ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ ತಾಯಿಗೆ ಮಕ್ಕಳೇ ಪ್ರಪಂಚ. ಮಗುವನ್ನು ಕಳೆದುಕೊಂಡ ನೋವನ್ನು ಯಾವುದೇ ತಾಯಿ ಸಹಿಸಲಾರಳು. ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಿಂದ ಭಾವನಾತ್ಮಕ ವಿಡಿಯೋವೊಂದು ಹೊರಬಂದಿದ್ದು, ಇದು ವೇಗವಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ತಾಯಿ ಕರಡಿ ತನ್ನ ಗಾಯಗೊಂಡ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋ ನೋಡಿದ ನಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ಎಮೋಷನಲ್ ಆಗಿದ್ದಾರೆ. ಹಾಗಾದರೆ ವೈರಲ್ ಆದ ವಿಡಿಯೋದಲ್ಲಿ ಏನಿದೆ ವಿಶೇಷ ನೋಡೋಣ ಬನ್ನಿ...
ಕರಡಿ ಮರಿಗೆ ಡಿಕ್ಕಿ ಹೊಡೆದ ವೇಗವಾಗಿ ಬಂದ ಕಾರು
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ತಾಯಿ ಕರಡಿ ತನ್ನ ಮರಿಗಳಲ್ಲಿ ಒಂದನ್ನು ಭಯದಿಂದಲೇ ರಸ್ತೆಯ ಬದಿಗೆ ಕರೆದೊಯ್ಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಹಾಗೆಯೇ ಇನ್ನೊಂದು ಮರಿ ಅದರ ಬೆನ್ನಿನ ಮೇಲೆ ಕುಳಿತಿದೆ. ಜನರು ಈ ವಿಡಿಯೋಗೆ ಎಮೋಷನಲ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಜೊತೆಗೆ ಪ್ರಾಣಿಗಳ ಬಗೆಗಿನ ಜನರ ನಿರ್ಲಕ್ಷ್ಯವನ್ನು ಅನೇಕರು ಖಂಡಿಸಿದ್ದಾರೆ ಮತ್ತು ಸುರಕ್ಷಿತ ಚಾಲನೆಗಾಗಿ ಮನವಿ ಮಾಡಿದ್ದಾರೆ. ಮಾಹಿತಿಯ ಪ್ರಕಾರ, ಈ ಘಟನೆ ಗೋಹಪರು-ಜೈತ್‌ಪುರ ರಸ್ತೆಯಲ್ಲಿ ಸಂಭವಿಸಿದ್ದು, ವೇಗವಾಗಿ ಬಂದ ವಾಹನವು ಕರಡಿ ಮರಿಗೆ ಡಿಕ್ಕಿ ಹೊಡೆದಿದೆ.
ಮರಿಯ ಪಕ್ಕ ರಸ್ತೆಯಲ್ಲಿ ಕುಳಿತಿತ್ತು ತಾಯಿ ಕರಡಿ
ತನ್ನ ಮರಿ ಗಾಯಗೊಂಡಿರುವುದನ್ನು ನೋಡಿದ ತಾಯಿ ಕರಡಿ ಅದಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಲೇ ಇತ್ತು. ಸುಮಾರು ಒಂದು ಗಂಟೆಗಳ ಕಾಲ, ಅದು ಅರ್ಧಕರ್ಧ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ, ಚಲಿಸಲಾಗದೆ ಸುಮ್ಮನೆ ಕೂತಿದ್ದ ಮರಿ ಕರಡಿ ಬಳಿ ರಸ್ತೆಯಲ್ಲೇ ಕುಳಿತಿತ್ತು. ಇನ್ನೊಂದು ಮರಿ ತನ್ನ ಬೆನ್ನಿಗೆ ಅಂಟಿಕೊಂಡಿದ್ದರೂ ಗಾಯಗೊಂಡ ಮರಿಗೆ ನೋವಾಗದಂತೆ ಅದನ್ನು ರಸ್ತೆಯ ಬದಿಗೆ ಎಳೆದೊಯ್ಯುತ್ತಿತ್ತು. ಈ ಭಾವನಾತ್ಮಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದರಲ್ಲಿ ತಾಯಿಯ ಪ್ರೀತಿ ಮತ್ತು ನೋವು ಸ್ಪಷ್ಟವಾಗಿ ಗೋಚರಿಸುತ್ತದೆ.
ಕೊನೆಗೂ ಮರಿಯನ್ನು ಉಳಿಸಲು ಸಾಧ್ಯವಾಗಲೇ ಇಲ್ಲ
ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ತಾಯಿ ಕರಡಿಯನ್ನು ಅದರ ಬದುಕುಳಿದ ಮರಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಆದರೆ ದುಃಖಕರ ವಿಷಯವೆಂದರೆ ಗಾಯಗೊಂಡ ಮರಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆಯು ಅರಣ್ಯ ಪ್ರದೇಶಗಳಲ್ಲಿ ಅತಿ ವೇಗದ ವಾಹನಗಳು ಮತ್ತು ಅವು ವನ್ಯಜೀವಿಗಳಿಗೆ ಒಡ್ಡುವ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನೆಟ್ಟಿಗರ ಮನಗೆದ್ದ ಮತ್ತೊಂದು ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಮಾಷೆಯ ವಿಡಿಯೋಗಳು ವೈರಲ್ ಆಗಿರುವುದನ್ನ ನಾವು ನೋಡಿದ್ದೇವೆ. ಈ ವಿಡಿಯೋಗಳನ್ನ ನೋಡಿ ನಾವೆಲ್ಲಾ ನಕ್ಕಿ ನಕ್ಕಿ ಸುಸ್ತಾಗಿರುವುದು ಉಂಟು. ಆದರೆ ಕೆಲವು ವಿಡಿಯೋ ನೋಡಿದಾಗ ಜನರ ಕಣ್ಣುಗಳು ತೇವವಾಗುವುದರಲ್ಲಿ ಸಂಶಯವೇ ಇಲ್ಲ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಖಂಡಿತವಾಗಿಯೂ ನಿಮ್ಮ ಕಣ್ಣುಗಳಲ್ಲಿ ನೀರು ತರಿಸುವುದು ಮಾತ್ರವಲ್ಲ, ಹೃದಯವನ್ನೂ ಗೆಲ್ಲುತ್ತದೆ. ಅದನ್ನು ನೋಡಿದಾಗ ಯಾರಿಗೂ ಇಂತಹ ಬಡತನ ಬರಬಾರದು ಅಂತೆನಿಸುತ್ತದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋ ಮಳೆಯ ನಂತರದ ವಿಡಿಯೋ ಅನಿಸುತ್ತದೆ. ಸ್ವಲ್ಪ ತುಂತುರು ಹನಿ ಅಲ್ಲಲ್ಲಿ ಕಾಣಿಸುತ್ತದೆ. ಬಹುಶಃ ಮಳೆ ನಿಂತ ನಂತರ ಈ ವಿಡಿಯೋ ತೆಗೆಯಲಾಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಓಪನ್ ಪ್ಲೇಸ್‌ನಲ್ಲಿ ಅಂದ್ರೆ ಫುಟ್‌ಪಾತ್‌ನಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬರುತ್ತದೆ. ಅವನ ಇಬ್ಬರು ಮಕ್ಕಳು ಮಳೆಯಿಂದ ಒಲೆಯನ್ನು ರಕ್ಷಿಸಲು ಮತ್ತು ಅಪ್ಪ ಮಾಡುತ್ತಿರುವ ಅಡುಗೆ ಹಾಳಾಗಬಾರದೆಂದು ದೊಡ್ಡ ಮರದ ಹಲಗೆ ಹಿಡಿದು ನಿಂತಿದ್ದಾರೆ. ಇಂತಹ ದೃಶ್ಯ ನೋಡಿದಾಗ ಅವರ ಜೀವನ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ಜೊತೆಗೆ ಚಿಕ್ಕ ಪುಟ್ಟಕ್ಕೂ ಸಮಸ್ಯೆ ಅಂದುಕೊಳ್ಳುವ ನಾವು ಇಂತಹವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಅಂತೆನಿಸುತ್ತದೆ.