
ಒಂದು ಪುಟ್ಟ ಮಗು, ಒಂದು ನಾಯಿ, ಇಬ್ಬರಿಗೂ ಕೆಲಸ ಮತ್ತು ಜಾಯಿಂಟ್ ಅಕೌಂಟ್, ಇವೆಲ್ಲವನ್ನೂ ನಿರ್ವಹಿಸುತ್ತಿರುವ ಬೆಂಗಳೂರಿನ ಮಿಲೇನಿಯಲ್ ದಂಪತಿ ಇದೀಗ ತಮ್ಮ ಹಣಕಾಸಿನ ನಿರ್ವಹಣೆಯ ಬಗ್ಗೆ ಹಂಚಿಕೊಂಡಿರುವ ಐದು ನಿಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
ಮೇಘಾ ಮತ್ತು ಶುಭಂ ತಮ್ಮ ಇನ್‌ಸ್ಟಾಗ್ರಾಮ್ ಖಾತೆ @the12absprojectನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ತಮ್ಮ ಕುಟುಂಬದ ವ್ಯವಾರದ ಬಗ್ಗೆ ವಿವರಿಸಿದ್ದಾರೆ. ಆರೋಗ್ಯದ ಮೇಲೆ ಹೂಡಿಕೆ ಮಾಡುವುದು, ಭವಿಷ್ಯಕ್ಕಾಗಿ ಹಣ ಉಳಿಸುವುದು ಮತ್ತು ದಂಪತಿಯಾಗಿ ಖರ್ಚುಗಳನ್ನು ಹಂಚಿಕೊಳ್ಳುವುದು ಅವರ ಹಣದ ನಿರ್ವಹಣೆಯ ಪ್ರಮುಖ ಅಂಶಗಳಾಗಿವೆ.
ವಿಡಿಯೋ ಆರಂಭದಲ್ಲಿ ಮೇಘಾ, “ನಾವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇವೆ. ನಮಗೆ ಒಂದು ಪುಟ್ಟ ಮಗು, ಒಂದು ನಾಯಿ, ಎರಡು ಪೂರ್ಣಕಾಲಿಕ ಉದ್ಯೋಗಗಳು ಮತ್ತು ಒಂದು ಜಾಯಿಂಟ್ ಅಕೌಂಟ್ ತತ್ವಶಾಸ್ತ್ರವಿದೆ. ಬೆಂಗಳೂರಿನ ನಮ್ಮ ಕುಟುಂಬದ ಐದು ಹಣದ ನಿಯಮಗಳು ಇಲ್ಲಿವೆ” ಎಂದು ಹೇಳಿದ್ದಾರೆ.
ದಂಪತಿಯ ಮೊದಲ ನಿಯಮವೇ ‘ನಮ್ಮ ಇಮೇಜ್‌ಗಾಗಿ ಅಲ್ಲ, ನಮ್ಮ ಜೀವನಕ್ಕಾಗಿ ಖರ್ಚು ಮಾಡಬೇಕು’ ಎಂಬುದು. ಈ ಬಗ್ಗೆ ಮಾತನಾಡಿದ ಶುಭಂ, “ನಾವು ಎಂದಿಗೂ ಹೆಮ್ಮೆಪಡಲು ಹಣವನ್ನು ಖರ್ಚು ಮಾಡುವುದಿಲ್ಲ. ಆದರೆ ನಮಗೆ ನಿಜವಾಗಿಯೂ ಸಂತೋಷ ನೀಡುವ ವಿಷಯಗಳಿಗೆ ಮುಕ್ತವಾಗಿ ಖರ್ಚು ಮಾಡುತ್ತೇವೆ. ಫ್ಯಾನ್ಸಿ ಕಾರುಗಳು ಬೇಡ, ಬ್ರಾಂಡೆಡ್ ಬಟ್ಟೆಗಳು ಬೇಡ, ಲಾಕರ್‌ನಲ್ಲಿ ಇಟ್ಟುಬಿಡುವ ಆಭರಣಗಳೂ ಬೇಡ” ಎಂದು ಹೇಳಿದ್ದಾರೆ.
ಆದರೆ ಮನೆ ಅಥವಾ ತಾವು ವಾಸಿಸುವ ಹೌಸಿಂಗ್ ಸೊಸೈಟಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮೇಘಾ ಹೇಳಿದ್ದಾರೆ. ಏಕೆಂದರೆ ತಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುತ್ತೇವೆ ಮತ್ತು ತಮ್ಮ ಮಗಳನ್ನು ಬೆಳೆಸುತ್ತಿರುವುದು ಇದೇ ಸ್ಥಳದಲ್ಲಿ ಎಂದು ಅವರು ವಿವರಿಸಿದ್ದಾರೆ.
ದಂಪತಿಯ ಎರಡನೇ ನಿಯಮ ‘ವಸ್ತುಗಳಿಗಿಂತ ನೆನಪುಗಳು’. “ವಸ್ತುಗಳಿಗಿಂತ ನೆನಪುಗಳು. ಪ್ರತಿ ಬಾರಿಯೂ” ಎಂದು ಶುಭಂ ಹೇಳಿದ್ದಾರೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವುದಕ್ಕೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಮೇಘಾ ಪ್ರಕಾರ, ಅವರ ಕುಟುಂಬ ಪ್ರತಿ ಬೇಸಿಗೆಯಲ್ಲಿ ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳುತ್ತದೆ. ಇದರ ಜೊತೆಗೆ ವರ್ಷದಲ್ಲಿ ಹಲವು ಬಾರಿ ಟ್ರಿಪ್‌ಗಳನ್ನು ಯೋಜಿಸುತ್ತಾರೆ.
ಅಗತ್ಯವಿದ್ದಾಗ, ವಿಶೇಷವಾಗಿ ಹಬ್ಬಗಳ ಸಮಯದಲ್ಲಿ ತಮ್ಮ ಪೋಷಕರನ್ನು ಭೇಟಿ ಮಾಡಲು ಕೂಡ ಪ್ರಯತ್ನಿಸುತ್ತಾರೆ. ದುಬಾರಿ ವಸ್ತುಗಳನ್ನು ಖರೀದಿಸುವುದಕ್ಕಿಂತ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವಗಳಿಗೆ ಹಣ ಖರ್ಚು ಮಾಡುವುದು ತಮ್ಮ ಆದ್ಯತೆ ಎಂದು ದಂಪತಿ ಹೇಳಿದ್ದಾರೆ.
ದಂಪತಿಯ ಮೂರನೇ ಹಣದ ನಿಯಮ ಆರೋಗ್ಯ ಮತ್ತು ಫಿಟ್ನೆಸ್‌ಗೆ ಆದ್ಯತೆ ನೀಡುವುದು. “ಫಿಟ್ನೆಸ್ ಬಗ್ಗೆ ಯಾವುದೇ ರಾಜಿ ಇಲ್ಲ. ನಾವು ಈಗ ಫಿಟ್ ಆಗಿದ್ದರೆ, ಭವಿಷ್ಯದಲ್ಲಿ ಆಸ್ಪತ್ರೆಯ ಬಿಲ್‌ಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿಲ್ಲ” ಎಂದು ಶುಭಂ ಹೇಳಿದ್ದಾರೆ. ಶುದ್ಧ ಆಹಾರ, ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಜಿಮ್ ಸದಸ್ಯತ್ವ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳನ್ನು ಅವರು ಅಗತ್ಯ ಹೂಡಿಕೆ ಎಂದು ಪರಿಗಣಿಸುತ್ತಾರೆ.
“ನಾವು ಮುಂದಿನ ತಿಂಗಳು ಮತ್ತೆ ಆರಂಭಿಸುತ್ತೇವೆ ಎಂದು ಹೇಳಿಕೊಂಡು ಆರೋಗ್ಯವನ್ನು ಮುಂದೂಡುವುದಿಲ್ಲ. ನಮ್ಮ ದೇಹವೇ ನಾವು ಮಾಡುವ ಅತ್ಯಂತ ದೀರ್ಘಕಾಲೀನ ಹೂಡಿಕೆ” ಎಂದು ಮೇಘಾ ಹೇಳಿದ್ದಾರೆ.
ದಂಪತಿಯ ನಾಲ್ಕನೇ ನಿಯಮವೇ ಇದೀಗ ಹೆಚ್ಚು ಗಮನ ಸೆಳೆದಿದೆ. ‘ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚು ಹಣವನ್ನು ಹೂಡಿಕೆ ಮಾಡಬೇಕು’ ಎಂಬುದು ಅವರ ಹಣಕಾಸಿನ ತತ್ವ. ಅಲ್ಪಾವಧಿ ಮತ್ತು ದೀರ್ಘಾವಧಿಯ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹೂಡಿಕೆಗಳನ್ನು ಯೋಜಿಸುತ್ತೇವೆ ಎಂದು ಮೇಘಾ ಹೇಳಿದ್ದಾರೆ. “ನಮ್ಮ ಮನೆಯ ಹೊರಗೆ ನಿಂತಿರುವ ಕಾರಿಗಿಂತ ನಮ್ಮ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿರುವ ಸಂಖ್ಯೆ ನಮಗೆ ಹೆಚ್ಚು ಮುಖ್ಯ” ಎಂದು ಅವರು ಹೇಳಿದ್ದಾರೆ.
ಈ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ತೋರಿಕೆಗಾಗಿ ದುಬಾರಿ ಕಾರು ಖರೀದಿಸುವುದಕ್ಕಿಂತ ಭವಿಷ್ಯಕ್ಕಾಗಿ ಸಂಪತ್ತನ್ನು ನಿರ್ಮಿಸುವುದೇ ಮುಖ್ಯ ಎಂಬ ಸಂದೇಶವನ್ನು ದಂಪತಿ ನೀಡಿದ್ದಾರೆ.
ದಂಪತಿಯ ಐದನೇ ನಿಯಮ ‘ಬಿಲ್ ಹಂಚಿಕೊಳ್ಳಿ, ಹೊಣೆಯನ್ನೂ ಹಂಚಿಕೊಳ್ಳಿ’ ಎಂಬುದು. ಮೇಘಾ ಅವರು ಬಾಡಿಗೆ, ಯುಟಿಲಿಟಿ ಬಿಲ್‌ಗಳು ಮತ್ತು ಮನೆಕೆಲಸದವರ ಸಂಬಳ ಸೇರಿದಂತೆ ನಿಗದಿತ ಮಾಸಿಕ ಖರ್ಚುಗಳನ್ನು ನಿರ್ವಹಿಸುತ್ತಾರೆ. ಮತ್ತೊಂದೆಡೆ, ಶುಭಂ ಅವರು ಕ್ರೆಡಿಟ್ ಕಾರ್ಡ್ ಬಿಲ್‌ಗಳು, ದಿನಸಿ ಮತ್ತು ಪ್ರಯಾಣದಂತಹ ಇತರ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ. ಹೀಗೆ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಖರ್ಚುಗಳನ್ನು ನಿರ್ವಹಿಸುವ ಮೂಲಕ ಕುಟುಂಬದ ಹಣಕಾಸಿನ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ.
“ಇವು ಪರಿಪೂರ್ಣ ನಿಯಮಗಳಲ್ಲ. ಆದರೆ ಇವು ನಮ್ಮ ನಿಯಮಗಳು” ಎಂದು ಶುಭಂ ಹೇಳಿದ್ದಾರೆ. ಇದಕ್ಕೆ ಮೇಘಾ ಕೂಡ, “ಇಲ್ಲಿಯವರೆಗೆ ಇದು ನಮ್ಮ ಕುಟುಂಬಕ್ಕೆ ಉತ್ತಮವಾಗಿ ಕೆಲಸ ಮಾಡಿದೆ” ಎಂದು ಹೇಳಿದ್ದಾರೆ.