
ಬೀಜಿಂಗ್ (ಆ.14): ಚೀನಾದ ಮ್ಯಾಗ್ಲೇವ್ ಬುಲೆಟ್ ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗ ಪಡೆಯುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಜತೆಗೆ, ಕಳೆದ 6 ತಿಂಗಳಲ್ಲಿ 3ನೇ ಬಾರಿ ತನ್ನದೇ ದಾಖಲೆಯನ್ನು ಮುರಿದಿದೆ. ಹುಬೆ ಪ್ರಾಂತ್ಯದ ಡೊಂಗು ಪ್ರಯೋಗಾಲಯದಲ್ಲಿರುವ 1 ಕಿ.ಮೀ. ಟ್ರ್ಯಾಕ್‌ನಲ್ಲಿ ರೈಲಿನ ಮಾದರಿಯನ್ನು ಮ್ಯಾಗ್ಲೇವ್ (ಕಾಂತೀಯ ತೇಲುವಿಕೆ) ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಸ್ಟಾರ್ಟ್ ಆದ 5.3 ಸೆಕೆಂಡುಗಳಲ್ಲೇ ಅದು, ಗಂಟೆಗೆ 800 ಕಿ.ಮೀ. ಕ್ರಮಿಸುವಷ್ಟು ವೇಗವಾಗಿ ಓಡಲು ಆರಂಭಿಸಿತು. ಹೀಗೆ 200 ಮೀ. ಓಡುತ್ತಿದ್ದಂತೆ ಅದನ್ನು ನಿಲ್ಲಿಸಲಾಯಿತು. ಈ ಮೂಲಕ, ಗರಿಷ್ಠ ವೇಗದಲ್ಲಿ ಚಲಿಸುತ್ತಿರುವಾಗ ಬ್ರೇಕಿಂಗ್ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಪರೀಕ್ಷಿಸಲಾಯಿತು.
2025ರ ಜೂನ್‌ನಲ್ಲಿ ನಡೆದ ಪರೀಕ್ಷೆ ವೇಳೆ ಈ ರೈಲು 7 ಸೆಕೆಂಡಲ್ಲಿ ಗಂಟೆಗೆ 650 ಕಿ.ಮೀ. ವೇಗ ಪಡೆದುಕೊಂಡಿತ್ತು. ಬಳಿಕ ಅಧಿಕ-ಶಕ್ತಿಯ ವಿದ್ಯುತ್ ಪೂರೈಕೆ, ವಿದ್ಯುತ್ ಕಾಂತೀಯ ಚಲನಾ ಶಕ್ತಿ (ಪ್ರೊಪಲ್ಷನ್), ತೇಲುವಿಕೆ ನಿಯಂತ್ರಣ ಮತ್ತು ತುರ್ತು ಬ್ರೇಕಿಂಗ್‌ನಂತಹ ತಂತ್ರಜ್ಞಾನಗಳ ಸಾಮರ್ಥ್ಯ ಹೆಚ್ಚಿಸುವ ಮೂಲಕ ರೈಲಿನ ವೇಗವನ್ನು ಕ್ರಮೇಣವಾಗಿ 700 ಕಿ.ಮೀ., 798 ಕಿ.ಮೀ.ಗೆ ಹೆಚ್ಚಿಸಲಾಯಿತು.
ಸದ್ಯ ಚೀನಾದಲ್ಲಿ ಓಡುತ್ತಿರುವ ಬುಲೆಟ್ ರೈಲಿನ ಗರಿಷ್ಠ ವೇಗ ಗಂಟೆಗೆ 350 ಕಿ.ಮೀ. ಆಗಿದೆ. ಈಗ ಪರೀಕ್ಷಿಸಲಾಗಿರುವ ತಂತ್ರಜ್ಞಾನವನ್ನು ಸಾರ್ವಜನಿಕರ ಓಡಾಟಕ್ಕಿರುವ ರೈಲಿನಲ್ಲಿ ಬಳಸಲಾಗುವುದಿಲ್ಲ. ಬದಲಿಗೆ ಭವಿಷ್ಯದಲ್ಲಿ ರಾಕೆಟ್ ತಂತ್ರಜ್ಞಾನ, ಬಾಹ್ಯಾಕಾಶಯಾನದಂತಹ ಅತಿವೇಗದ ಚಲನೆಯ ಅಗತ್ಯವಿರುವ ಕೆಲಸಗಳಿಗೆ ಉಪಯೋಗಿಸಲಾಗುವುದು.
ಮ್ಯಾಗ್‌ಲೆವ್ ರೈಲುಗಳಿಗೆ ಚಕ್ರಗಳಿರುವುದಿಲ್ಲ ಹಾಗೂ ಅವು ಟ್ರ್ಯಾಕ್ ಮೇಲೆ ಚಲಿಸುವುದಿಲ್ಲ. ಬದಲಿಗೆ, ಹಳಿಗಳಲ್ಲಿ ವಿದ್ಯುತ್ ಹಾಯಿಸುವ ಮೂಲಕ ಅದನ್ನು ಅಯಸ್ಕಾಂತ ಮಾಡಲಾಗುವುದು (ಮ್ಯಾಗ್ನೆಟೈಸ್). ಈ ಮ್ಯಾಗ್ನೆಟಿಕ್ ಗುಣವು ರೈಲನ್ನು ಟ್ರ್ಯಾಕ್‌ನಿಂದ ಕೊಂಚ ಎತ್ತರ ಎತ್ತಿ ಹಿಡಿಯುತ್ತದೆ ಹಾಗೂ ಚಲಿಸುವಂತೆ ಮಾಡುತ್ತದೆ. ರೈಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವುದು.