
ಬೆಂಗಳೂರು (ಸೆ.03): ಬಡತನದ ಕುಟುಂಬದಲ್ಲಿ ಹುಟ್ಟಿದ ಹಿರಿಯ ಮಗ, ಓದಿನಲ್ಲಿ ತುಂಬಾ ಬುದ್ಧಿವಂತ. ಆದರೆ, ತನ್ನ ಮುಂದಿನ ಓದಿನ ಕಾಲೇಜು ಶುಲ್ಕಕ್ಕೆ ತಾನೇ ದುಡಿಯುವ ಅನಿವಾರ್ಯತೆಯೂ ಇತ್ತು. ಹೀಗಾಗಿ, ಬೆಂಗಳೂರು ನಗರಕ್ಕೆ ಬಂದು ಗಾರೆ ಕೆಲಸದಲ್ಲಿ ಸಲಿಕೆಯನ್ನು (ಗುದ್ದಲಿ/ಕೊಟ್ಟು) ಹಿಡಿದು ಸಿಮೆಂಟ್ ಕಲಸುತ್ತಿದ್ದ ಹುಡುಗನಿಗೆ ಅತ್ತಿಂದ ತನ್ನ ಶಿಕ್ಷಕರ ಫೋನ್ ಬರುತ್ತದೆ. ತಕ್ಷಣವೇ ಆ ಗಾರೆ ಕೆಲಸದ ಹುಡುಗ ಅಪ್ಪನಿಗೆ ಹೇಳುತ್ತಾನೆ 'ಅಪ್ಪಾ ನಾನೀಗ ಡಾಕ್ಟರ್ ಆಗುತ್ತಿದ್ದೇನೆ' ಎಂದು ಹೇಳಿದ್ದಾನೆ. ಅಂದರೆ, ರಾಷ್ಟ್ರಮಟ್ಟದಲ್ಲಿ ಸರ್ಕಾರ ನಡೆಸುವ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿ ಡಾಕ್ಟರ್ ಆಗುವುದಕ್ಕೆ ಕಾಲೇಜೊಂದರಲ್ಲಿ ಸೀಟು ಸಿಕ್ಕಿರುತ್ತದೆ. ಈಗ ಗಾರೆ ಕೆಲಸ ಮಾಡುತ್ತಿರುವ ಹುಡುಗ ಇನ್ನೈದು ತಿಂಗಳಲ್ಲಿ ಸ್ಕೆತಾಸ್ಕೋಪ್ ಹಿಡಿಯುತ್ತಾನೆ. ಮುಂದಿನ 5 ವರ್ಷದಲ್ಲಿ ಡಾಕ್ಟರ್ ಆಗಿ ಚಿಕಿತ್ಸೆ ನೀಡಲಿದ್ದಾನೆ.
ಈ ಯಶಸ್ಸಿನ ಕಥೆಯನ್ನು ದೀಪಾ ಹಿರೇಗುತ್ತಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 'ಓಡಿಶಾದ ಖುರ್ದಾ ಜಿಲ್ಲೆಯ ಪುಟ್ಟ ಹಳ್ಳಿಯ ಹತ್ತೊಂಬತ್ತು ವರ್ಷದ ಹುಡುಗ ಶುಭಂ ಸಬರ್ ಹನ್ನೆರಡನೇ ತರಗತಿಯ ಪರೀಕ್ಷೆ ಮುಗಿಸಿ, ನೀಟ್ ಪರೀಕ್ಷೆಯನ್ನೂ ಬರೆದು ಬೆಂಗಳೂರಿಗೆ ಬಂದಿದ್ದ! ಪಾಪ ನೀಟ್ ಪರೀಕ್ಷೆಗೆ ಓದಿ ಮಗ ಸುಸ್ತಾಗಿದ್ದಾನೆ ಎಂದು ಅವರಪ್ಪ ಬೆಂಗಳೂರಿನ ಪ್ರವಾಸಕ್ಕೆ ಕಳಿಸಿದ್ದಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ಶುಭಂ ಅಷ್ಟೆಲ್ಲ ಅನುಕೂಲವಿದ್ದವನಲ್ಲ. ತಂದೆಯ ಹತ್ತಿರ ಇರುವುದು ಇಷ್ಟೇ ಇಷ್ಟು ಜಮೀನು. ಅದರಲ್ಲಿ ಮನೆಯವರ ಹೊಟ್ಟೆ ತುಂಬಿಸುವುದೇ ಕಷ್ಟ! ನಾಲ್ಕು ಮಕ್ಕಳಲ್ಲಿ ಇವನೇ ಹಿರಿಯ.
ನೀಟ್ ಪರೀಕ್ಷೆ ಬರೆದು ಗಾರೆ ಕೆಲಸಕ್ಕೆ ಬಂದಿದ್ದವ ಪಾಸ್:
ಇದೀಗ ಪಿಯು ಮುಗಿಸಿ ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ದುಡಿದು ನಾಲ್ಕು ಕಾಸು ಮಾಡಿಕೊಂಡರೆ ಕಾಲೇಜು ಶುಲ್ಕ ಕಟ್ಟಲು ಸಹಾಯವಾಗುವುದಲ್ಲವೇ, ಕುಟುಂಬಕ್ಕೆ ಒಳ್ಳೆಯದಲ್ಲವೇ? ಅದಕ್ಕಾಗಿ ಶುಭಂ ಬೆಂಗಳೂರಿಗೆ ಬಂದಿದ್ದು! ಕೂಲಿ ಕೆಲಸ ಮಾಡಿ ಒಂದಿಷ್ಟು ಹಣ ಮಾಡಿಕೊಳ್ಳಲು! ಜೂನ್ 14ನೇ ತಾರೀಖು ಆತ ಕೂಲಿ ಕೆಲಸ ಮಾಡುತ್ತಿರುವಾಗಲೇ ಓಡಿಶಾದಿಂದ ಶಿಕ್ಷಕರೊಬ್ಬರು ಕರೆ ಮಾಡಿದರು. ಅದು ತನ್ನ ಬದುಕು ಬದಲಾಯಿಸುವ ಕರೆಯಾಗುತ್ತದೆಂಬ ಅಂದಾಜು ಶುಭಂಗೆ ಇತ್ತೋ ಇಲ್ಲವೋ! ಶುಭಂ ನೀಟ್ ಪರೀಕ್ಷೆ ಕ್ರ್ಯಾಕ್ ಮಾಡಿದ್ದ!
ಆದರೆ, ಇನ್ನೂ ಕೆಲಸಕ್ಕೆ ಬಂದಿದ್ದಷ್ಟೇ. ಬಿಟ್ಟು ಹೋಗುವುದು ಹೇಗೆ? ಅಳುತ್ತ ಶುಭಂ ತನ್ನ ಪಾಲಕರಿಗೆ ಕರೆ ಮಾಡಿ ತಾನು ಡಾಕ್ಟರ್ ಆಗಲಿದ್ದೇನೆ ಅಪ್ಪಾ, ಅಮ್ಮಾ ಎಂದ! ಕಾಂಟ್ರಾಕ್ಟರ್ ಹತ್ತಿರ ಹೇಳಿ ತನ್ನ ಉಳಿಕೆ ಹಣವನ್ನು ತೆಗೆದುಕೊಂಡು ಊರಿನ ರೈಲು ಹತ್ತಿದ ಶುಭಂ ಈಗ ಬೆಹ್ರಾಮ್‌ಪುರದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಕೆಲವರಿರುತ್ತಾರೆ, ಪರಿಸ್ಥಿತಿ ತಮ್ಮ ವಿರುದ್ಧ ಇದ್ದಾಗ ಅದೇಕೆ ನೋಡೇ ಬಿಡೋಣ ಎಂದು ಪರಿಸ್ಥಿತಿಗೇ ಸವಾಲು ಹಾಕಿ ಯಶಸ್ವಿಯಾಗುವವರು. ಅಂತಹ ವ್ಯಕ್ತಿಗಳಲ್ಲೊಬ್ಬ ಶುಭಂ, ಈ ಹುಡುಗ ಒಳ್ಳೆಯ ವೈದ್ಯನಾಗಲಿ. ಅವನ ಒಡಹುಟ್ಟಿದವರು, ಊರಿನ ಇತರ ಹುಡುಗರು ಈ ಸ್ಫೂರ್ತಿಯಿಂದ ಬೆಳಕನ್ನು ಕಾಣಲಿ. ಮತ್ತು ಏನು ಮಾಡಲೂ ನೆಪ ಹೇಳುವವರಿಗಂತೂ ಶುಭಂ ಸಾಧನೆಗಿಂತ ಎಚ್ಚರಿಕೆಯ ಪಾಠ ಮತ್ತೊಂದಿಲ್ಲ. ಏನಂತೀರಾ?' ಎಂದು ಬರೆದುಕೊಂಡಿದ್ದಾರೆ.