ಯುಕೆ ಪ್ರವಾಸದಲ್ಲಿ ಭಾರತೀಯ ಮಹಿಳೆಗೆ ಹದಿಹರೆಯದ ಮಕ್ಕಳಿಂದ ಜನಾಂಗೀಯ ನಿಂದನೆ, ಕಹಿ ಅನುಭವ ಹಂಚಿಕೊಂಡ ಯೂಟ್ಯೂಬರ್!

Published : Aug 30, 2026, 11:29 AM IST
Indian tourist racial abuse in UK

ಸಾರಾಂಶ

ಯುಕೆ ಪ್ರವಾಸದಲ್ಲಿದ್ದ ಭಾರತೀಯ ಮಹಿಳೆಯೊಬ್ಬರು, ಹದಿಹರೆಯದವರಿಂದ ಜನಾಂಗೀಯ ನಿಂದನೆ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ. ಸರೋವರದ ಬಳಿ ನಡೆದ ಈ ಘಟನೆಯ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದು, ನಂತರ ಅಧಿಕಾರಿಗಳು ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಪೂರ್ಣ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯುಕೆ (UK) ಪ್ರವಾಸದಲ್ಲಿದ್ದಾಗ ಸರೋವರದ ಬಳಿ ಹದಿಹರೆಯದವರ ಗುಂಪಿನಿಂದ ಜನಾಂಗೀಯ ನಿಂದನೆ ಮತ್ತು ಕಿರುಕುಳವನ್ನು ಎದುರಿಸಿದ ಕಹಿ ಅನುಭವವನ್ನು ಭಾರತೀಯ ಮಹಿಳಾ ಪ್ರವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರಾದ @that_random_explorer ತಮ್ಮ ಎರಡು ಭಾಗಗಳ ವೀಡಿಯೊ ಸರಣಿಯಲ್ಲಿ ಈ ಸಂಪೂರ್ಣ ಘಟನೆಯನ್ನು ವಿವರವಾಗಿ ತೆರೆದಿಟ್ಟಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ಜನಾಂಗೀಯ ನಿಂದನೆ

ತಮ್ಮ ಸ್ನೇಹಿತರೊಂದಿಗೆ ಸರೋವರದ ದಂಡೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಹತ್ತಿರದಲ್ಲಿ ಈಜುತ್ತಿದ್ದ 13 ರಿಂದ 14 ವರ್ಷ ವಯಸ್ಸಿನ 5-6 ಮಕ್ಕಳ ಗುಂಪು ಇವರತ್ತ ಕೆಸರು ಎರಚಲು ಪ್ರಾರಂಭಿಸಿತು. ಆರಂಭದಲ್ಲಿ ಮಕ್ಕಳು ತಮಾಷೆ ಮಾಡುತ್ತಿರಬಹುದು ಎಂದು ಭಾವಿಸಿ ನಾವು ಸುಮ್ಮನಿದ್ದೆವು, ಆದರೆ ಅವರು ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ ಎಂದು ಅವರು ವಿವರಿಸಿದ್ದಾರೆ.

ನಂತರ ಆ ಗುಂಪು, "ದಯವಿಟ್ಟು ನಮಗೆ ತೊಂದರೆ ಕೊಡಬೇಡಿ, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿತು. ಆದರೂ ಹಿಂಜರಿಯದ ಮಕ್ಕಳು ನೀವು ಮುಸ್ಲಿಮರು ಎಂದು ಹೇಳುವ ಮೂಲಕ ಜನಾಂಗೀಯ ಮತ್ತು ಧಾರ್ಮಿಕ ಟೀಕೆಗಳನ್ನು ಮಾಡಲು ತೊಡಗಿದರು. ತಾವು ಮುಸ್ಲಿಮರಲ್ಲ ಎಂದು ಸ್ಪಷ್ಟಪಡಿಸಿದರೂ, ವಿಷಯವು ಧರ್ಮಕ್ಕಿಂತ ಹೆಚ್ಚಾಗಿ ಉದ್ದೇಶಪೂರ್ವಕವಾಗಿ ತಮ್ಮನ್ನು ಗುರಿಯಾಗಿಸಿಕೊಂಡು ನಡೆಸಿದ ಕಿರುಕುಳವಾಗಿತ್ತು ಎಂದು ಪ್ರವಾಸಿ ತಿಳಿಸಿದ್ದಾರೆ.

ಪೊಲೀಸ್ ದೂರು

ಪರಿಸ್ಥಿತಿ ಕೈಮೀರಿದಾಗ ಪ್ರವಾಸಿ ಮಹಿಳೆಯ ಪತಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದರು. ಕರೆ ಮಾಡಿದಾಗ ಅಧಿಕಾರಿಗಳು ಮಕ್ಕಳ ಗಲಾಟೆಯನ್ನು ಆಲಿಸಿ, ಸಹಾಯಕ್ಕಾಗಿ ಕಾಯುವಂತೆ ತಿಳಿಸಿದರು. ಆದರೆ, ಸರಿಸುಮಾರು ಒಂದು ಗಂಟೆ ಕಾದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ. ಇದನ್ನು ಕಂಡ ಮಕ್ಕಳು ಮತ್ತೆ ಹಿಂತಿರುಗಿ, ನಿಮ್ಮ ಪೊಲೀಸರು ಎಲ್ಲಿದ್ದಾರೆ? ಎಂದು ನಗುತ್ತಾ ಗೇಲಿ ಮಾಡಿದರು. ಒಬ್ಬ ಹುಡುಗ ಜ್ಯೂಸ್ ಬಾಟಲಿ ಹಿಡಿದು ಅವರ ಮೇಲೆ ಎರಚುವಂತೆ ಹತ್ತಿರ ಬಂದರೂ, ವೀಡಿಯೊ ರೆಕಾರ್ಡ್ ಆಗುತ್ತಿರುವುದನ್ನು ನೋಡಿ ಹಿಂದೆ ಸರಿದನು.

ಪೊಲೀಸರ ತನಿಖೆ

ವಿಷಯ ಬೆಳೆಸುವುದು ಬೇಡವೆಂದು ಪ್ರವಾಸಿಗರ ಗುಂಪು ಸರೋವರದಿಂದ ನಿರ್ಗಮಿಸಿತು. ಆದರೆ, ಅದೇ ದಿನ ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರು ಇವರನ್ನು ಮರಳಿ ಸಂಪರ್ಕಿಸಿ, ಸರೋವರದ ಬಳಿ ತೆರಳಿ ಆ ಮಕ್ಕಳನ್ನು ಗುರುತಿಸಿರುವುದಾಗಿ ತಿಳಿಸಿದರು. ಅವರ ಪೋಷಕರ ಸಮ್ಮುಖದಲ್ಲೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದಾಗಿಯೂ, ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸುವುದಾಗಿಯೂ ಅಧಿಕಾರಿಗಳು ಹೇಳಿದರು.

ಅಧಿಕಾರಿಗಳು ಇವರಿಗೆ ಎರಡು ಆಯ್ಕೆಗಳನ್ನು ನೀಡಿದ್ದರು:

ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದು. ಮಕ್ಕಳ ಪೋಷಕರಿಗೆ ಲಿಖಿತ ಎಚ್ಚರಿಕೆ ನೀಡಲು ಪೊಲೀಸರಿಗೆ ಅವಕಾಶ ನೀಡುವುದು. ಸೇಡು ತೀರಿಸಿಕೊಳ್ಳುವುದು ತಮ್ಮ ಉದ್ದೇಶವಲ್ಲ, ಆದರೆ ಇಂತಹ ಜನಾಂಗೀಯ ಕಿರುಕುಳಕ್ಕೆ ಸೂಕ್ತ ಪರಿಣಾಮ ಇರುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಅವರು ಎರಡನೇ ಆಯ್ಕೆಯನ್ನೇ ಆರಿಸಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ

ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ, ಪ್ರವಾಸಿಗರು ಸಿಟ್ಟುಗೊಳ್ಳದೆ ಪ್ರಬುದ್ಧತೆಯಿಂದ ತಾಳ್ಮೆ ಕಾಯ್ದುಕೊಂಡಿದ್ದನ್ನು ಮತ್ತು ಸಾಕ್ಷ್ಯವಾಗಿ ವೀಡಿಯೊ ರೆಕಾರ್ಡ್ ಮಾಡಿದ್ದನ್ನು ಹಲವರು ಮೆಚ್ಚಿದ್ದಾರೆ. ಯುಕೆ ಪೊಲೀಸರ ಕ್ರಮವನ್ನೂ ಕೆಲವರು ಶ್ಲಾಘಿಸಿದ್ದಾರೆ. ಮಕ್ಕಳ ಈ ನಡವಳಿಕೆಯು ಅವರ ಪೋಷಕರ ಬೆಳೆಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. "ಗೋವಾದವನಾಗಿ, ಯುರೋಪ್‌ಗಿಂತ ಭಾರತದಲ್ಲೇ ಹೆಚ್ಚು ಜನಾಂಗೀಯ ತಾರತಮ್ಯವಿದೆ ಎಂದು ನನಗೆ ಅನಿಸುತ್ತದೆ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು "ಇಲ್ಲಿ ತೃಪ್ತಿಯ ಮಟ್ಟ ಉತ್ತುಂಗದಲ್ಲಿದೆ" ಎಂದು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ವರ್ಷಕ್ಕೆ ₹82 ಲಕ್ಷ ಸಂಬಳ, 43 ಲಕ್ಷ ಉಳಿತಾಯ ಇದ್ದರೂ ಈ ಕೆನಡಾ ಸರ್ಕಾರಿ ಉದ್ಯೋಗಿಗೆ ಭಾರತಕ್ಕೆ ಮರಳುವ ತವಕ!
105ನೇ ವಯಸ್ಸಿನಲ್ಲಿ ಭಾಗೀರಥಿ ಅಮ್ಮನಿಗೆ ಗಣಿತದಲ್ಲಿ 100ಕ್ಕೆ 100, ನಾರಿ ಶಕ್ತಿ ಪುರಸ್ಕಾರ