಪಷ್ಟ ಹಾಗೂ ನೇರ ನಿಲುವನ್ನು ತಳೆಯುತ್ತಾರೆ. ಸುಮಾರು 10 ವರ್ಷಗಳ ಹಿಂದೆ 'ತೀವ್ರ ಮುಟ್ಟಿನ ನೋವು' ಎಂದು ಮುಕ್ತವಾಗಿ ಬರೆದು ರಜೆ ಕೋರುವ ಇಮೇಲ್‌ಗಳನ್ನು ನೋಡುವುದು ತೀರಾ ವಿರಳವಾಗಿತ್ತು" ಎಂದು ಬರೆದುಕೊಂಡಿದ್ದಾರೆ.

ಉದ್ಯೋಗಿ ಕಳುಹಿಸಿದ ಇಮೇಲ್ ಸಂದೇಶ ಹೀಗಿತ್ತು..

"ಹಲೋ ಸರ್, ತೀವ್ರವಾದ ಮುಟ್ಟಿನ ನೋವು, ಸೆಳೆತ ಮತ್ತು ಅಸ್ವಸ್ಥತೆಯ ಕಾರಣದಿಂದಾಗಿ ನನಗೆ ಇಂದು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ. ಯಾವುದೇ ತುರ್ತು ಕೆಲಸಗಳಿದ್ದರೆ ನಾನು ಇಮೇಲ್ ಮತ್ತು ಫೋನ್ ಮೂಲಕ ಲಭ್ಯವಿರುತ್ತೇನೆ. ಧನ್ಯವಾದಗಳು."

ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ

ಸಿಇಒ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಉದ್ಯೋಗಸ್ಥಳದಲ್ಲಿ ಮುಟ್ಟಿನ ಕುರಿತಾದ ಚರ್ಚೆಗಳು ಮುಕ್ತವಾಗುತ್ತಿರುವುದನ್ನು ಕೆಲವರು ಸ್ವಾಗತಿಸಿದ್ದರೆ, ಇನ್ನು ಕೆಲವರು ಈ ಬದಲಾವಣೆಯ ಶ್ರೇಯಸ್ಸನ್ನು ಕೇವಲ 'ಜೆನ್ ಜಿ' ಪೀಳಿಗೆಗೆ ಮಾತ್ರ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಸಂಸ್ಕೃತಿಯ ಬದಲಾವಣೆ ಎಂದ ನೆಟ್ಟಿಗರು: "ಇದು ಕೇವಲ ಜೆನ್ ಜಿ ಪೀಳಿಗೆಗೆ ಸಂಬಂಧಿಸಿದ ವಿಷಯವಲ್ಲ, ಬದಲಾಗಿ ಯೂರೋಪ್ ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಕೆಲಸದ ಸಂಸ್ಕೃತಿಯ (Work Culture) ಬದಲಾವಣೆಯಾಗಿದೆ. ಟೀಮ್ಸ್ ಅಥವಾ ಸ್ಲ್ಯಾಕ್‌ನಂತಹ ಕಾರ್ಪೊರೇಟ್ ವೇದಿಕೆಗಳಲ್ಲಿ ಉದ್ಯೋಗಿಗಳು ಕಳೆದ ಹಲವು ವರ್ಷಗಳಿಂದ ಇಂತಹ ಇಮೇಲ್‌ಗಳನ್ನು ಕಳುಹಿಸುವುದನ್ನು ನಾವು ನೋಡಿದ್ದೇವೆ" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಪ್ರಾಮಾಣಿಕತೆಗೆ ಮೆಚ್ಚುಗೆ: ಮತ್ತೊಬ್ಬ ಬಳಕೆದಾರರು ಉದ್ಯೋಗಿಯ ಪ್ರಾಮಾಣಿಕತೆಯನ್ನು ಶ್ಲಾಘಿಸಿ, "ಇದು ಇಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿ ಬೇಕಾಗಿದ್ದ ನಡೆ, ಅವರು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ" ಎಂದು ಬರೆದಿದ್ದಾರೆ.

ಈ ಬೆಳವಣಿಗೆಯು ಉದ್ಯೋಗಸ್ಥಳದಲ್ಲಿ ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಸಂಸ್ಕೃತಿಯು ಎಷ್ಟು ಸುಲಭವಾಗಿ ಹಾಗೂ ಸ್ವೀಕಾರಾರ್ಹವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ಆಸ್ಟ್ರೇಲಿಯಾದಲ್ಲಿ 5 ನಿಮಿಷ ಸ್ನಾನ ಮಾಡಿದ್ದಕ್ಕೆ ಭಾರತೀಯ ಯುವತಿಗೆ ₹1.30 ಲಕ್ಷ ದಂಡ! ಸಂಬಳ ಅದಕ್ಕೇ ಹೋಯ್ತು!
ಕ್ಯಾರೆಟ್​ನಲ್ಲಿ ಸಿಕ್ಕಿತು ವಜ್ರದ ಉಂಗುರ! ಸಿನಿಮಾ ಸ್ಟೋರಿ ಮೀರಿಸೋ ರೋಚಕ ನೈಜ ಘಟನೆ