
ಚಿಕ್ಕಮಗಳೂರು (ಜುಲೈ 11): ಕಾಫಿನಾಡು ಚಿಕ್ಕಮಗಳೂರಿನಿಂದ ದೇಶದ ಪ್ರಸುದ್ಧ ಧಾರ್ಮಿಕ ಕ್ಷೇತ್ರವಾಗಿರುವ ತಿರುಪತಿಗೆ ಹೊಸದಾಗಿ ಆರಂಭ ಮಾಡಲಾಗುತ್ತಿರುವ ನೇರ ರೈಲು ಸಂಪರ್ಕಕ್ಕೆ ಇಂದು ಚಾಲನೆ ನೀಡಲಾಯಿತು. ಚಿಕ್ಕಮಗಳೂರು-ತಿರುಪತಿ ಎಕ್ಸ್ಪ್ರೆಸ್ ರೈಲು ಹೊರಡುವ ಮುನ್ನ ಅಜ್ಜಿಯೊಬ್ಬರು ನೂತನ ರೈಲಿಗೆ ಮೂರು ಬಾರಿ ಅಡ್ಡಬಿದ್ದು ನಮಸ್ಕಾರ ಮಾಡಿ, ದಕ್ಷಿಣೆ ಇಟ್ಟುಬಂದ ದೃಶ್ಯ ಭಾರೀ ವೈರಲ್ ಆಗುತ್ತಿದೆ. ಈ ಅಜ್ಜಿ ತಮ್ಮನ್ನು ತಿರುಪತಿಗೆ ಕರೆದೊಯ್ಯುವ ರೈಲಿಗೆ ಇಷ್ಟು ಭಕ್ತಿ ಸಮರ್ಪಣೆ ಮಾಡಿದ್ದನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಮೂಕವಿಸ್ಮಿತರಾಗಿದ್ದಾರೆ. ಕೆಲವರು ನಗುತ್ತಾ ನಿಂತರೆ, ಇನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್ ಮಾಡಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಕ್ತಿಭಾವನೆ ಮೆರೆಯುವ ಅಪರೂಪದ ದೃಶ್ಯ ಇಂದು ಕಂಡುಬಂದಿದ್ದು, ಎಲ್ಲರ ಗಮನ ಸೆಳೆದಿದೆ. ತಿರುಪತಿ ವೆಂಕಟೇಶ್ವರ ದೇವರಿಗೆ ಭಕ್ತು ಸಮರ್ಪಣೆ ಮಾಡುವಂತೆಯೇ ವೃದ್ಧೆ ಲಕ್ಷ್ಮೀ ಬಾಯಿ ಎನ್ನುವವರು ತಿರುಪತಿ ಸನ್ನಿಧಿಗೆ ಹೊರಟ ರೈಲಿಗೆ ಕೂಮುಗಿದು ಭಕ್ತಿ ಸಮರ್ಪಣೆ ಮಾಡಿದ್ದಾರೆ. ಚಿಕ್ಕಮಗಳೂರು-ತಿರುಪತಿ ಎಕ್ಸ್ಪ್ರೆಸ್ ರೈಲು ಹೊರಡುವ ಮುನ್ನ ರೈಲಿಗೆ ಮೂರು ಬಾರಿ ಅಡ್ಡ ಬಿದ್ದು ನಮಸ್ಕಾರ ಮಾಡಿದ ಘಟನೆ ರೈಲು ನಿಲ್ದಾಣದಲ್ಲಿ ನಡೆಯಿತು.
ಹಿರೇಮಗಳೂರಿನ ನಿವಾಸಿಯಾದ ಲಕ್ಷ್ಮೀ ಬಾಯಿ, ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ತಿರುಪತಿ ಯಾತ್ರೆಗೆ ಹೋಗುವ ಭಕ್ತೆ ಆಗಿದ್ದಾರೆ. ಇಂದು ಚಿಕ್ಕಮಗಳೂರಿನಿಂದ ತಿರುಪತಿಗೆ ಹೊಸದಾಗಿ ಚಾಲನೆ ನೀಡಲಾದ ರೈಲು ನಿಲ್ದಾಣದ ಬಳಿ ಅವರು ಹಾಜರಿದ್ದು, ಭಕ್ತಿಭಾವದಿಂದ ಮೂರು ಬಾರಿ ರೈಲಿಗೆ ಅಡ್ಡಬಿದ್ದು ಶಿರಸಾಷ್ಟಾಂಗ ನಮಸ್ಕಾರ ಮಾಡಿ, ಸ್ವಾಮಿ ಆಶೀರ್ವಾದ ಕೋರಿ ರೈಲಿನ ಬೋಗಿಗೆ ಹಾರೈಸಿದರು.
ವೃದ್ಧೆಯ ಭಕ್ತಿಯ ದೃಶ್ಯ ಎಲ್ಲರ ಮನ ಗೆದ್ದಿದ್ದು, ಸ್ಥಳದಲ್ಲಿದ್ದ ಪ್ರಯಾಣಿಕರು, ರೈಲ್ವೆ ಸಿಬ್ಬಂದಿ ಮತ್ತು ಸಾರ್ವಜನಿಕರು ಆ ದೃಶ್ಯವನ್ನು ಕಣ್ತುಂಬಿಕೊಂಡು ಚಪ್ಪಾಳೆ ತಟ್ಟಿದರು. ಲಕ್ಷ್ಮೀ ಬಾಯಿ ಮಾತನಾಡುತ್ತಾ, 'ನನ್ನ ಮನೆದೇವರು ತಿರುಪತಿ ವೆಂಕಟೇಶ್ವರ. ನಾನು ಈ ರೈಲಿನಲ್ಲಿ ತಿರುಪತಿ ಹೋಗುವುದು ನನ್ನ ಜೀವನದ ಭಾಗವಾಗಿದೆ. ಈ ರೈಲು ನಮ್ಮ ಕ್ಷೇತ್ರದತ್ತ ಹೊರಡುತ್ತಿರುವುದು ಶುಭ ಮಾರ್ಗವಾಗಿದೆ. ಹಾಗಾಗಿ ನನ್ನ ಭಕ್ತಿಯ ಪ್ರಕಾರ ನಾನು ನಮಸ್ಕಾರ ಮಾಡಿದೆ' ಎಂದು ತಿಳಿಸಿದ್ದಾರೆ.
ಇಂದು ಚಾಲನೆಗೊಂಡ ರೈಲು ಚಿಕ್ಕಮಗಳೂರು-ತಿರುಪತಿ ನೇರ ಸಂಪರ್ಕ ಸಾಧಿಸುವ ನೂತನ ಪ್ರಯಾಣದ ಸಾರಥಿಯಾಗಿದ್ದು, ಇದರಿಂದ ಕಾಫಿನಾಡಿನ ಭಕ್ತರು ತಿರುಪತಿಗೆ ಸುಲಭವಾಗಿ ಪ್ರಯಾಣ ಮಾಡಬಹುದು. ಈ ವೈರಲ್ ವಿಡಿಯೋ ಭಕ್ತಿ ಎಂಬುದು ದೇವಸ್ಥಾನಗಳಿಗೆ ಸೀಮಿತವಲ್ಲ ಎಂಬುದನ್ನು ಚಿಕ್ಕಮಗಳೂರಿನ ವೃದ್ಧೆ ಲಕ್ಷ್ಮೀ ಬಾಯಿ ತೋರಿಸಿದ್ದಾರೆ. ಹೊಸ ರೈಲು ತಿರುಪತಿಯತ್ತ ಹೊರಡುವ ಮುನ್ನ ಅಡ್ಡ ಬಿದ್ದು ನಮಸ್ಕಾರ ಮಾಡಿದ ದೃಶ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.