
ನದಿಯಲ್ಲಿ ನೀರು ಹರಿಯುವುದನ್ನು ನೋಡಿದ್ದೇವೆ, ಆದರೆ ನದಿಯ ತಳದಲ್ಲೇ ಚಿನ್ನದ ಕಣಗಳು ಸಿಗುತ್ತವೆ ಎಂದರೆ ಅಚ್ಚರಿಯಾಗದೇ ಇರದು. ಪಾಕಿಸ್ತಾನದ ಸಿಂಧೂ ನದಿ ಇದೀಗ ಇದೇ ಕಾರಣಕ್ಕೆ ಸುದ್ದಿಯಲ್ಲಿದೆ. ನದಿಯ ತಳದಿಂದ ಚಿನ್ನವನ್ನು ಹೊರತೆಗೆಯಲು ಭಾರೀ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗಿವೆ.
ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಸಿಂಧೂ ನದಿಯ ತಳದಿಂದ ಚಿನ್ನ ತೆಗೆಯುವ ಚಟುವಟಿಕೆ ನಡೆಯುತ್ತಿದೆ. ವರದಿಯ ಪ್ರಕಾರ, ಚಿನ್ನದ ಗಣಿಗಾರಿಕೆಗಾಗಿ 77 ಗುತ್ತಿಗೆ ಒಪ್ಪಂದಗಳನ್ನು ನೀಡಲಾಗಿದೆ. ಈ ಪೈಕಿ ಐದು ಒಪ್ಪಂದಗಳನ್ನು ವಿದೇಶಿ ಕಂಪನಿಗಳಿಗೆ ನೀಡಲಾಗಿದೆ ಎನ್ನಲಾಗಿದೆ. ಕಾನೂನುಬದ್ಧ ಗಣಿಗಾರಿಕೆಯ ಜೊತೆಗೆ ಅಕ್ರಮ ಗಣಿಗಾರಿಕೆಯೂ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಇದರಿಂದ ಕೆಲವರಿಗೆ ಆದಾಯ ಸಿಗುತ್ತಿದ್ದರೂ, ಸ್ಥಳೀಯ ರೈತರು ಹಾಗೂ ನಿವಾಸಿಗಳು ನದಿ ತೀರದ ಸವೆತ ಮತ್ತು ಪರಿಸರ ಹಾನಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಿಂಧೂ ನದಿಯ ವಿವಿಧ ಭಾಗಗಳಲ್ಲಿ ಗಮನಾರ್ಹ ಪ್ರಮಾಣದ ಚಿನ್ನದ ನಿಕ್ಷೇಪಗಳಿವೆ ಎಂದು ಪಾಕಿಸ್ತಾನ ಸರ್ಕಾರ ಈ ಹಿಂದೆ ಹೇಳಿತ್ತು. ಅಟ್ಟಾಕ್ ಸಮೀಪದ ಪ್ರದೇಶದಲ್ಲಿರುವ ಚಿನ್ನದ ನಿಕ್ಷೇಪಗಳ ಮೌಲ್ಯ ಸುಮಾರು 600 ಬಿಲಿಯನ್ ಪಾಕಿಸ್ತಾನಿ ರೂಪಾಯಿ ಎಂದು ವರದಿಯಾಗಿದೆ.
ಇಲ್ಲಿರುವ ಪ್ರಮುಖ ಪ್ರಶ್ನೆಯೇ ಇದು. ನದಿಯ ತಳದಲ್ಲಿ ಚಿನ್ನ ಹೇಗೆ ಸಂಗ್ರಹವಾಯಿತು? ವರದಿಯ ಪ್ರಕಾರ, ಸಿಂಧೂ ನದಿಯಲ್ಲಿರುವ ಚಿನ್ನ ಪರ್ವತ ಪ್ರದೇಶಗಳಿಂದ ಬಂದಿದೆ. ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದ ಪರ್ವತಗಳು ರೂಪುಗೊಂಡವು. ನಂತರ ನಡೆದ ನೈಸರ್ಗಿಕ ಸವೆತದಿಂದ ಪರ್ವತಗಳಲ್ಲಿದ್ದ ಚಿನ್ನದ ಸಣ್ಣ ಕಣಗಳು ನದಿಗೆ ಸೇರಿವೆ. ಸಿಂಧೂ ನದಿಯ ವೇಗದ ನೀರಿನೊಂದಿಗೆ ಈ ಚಿನ್ನದ ಕಣಗಳು ಕೆಳಭಾಗಕ್ಕೆ ಸಾಗುತ್ತವೆ. ಬಳಿಕ ನದಿಯ ತಳದಲ್ಲಿ ಅವು ಸಂಗ್ರಹವಾಗುತ್ತವೆ. ಹೀಗಾಗಿ ನದಿಯ ತಳದಲ್ಲಿ ಚಿನ್ನದ ಕಣಗಳು ಸಿಗುತ್ತಿವೆ ಎಂದು ವರದಿ ವಿವರಿಸಿದೆ.
ಚಿನ್ನದ ಗಣಿಗಾರಿಕೆಯಿಂದ ಕೆಲವರಿಗೆ ಆರ್ಥಿಕ ಲಾಭವಾಗುತ್ತಿದ್ದರೂ, ಭಾರೀ ಯಂತ್ರಗಳ ಬಳಕೆ ಹಾಗೂ ನದಿ ತೀರದ ಗಣಿಗಾರಿಕೆಯಿಂದ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕವೂ ಇದೆ. ನದಿ ತೀರದ ಸವೆತದಿಂದ ರೈತರು ಮತ್ತು ಸ್ಥಳೀಯ ಸಮುದಾಯಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಂಧೂ ನದಿಯಲ್ಲಿನ ಚಿನ್ನದ ನಿಕ್ಷೇಪ ಇದೀಗ ಪಾಕಿಸ್ತಾನಕ್ಕೆ ಆರ್ಥಿಕ ಅವಕಾಶದ ಜೊತೆಗೆ ಪರಿಸರ ಸವಾಲನ್ನೂ ತಂದಿದೆ.