
ರಕ್ಷಾ ಬಂಧನ(Raksha bandhan)ದ ದಿನ ನಡೆದ ಈ ಒಂದು ಘಟನೆಗೆ ನೆಟಿಜನ್ ವಾವ್ ಎನಿಸುವಂತೆ ಮಾಡಿದೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದೆ. ಇದರಲ್ಲಿ ಯುವತಿಯೊಬ್ಬಳು ಪಾರ್ಸೆಲ್ ಕೊಡುವ ಡೆಲಿವರಿ ಹುಡುಗನಿಗೆ ರಾಖಿ ಕಟ್ಟಿ, ಆತನ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.
ವಡೋದರದ ಆಕಾಂಕ್ಷಾ ಸಿಂಗ್ ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನಾವು ಇದ್ದಕ್ಕಿದ್ದಂತೆ ಈ ಬಾರಿ ನಮ್ಮ ಡೆಲಿವರಿ ಪಾರ್ಟ್ನರ್‌ಗೆ ರಕ್ಷಾ ಬಂಧನದ ರಾಖಿ ಕಟ್ಟಲು ನಿರ್ಧರಿಸಿದೆವು, ಆದರೆ ಆತ ಆ ಕ್ಷಣವನ್ನು ಮರೆಯಲಾಗದಂತೆ ಮಾಡಿದ' ಎಂದು ಅವರು ಬರೆದುಕೊಂಡಿದ್ದಾರೆ.
ಯುವತಿ ಆಕಾಂಕ್ಷಾ ಅವರು ಡೆಲಿವರಿ ಪಾರ್ಟ್ನರ್‌ಗಾಗಿ ಬಾಗಿಲು ತೆರೆಯುತ್ತಾರೆ. ಇಬ್ಬರೂ ನಗುತ್ತಾ ಮಾತನಾಡಿದ ನಂತರ, ಆಕಾಂಕ್ಷಾ ಆತನಿಗೆ ಅಚ್ಚರಿ ಎಂಬಂತೆ ರಾಖಿ ಕಟ್ಟುತ್ತಾರೆ. ಇದಾದ ಕೆಲವೇ ಕ್ಷಣಗಳಲ್ಲಿ, ಆತನ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆಯುತ್ತಾಳೆ ಯುವತಿ. ಆಗ ಸಿಸ್ಟರ್ ಅನ್ನುವ ಭಾವನೆ ಆ ಡೆಲಿವರಿ ಬಾಯ್ಸ್ ನಲ್ಲಿ ಕಂಡುಬಂದು ಭಾವುಕನಾಗಿ ಅವನು ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸುತ್ತಾನೆ.
ರಾಖಿ ಕಟ್ಟಿದ ಬಳಿಕ ಸಹೋದರಿಗೆ ಹಣ ಕೊಡುವುದು ಸಂಪ್ರದಾಯ. ಅಂತೆಯೇ ಯುವತಿ ಆಕಾಂಕ್ಷಾಗೆ ಹಣ ಕೊಡಲು ಮುಂದಾಗುತ್ತಾನೆ. ಎಷ್ಟೇ ಬೇಡ ಎಂದರೂ ಆತ ಉಡುಗೊರೆಯಾಗಿ ಅದನ್ನು ನೀಡಲು ಮುಂದಾಗುತ್ತಾನೆ. ಈಗ ಎಲ್ಲಡೆ ಡಿಜಿಟಲ್ ಪೇ ಮಾಡುವುದರಿಂದ ಪಾಪ ಅವನ ಜೇಬಲ್ಲೂ ನಗದು ಹಣ ಹೆಚ್ಚು ಇಲ್ಲ. ಹೀಗಾಗಿ ಅವನು ಮೊದಲು ಸ್ಕ್ಯಾನರ್ ಕೇಳುತ್ತಾನೆ. ಆದರೆ ಯುವತಿ ಆಕಾಂಕ್ಷಾ ಬೇಡ ಎಂದಾಗ, ಜೇಬಿನಲ್ಲಿದ್ದ 50 ರೂಪಾಯಿಯ ನೋಟನ್ನೇ ತೆಗೆದು ನಗುತ್ತಲೇ ಆಕಾಂಕ್ಷಗೆ ಕೊಡುತ್ತಾನೆ.
ಈ ವಿಡಿಯೋ ಹಂಚಿಕೊಂಡಿರುವ ಆಕಾಂಕ್ಷಾ, 'ಕೆಲವು ಉಡುಗೊರೆಗಳು ಕೇವಲ 50 ರೂಪಾಯಿ ಆಗಿದ್ದರೂ, ಅವು ಬೆಲೆಕಟ್ಟಲಾಗದವು' ಎಂದು ಬರೆದುಕೊಂಡಿದ್ದಾರೆ ಎಂಥ ಅರ್ಥಪೂರ್ಣ ಸಾಲು.. ಹಣ ಕೊಡಲು ಆತ ಪಟ್ಟು ಹಿಡಿದಿದ್ದನ್ನು ನೆನಪಿಸಿಕೊಂಡ ಆಕಾಂಕ್ಷಾ, 'ಅಬ್ ಬೆಹೆನ್ ಬೋಲಾ ಹೈ ನಾ (ಈಗ ತಂಗಿ ಅಂದಿದ್ದೀನಲ್ಲ)' ಎಂದು ಆತ ಹೇಳಿದ್ದಾಗಿ ತಿಳಿಸಿದ್ದಾರೆ.
ಆಕಾಂಕ್ಷಾ ಈ ಬಗ್ಗೆ ಇನ್ನಷ್ಟು ವಿವರಿಸುತ್ತಾ, 'ಈ 50 ರೂಪಾಯಿ ನಾವು 'ತೆಗೆದುಕೊಂಡ' ಹಣವಲ್ಲ; ಇದು ಕೆಲವೇ ನಿಮಿಷಗಳ ಕಾಲ ಭೇಟಿಯಾದ ವ್ಯಕ್ತಿಯಿಂದ ಸಿಕ್ಕ ನೆನಪು, ಆಶೀರ್ವಾದ ಮತ್ತು ಪ್ರೀತಿ ಹಾಗೂ ಗೌರವದ ಸಂಕೇತ' ಎಂದಿದ್ದಾರೆ. ಈ ಭಾವನಾತ್ಮಕ ಸನ್ನಿವೇಶಕ್ಕೆ ಆನ್‌ಲೈನ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆಕಾಂಕ್ಷಾ ಅವರ ನಡೆ ಮತ್ತು ಡೆಲಿವರಿ ಹುಡುಗನ ಹೃದಯವಂತಿಕೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.