
ಬೆಂಗಳೂರು (ಆ.9): ಹಿಂದಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಿಂದಿ ಭಾಷಿಕರು ಹಲ್ಲೆ ನಡೆಸಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ನೆರೆ ರಾಜ್ಯದ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆಗೊಳಗಾದ ಯಾದಗಿರಿಯ ಶಹಾಪುರ ಮೂಲದ ಬಸವರಾಜ್ ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕೆಲವು ವರ್ಷಗಳಿಂದ ನಗರದಲ್ಲಿ ವಾಸವಾಗಿರುವ ಬಸವರಾಜ್, ಬಿ.ಎಡ್ ವ್ಯಾಸಂಗ ಮಾಡುತ್ತಿದ್ದು ಪಾರ್ಟ್ ಟೈಂನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ. 8ರಂದು ಮುಂಜಾನೆ 4 ಗಂಟೆ ಸುಮಾರಿಗೆ ಡೆಲಿವರಿ ಕೆಲಸ ಮುಗಿಸಿ ಅಟ್ಟೂರಿನ ಸಂತೋಷ ನಗರದಿಂದ ಮನೆಗೆ ಕಡೆ ಹೋಗುವಾಗ ನಾಲ್ವರು ಯುವತಿಯರು ಇವರನ್ನು ನೋಡಿ ಹಿಂದಿಯಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಆಗ ಬಸವರಾಜು ಯಾಕೆ ಬೈಯುತ್ತಿದ್ದಿರಿ? ನನಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಈ ವೇಳೆ ನಾಲ್ವರು ಯುವತಿಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಕೂಡಲೇ ಬಸವರಾಜ್ ಅವರು ತಮ್ಮ ಸ್ನೇಹಿತ ಅಶೋಕ್‌ಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಯುವತಿಯರು ಸಹ ಇಬ್ಬರು ಹುಡುಗರನ್ನು ಸ್ಥಳಕ್ಕೆ ಕರೆಸಿಕೊಂಡರು.
ಸ್ಥಳಕ್ಕೆ ಬಂದ ಆ ಯುವಕರು ರಸ್ತೆಯಲ್ಲಿ ಬಿದ್ದಿದ್ದ ಕೋಲಿನಿಂದ ಏಕಾಏಕಿ ತನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೆಳಗೆ ಬಿದ್ದಾಗ ಯುವತಿಯರು ಕೂಡ ಕಾಲಿನಲ್ಲಿ ಒದ್ದಿದ್ದಾರೆ. ಸ್ಥಳಕ್ಕೆ ಬಂದ ನನ್ನ ಸ್ನೇಹಿತನಿಗೂ ಹೊಡೆದು ಗಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಬಸವರಾಜ್ ಆರೋಪಿಸಿದ್ದಾರೆ. ಬಸವರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ವೇಳೆ ಯುವತಿಯರು ಮದ್ಯಸೇವಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯನ್ನು ಖಂಡಿಸಿ ಪ್ರವೀಣ್ ಶೆಟ್ಟಿ ನೇತೃತ್ವದ ಕರವೇ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರವೀಣ್ ಶೆಟ್ಟಿ ಮಾತನಾಡಿ, ಹೊಟ್ಟೆಪಾಡಿಗಾಗಿ ಯಾದಗಿರಿಯಿಂದ ನಗರಕ್ಕೆ ಬಂದು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕನ್ನಡಿಗರ ಮೇಲೆ ಪ್ರತಿನಿತ್ಯ ಪರಭಾಷಿಕರು ಹಲ್ಲೆ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.