
ಬೆಂಗಳೂರು: ಭಾರತದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸುಲಿಗೆ ಮತ್ತು ದುಬಾರಿ ಜೀವನ ವೆಚ್ಚದ ಬಗ್ಗೆ ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಹಂಚಿಕೊಂಡ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಸಿಗುವ 'ಕೆಲಸ'ಗಳ ಒಂದು ತಮಾಷೆಯ ಪಟ್ಟಿಯನ್ನು ಸಾಕ್ಷಿ ಅವರು ಎಕ್ಸ್ (X) ಮತ್ತು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಪಿಜಿ (PG) ಮಾಲೀಕರು
ಸಿಗರೇಟ್ (ಗೂಡಂಗಡಿ) ಅಂಗಡಿ ಮಾಲೀಕರು
ಬೆಂಗಳೂರಿನ ಮನೆ ಮಾಲೀಕರು (ಲ್ಯಾಂಡ್‌ಲಾರ್ಡ್)
ವಾಟರ್ ಟ್ಯಾಂಕರ್ ಮಾಲೀಕರು
ರಿಯಲ್ ಎಸ್ಟೇಟ್ ಬ್ರೋಕರ್
ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸಾಕ್ಷಿ ಹೇಳಿರುವ ಪ್ರಮುಖ ಅಂಶಗಳು ಹೀಗಿವೆ. ಪಿಜಿ ಮಾಲೀಕರು ಒಂದು ರೂಮಿನಲ್ಲಿ ಮೂರು ಜನರನ್ನು ತುಂಬಿ, ಪ್ರತಿಯೊಬ್ಬರಿಂದ 10,000 ದಿಂದ 15,000 ರೂಪಾಯಿ ವಸೂಲಿ ಮಾಡುತ್ತಾರೆ. ಫ್ಲ್ಯಾಟ್‌ಗೆ 40,000 ರೂಪಾಯಿ ಬಾಡಿಗೆ ಕಟ್ಟುವ ಇವರು, ತಿಂಗಳಿಗೆ 1 ರಿಂದ 1.5 ಲಕ್ಷ ರೂಪಾಯಿ ಲಾಭ ಮಾಡುತ್ತಾರೆ. ಬಾಡಿಗೆದಾರರ ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಮನೆ ಮಾಲೀಕರು ಹೇಗೆ ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಾರೆ ಎಂಬುದನ್ನು ಕೂಡ ಸಾಕ್ಷಿ ತಮಾಷೆಯಾಗಿ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಬ್ರೋಕರ್‌ಗಳು ಲೀಕ್ ಆಗುವ ಅಥವಾ ಇಲಿಗಳಿರುವ ಫ್ಲ್ಯಾಟ್‌ಗಳನ್ನು ತೋರಿಸುತ್ತಾರೆ. 'ಮೆಟ್ರೋಗೆ ನಡೆದು ಹೋಗುವಷ್ಟು ದೂರ' ಎಂದು ಹೇಳುವ ಫ್ಲ್ಯಾಟ್ 5 ಕಿಲೋಮೀಟರ್ ದೂರದಲ್ಲಿರುತ್ತದೆ. ಆದರೂ ನೀವು ಆ ಫ್ಲ್ಯಾಟ್ ತೆಗೆದುಕೊಳ್ಳುವಂತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೊನೆಗೆ, ನೀವೂ ಮತ್ತು ಮನೆ ಮಾಲೀಕರೂ ಸೇರಿ ಇವರಿಗೆ ಒಂದು ತಿಂಗಳ ಬಾಡಿಗೆಯನ್ನು ಕಮಿಷನ್ ಆಗಿ ಕೊಡಬೇಕು.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಆಗಾಗ ಕಾಡುತ್ತಲೇ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಾಟರ್ ಟ್ಯಾಂಕ್ ಮಾಲೀಕರು ಒಂದು ವಾಟರ್ ಟ್ಯಾಂಕ್‌ಗೆ 1200ರಿಂದ 1500 ರುಪಾಯಿ ಚಾರ್ಜ್ ಮಾಡುತ್ತಾರೆ. ದಿನಕ್ಕೆ ಹಲವು ಟ್ರಿಪ್ ವಾಟರ್ ಸಪ್ಲೆ ಮಾಡುವುದರಿಂದ ವಾಟರ್ ಟ್ಯಾಂಕ್ ಮಾಲೀಕರು ಒಳ್ಳೆಯ ದುಡಿಮೆ ಮಾಡುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಇದೆಲ್ಲದರ ನಡುವೆ, ಸಂಬಳ ಜಾಸ್ತಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು ರಾತ್ರಿ 2 ಗಂಟೆಗೆ ಡಿಎಸ್‌ಎ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂತಿರುತ್ತಾರೆ," ಎಂದು ಐಟಿ ವಲಯದ ವೃತ್ತಿಪರರ ಸ್ಥಿತಿಯನ್ನು ವಿವರಿಸಿ ಸಾಕ್ಷಿ ಪೋಸ್ಟ್ ಮಾಡಿದ್ದಾರೆ.
I analysed the Indian job market and here are the highest paying careers right now:
1. PG Owner:
This guy has 3 people packed into one room paying ₹10k–15k each.
He’s probably paying ₹40k rent for the flat and making ₹1–1.5 lakhs from it.
2. Sutta Shop Owner:
Thousands of…— Sakshi (@Sakshi50038) August 25, 2026
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
ಸಾಕ್ಷಿ ಅವರ ಈ ಮಾತುಗಳು ಅಕ್ಷರಶಃ ಸತ್ಯ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ. "ಕೆಲಸ ಉಳಿಸಿಕೊಳ್ಳಲು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಯುರೋಪ್ ಮತ್ತು ಯುಎಸ್ ಉದ್ಯೋಗಿಗಳ ಮಟ್ಟದಲ್ಲಿ ಕೆಲಸ ಮಾಡಬೇಕು. ಆದರೆ ಈ 1 ರಿಂದ 5ನೇ ಸ್ಥಾನದಲ್ಲಿರುವವರು ಕೊಡುವ ಸೇವೆಯ ಗುಣಮಟ್ಟವಾದರೂ ಏನು?" ಎಂದು ಒಬ್ಬರು ಪ್ರಶ್ನಿಸಿದ್ದಾರೆ.
"1, 3, ಮತ್ತು 5ನೇ ಸ್ಥಾನದಲ್ಲಿರುವವರು ಪಕ್ಕಾ ರಿಯಲ್. ಈ ಮಾಫಿಯಾ ಆಳವಾಗಿ ಬೇರೂರಿದೆ. ಕೋವಿಡ್ ಸಮಯದಲ್ಲಿ ವರ್ಕ್ ಫ್ರಂ ಹೋಮ್ ಸಾಧ್ಯ ಎಂದು ಗೊತ್ತಾಯ್ತು, ಈಗ ಎಐ ಅಲೆಯೂ ಬಂದಿದೆ. ಆದರೂ ಐಟಿ ಆಫೀಸ್‌ಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ಆಗುತ್ತಿಲ್ಲ. ಮನುಷ್ಯರು ಸೃಷ್ಟಿಸಿದ ಈ ಸಮಸ್ಯೆಯನ್ನು ಎಐ ಕೂಡ ಬಗೆಹರಿಸಲು ಸಾಧ್ಯವಿಲ್ಲ" ಎಂದು ಮತ್ತೊಬ್ಬರು ಬರೆದಿದ್ದಾರೆ.
ಒಟ್ಟಿನಲ್ಲಿ, ಸಾಕ್ಷಿ ಅವರ ಈ ವೈರಲ್ ಪೋಸ್ಟ್, ಬೆಂಗಳೂರಿನ ಟೆಕ್ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ದುಬಾರಿ ಜೀವನ ವೆಚ್ಚ ಮತ್ತು ರಿಯಲ್ ಎಸ್ಟೇಟ್ ಸುಲಿಗೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿದೆ.