
ಬೆಂಗಳೂರಿನಿಂದ ಮುಂಬೈಗೆ ಇತ್ತೀಚೆಗೆ ಶಿಫ್ಟ್ ಆದ ಮಯಾಂಕ್ ಕುಮಾರ್ ಎಂಬ ಟ್ಯಾಲೆಂಟ್ ಅಕ್ವಿಸಿಷನ್ ಪ್ರೊಫೆಷನಲ್, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಸಖತ್ ಸುದ್ದಿಯಲ್ಲಿದ್ದಾರೆ. ಬೆಂಗಳೂರು ಮತ್ತು ಮುಂಬೈ, ಈ ಎರಡು ಮೆಟ್ರೋ ನಗರಗಳಲ್ಲಿನ ಆಟೋ ರಿಕ್ಷಾ ಅನುಭವದ ಬಗ್ಗೆ ಅವರು ಬರೆದುಕೊಂಡಿದ್ದಾರೆ. ಇದು ಕೇವಲ ಸಾರಿಗೆ ವ್ಯವಸ್ಥೆಯ ವ್ಯತ್ಯಾಸ ಮಾತ್ರವಲ್ಲ, ಭಾರತದ ಪ್ರಮುಖ ನಗರಗಳಲ್ಲಿನ ಜನರ ವರ್ತನೆ ಮತ್ತು ಸೇವಾ ಮನೋಭಾವದ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.
ಮಯಾಂಕ್ ಕುಮಾರ್ ಪ್ರಕಾರ, ಅವರಿಗೆ ಮುಂಬೈನಲ್ಲಿ ಆದ ಅತಿದೊಡ್ಡ 'ಕಲ್ಚರ್ ಶಾಕ್' ಟ್ರಾಫಿಕ್, ಹವಾಮಾನ ಅಥವಾ ಮನೆ ಬಾಡಿಗೆಯಿಂದಲ್ಲ. ಬದಲಿಗೆ, ಅಲ್ಲಿನ ಆಟೋ ಚಾಲಕರ ನಡವಳಿಕೆಯಿಂದ.
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವುದು ಅಥವಾ ರಸ್ತೆಯಲ್ಲಿ ನಿಲ್ಲಿಸುವುದು ಒಂದು ದೊಡ್ಡ ತಲೆನೋವಿನ ಕೆಲಸ ಎಂದು ಮಯಾಂಕ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಚಾಲಕರು ಪದೇ ಪದೇ ಬರಲ್ಲ ಎನ್ನುವುದು, ಚೌಕಾಸಿ ಮಾಡುವುದು ಸಾಮಾನ್ಯ. 'ಎಲ್ಲಿ?', 'ಇಲ್ಲ', 'ಮೀಟರ್ ಇಲ್ಲ', 'ತುಂಬಾ ಟ್ರಾಫಿಕ್', 'ಕ್ಯಾನ್ಸಲ್ ಮಾಡಿ ಸರ್', 'ಕ್ಯಾಶ್ ಮಾತ್ರ' ಎಂಬ ಉತ್ತರಗಳು ಪ್ರಯಾಣಿಕರಿಗೆ ಸಾಕಾಗಿ ಹೋಗಿರುತ್ತೆ ಅಂತ ಅವರು ಹೇಳಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ, ಮುಂಬೈನಲ್ಲಿ ಹೆಚ್ಚು ವ್ಯವಸ್ಥಿತ ಮತ್ತು ಸೌಜನ್ಯದ ಅನುಭವವಾಯಿತು ಎಂದು ಅವರು ಹೇಳಿದ್ದಾರೆ. ಒಂದು ಘಟನೆಯನ್ನು ನೆನಪಿಸಿಕೊಂಡ ಅವರು, 'ಒಬ್ಬ ಆಟೋ ಚಾಲಕ ತನಗೆ ಬೇರೆ ಟ್ರಿಪ್ ಇರುವುದರಿಂದ ಪೂರ್ತಿ ದೂರ ಬರಲು ಸಾಧ್ಯವಿಲ್ಲ ಎಂದು ವಿನಯದಿಂದ ಹೇಳಿದರು. ಆದರೂ, ಮುಖ್ಯ ರಸ್ತೆಯವರೆಗೆ ಡ್ರಾಪ್ ಕೊಟ್ಟು, ಅಲ್ಲಿಂದ ಬೇರೆ ಆಟೋ ಹಿಡಿಯಲು ಸಹಾಯ ಮಾಡುವುದಾಗಿ ತಿಳಿಸಿದರು' ಎಂದಿದ್ದಾರೆ.
ಅಷ್ಟು ಕಡಿಮೆ ದೂರಕ್ಕೆ ಹಣ ತೆಗೆದುಕೊಳ್ಳಲು ಚಾಲಕ ನಿರಾಕರಿಸಿದ್ದಲ್ಲದೆ, ಇನ್ನೊಂದು ಆಟೋ ಹಿಡಿಯಲು ಸಹಾಯ ಕೂಡ ಮಾಡಿದರು. ಆ ಹೊಸ ಆಟೋ ಚಾಲಕ ಕೂಡ ಮೀಟರ್ ಹಾಕಿ, ಯಾವುದೇ ಚೌಕಾಸಿ ಇಲ್ಲದೆ ಕರೆದೊಯ್ದರು. ಆಪ್‌ನಲ್ಲಿ ತೋರಿಸಿದ ಅಂದಾಜು ದರಕ್ಕಿಂತಲೂ ಶುಲ್ಕ ಕಡಿಮೆ ಇತ್ತು ಎಂದು ಮಯಾಂಕ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಹಲವರು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಒರ್ವ ಬಳಕೆದಾರರು, "ಬೆಂಗಳೂರು ಆಟೋಗಳು ಈ ಗ್ರಹದಲ್ಲೇ ವಿಶಿಷ್ಟವಾದವು! ನಂಬಿ, ನಾನು ಪಕ್ಕಾ ಬೆಂಗಳೂರಿಗ. ವರ್ಷಗಟ್ಟಲೆ ಅವರಿಗಾಗಿ ವಾದಿಸಿದ್ದೇನೆ, ಚೌಕಾಸಿ ಮಾಡಿದ್ದೇನೆ, ಬೆನ್ನಟ್ಟಿದ್ದೇನೆ, ಕೆಲವೊಮ್ಮೆ ಜಗಳವನ್ನೂ ಮಾಡಿದ್ದೇನೆ. ಹಾಗಾಗಿ ನಾನು ದೂರುತ್ತಿದ್ದರೆ, ಅದು ಸುಮ್ಮನೆ ಹೇಳುವ ಮಾತಲ್ಲ, ವರ್ಷಗಳ ಸ್ಮರಣೀಯ ಅನುಭವಗಳ ಒಟ್ಟು ಫಲಿತಾಂಶ!" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೋರ್ವ ಬಳಕೆದಾರರು, "ನಾನು ಕಳೆದ 2 ವರ್ಷಗಳಿಂದ ಮುಂಬೈನಲ್ಲಿದ್ದೇನೆ ಮತ್ತು ಹಲವು ನಗರಗಳಲ್ಲಿ ಪ್ರಯಾಣಿಸಿದ್ದೇನೆ. ಮುಂಬೈ ಆಟೋ ಚಾಲಕರು ಅತ್ಯಂತ ವಿನಯವಂತರು. ಅವರು ಇಲ್ಲ ಎಂದು ಹೇಳುವುದು ಬಹಳ ಅಪರೂಪ ಮತ್ತು ಯಾವಾಗಲೂ ಮೀಟರ್ ಮೇಲೆ ಓಡಿಸುತ್ತಾರೆ. ಮುಖ್ಯವಾಗಿ, ಹೆಚ್ಚಿನವರು ಡಿಜಿಟಲ್ ಪೇಮೆಂಟ್ ಸ್ವೀಕರಿಸುತ್ತಾರೆ" ಎಂದಿದ್ದಾರೆ.
ಹಾಗೆಯೇ ಅನೇಕರು "ಒಪ್ಪುತ್ತೇನೆ.. ನನ್ನ ಅನುಭವದಲ್ಲಿ, ಮುಂಬೈನ ಸಂಪೂರ್ಣ ಬ್ಲೂ ಕಾಲರ್ ವರ್ಗದವರು ಇತರ ನಗರಗಳಿಗಿಂತ ಹೆಚ್ಚು ಸೌಜನ್ಯದಿಂದ ಮತ್ತು ಕಷ್ಟಪಟ್ಟು ದುಡಿಯುವವರು" ಎಂದು ಬರೆದಿದ್ದಾರೆ.
ಈ ಪೋಸ್ಟ್ ಭಾರತದ ನಗರಗಳಲ್ಲಿ ಪ್ರಯಾಣಿಕರ ಅನುಭವಗಳು ಹೇಗೆ ಭಿನ್ನವಾಗಿರುತ್ತವೆ ಎಂಬುದರ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಬೆಂಗಳೂರು ಹೆಚ್ಚಾಗಿ ಆಪ್-ಆಧಾರಿತ ಸೇವೆ ಮತ್ತು ಅಸ್ಥಿರ ಆಟೋ ಲಭ್ಯತೆಗೆ ಹೆಸರುವಾಸಿಯಾಗಿದ್ದರೆ, ಮುಂಬೈ ತನ್ನ ಮೀಟರ್-ಆಧಾರಿತ ವ್ಯವಸ್ಥೆ ಮತ್ತು ಹೆಚ್ಚು ಏಕರೂಪದ ಸೇವಾ ಸಂಸ್ಕೃತಿಗೆ ಹೆಸರುವಾಸಿಯಾಗಿದೆ.
ಕೊನೆಯಲ್ಲಿ, ಪ್ರತಿ ನಗರಕ್ಕೂ ತನ್ನದೇ ಆದ ಅನುಕೂಲ-ಅನಾನುಕೂಲಗಳಿವೆ ಎಂದು ಮಯಾಂಕ್ ಹೇಳಿದ್ದಾರೆ. ಬೆಂಗಳೂರಿನ ಆಹ್ಲಾದಕರ ವಾತಾವರಣ ಮತ್ತು ಮುಂಬೈನ ಆರ್ದ್ರತೆಯ ಬಗ್ಗೆ ಉಲ್ಲೇಖಿಸಿದ ಅವರು, ಮುಂಬೈನ ಸಾರಿಗೆ ವ್ಯವಸ್ಥೆಯಲ್ಲಿ ತಾನು ಕಂಡ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.