ಅದೃಷ್ಟ ಅಂದ್ರೆ ಇದು! ಕೇವಲ ₹13,000 ಖರ್ಚು ಮಾಡಿ ದುಬೈನಲ್ಲಿ ಐಷಾರಾಮಿ ಮನೆ ಗೆದ್ದ ಕೇರಳದ ಮಹಿಳೆ

Published : Jun 27, 2026, 01:13 PM IST
Dubai lucky draw winner

ಸಾರಾಂಶ

Kerala woman wins house in Dubai: ದುಬೈನಲ್ಲಿ ನೆಲೆಸಿರುವ ಕೇರಳ ಮೂಲದ ಮಹಿಳೆಯೊಬ್ಬರಿಗೆ ಒಂದು ಫೋನ್ ಕರೆ ಬಂದಾಗ, ಅದು ಯಾವುದೋ ವಂಚಕರ ಸ್ಕ್ಯಾಮ್ ಕಾಲ್ ಎಂದು ಭಾವಿಸಿ ಕಟ್ ಮಾಡಿದ್ದರು. ಆದರೆ ಅದೇ ಕರೆ ಅವರ ಜೀವನದ ಅತಿದೊಡ್ಡ ಲಾಟರಿಯಾಗಿತ್ತು! ಕೇವಲ 13 ಸಾವಿರ ರೂಪಾಯಿಯ ಶಾಪಿಂಗ್ ಮಾಡಿ ದುಬೈನಂತಹ ನಗರದಲ್ಲಿ ಉಚಿತವಾಗಿ ಐಷಾರಾಮಿ ಮನೆ ಗೆದ್ದ ಈ ಅದೃಷ್ಟವಂತೆಯ ರೋಚಕ ಕಥೆ ಇಲ್ಲಿದೆ. 

ದೃಷ್ಟ ಯಾವಾಗ, ಯಾರಿಗೆ, ಯಾವ ರೂಪದಲ್ಲಿ ಒಲಿಯುತ್ತದೆ ಎಂದು ಊಹಿಸುವುದು ಅಸಾಧ್ಯ. ದುಬೈನಲ್ಲಿ ನೆಲೆಸಿರುವ ಕೇರಳ ಮೂಲದ ಮಹಿಳೆಯೊಬ್ಬರ ಜೀವನದಲ್ಲಿ ನಡೆದ ಘಟನೆ ಇದಕ್ಕೆ ಕಣ್ಮುಂದಿರುವ ಉದಾಹರಣೆ. ಕೇವಲ ಒಂದು ಸಾಧಾರಣ ಶಾಪಿಂಗ್ ಟ್ರಿಪ್ ಅವಳಿಗೆ ದುಬೈನಂತಹ ಅತ್ಯಂತ ದುಬಾರಿ ನಗರದಲ್ಲಿ ಸ್ವಂತ ಮನೆಯ ಕನಸನ್ನು ಉಚಿತವಾಗಿ ನನಸು ಮಾಡಿದೆ ಎಂದರೆ ನೀವು ನಂಬಲೇಬೇಕು!

ಯಾರು ಈ ಅದೃಷ್ಟವಂತೆ?

ದುಬೈನಲ್ಲಿ ಬಿಜಿನೆಸ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ 27 ವರ್ಷದ ಆಯೇಷಾ ಅಮೀರ್ ಎಂಬುವವರೇ ಈ ಅದೃಷ್ಟವಂತೆ. ದುಬೈ ಸರ್ಕಾರವು ನಡೆಸಿದ ವಿಶೇಷ ಶಾಪಿಂಗ್ ಲಕ್ಕಿ ಡ್ರಾದಲ್ಲಿ ಭಾಗವಹಿಸಿದ್ದ ಆಯೇಷಾ, ಈಗ ಅಲ್ಲಿ ಒಂದು ಐಷಾರಾಮಿ ಸ್ಟುಡಿಯೋ ಅಪಾರ್ಟ್‌ಮೆಂಟ್ (ಒಂದೇ ದೊಡ್ಡ ಕೋಣೆಯನ್ನು ಹೊಂದಿರುವ ಸಣ್ಣ ಮನೆ) ಅನ್ನು ಉಚಿತವಾಗಿ ಗೆದ್ದಿದ್ದಾರೆ. ಮೊದಲು ತನಗೆ ಮನೆ ಲಾಟರಿ ಹೊಡೆದಿದೆ ಎಂಬ ಕರೆ ಬಂದಾಗ ಅದು ಯಾವುದೋ ಸೈಬರ್ ವಂಚಕರ (Scam Call) ಕರೆ ಎಂದು ಆಯೇಷಾ ಭಾವಿಸಿದ್ದರು. ಆದರೆ ಸತ್ಯ ತಿಳಿದಾಗ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ.

ಏನಿದು 'ವಿನ್ ಯುವರ್ ಹೋಮ್' ಸ್ಪರ್ಧೆ?

ದುಬೈ ಫೆಸ್ಟಿವಲ್ಸ್ ಆಂಡ್ ರಿಟೇಲ್ ಎಸ್ಟಾಬ್ಲಿಷ್‌ಮೆಂಟ್ (DFRE) ಮತ್ತು ದುಬೈ ಚೇಂಬರ್ಸ್ ಜಂಟಿಯಾಗಿ 'ವಿನ್ ಯುವರ್ ಹೋಮ್ ಇನ್ ದುಬೈ' (Win Your Home in Dubai) ಎಂಬ ಅಭಿಯಾನವನ್ನು ಆರಂಭಿಸಿದ್ದವು. ಇದರ ನಿಯಮದಂತೆ, ಈ ಅಭಿಯಾನದಲ್ಲಿ ಭಾಗವಹಿಸಿರುವ ಮಳಿಗೆಗಳಲ್ಲಿ ಕನಿಷ್ಠ 500 ದಿರ್ಹಾಮ್‌ಗಳ (ಸುಮಾರು 13,000 ರೂಪಾಯಿ) ಶಾಪಿಂಗ್ ಮಾಡಿದರೆ ಸಾಕು. ಶಾಪಿಂಗ್ ಮಾಡಿದ ನಂತರ ಅಲ್ಲಿನ QR ಕೋಡ್ ಸ್ಕ್ಯಾನ್ ಮಾಡಿ ಬಿಲ್ ಅಪ್‌ಲೋಡ್ ಮಾಡಿದರೆ ಲಕ್ಕಿ ಡ್ರಾಗೆ ಅರ್ಹತೆ ಸಿಗುತ್ತದೆ. ಪ್ರಸಿದ್ಧ ಪ್ರಾಪರ್ಟಿ ಡೆವಲಪರ್ 'ಬಿಂಗಟ್ಟಿ' (Binghatti) ಈ ಅಭಿಯಾನದ ಭಾಗವಾಗಿ ಉಚಿತ ಅಪಾರ್ಟ್‌ಮೆಂಟ್ ನೀಡಲು ಮುಂದಾಗಿತ್ತು.

ಮೊದಲ ವಿಜೇತೆಯಾಗಿ ಆಯೇಷಾ ಆಯ್ಕೆ

ಆಯೇಷಾ ತನ್ನ ಪತಿಯೊಂದಿಗೆ ಮಾಲ್‌ಗೆ ಹೋದಾಗ ಈ ಸ್ಪರ್ಧೆಯ ಬಗ್ಗೆ ತಿಳಿದುಬಂದಿತ್ತು. ಪತಿಯ ಪ್ರೋತ್ಸಾಹದ ಮೇರೆಗೆ ಕೇವಲ 500 ದಿರ್ಹಾಮ್‌ಗಳ ಶಾಪಿಂಗ್ ಮಾಡಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅದೃಷ್ಟವಶಾತ್, ಸಾವಿರಾರು ಮಂದಿ ಭಾಗವಹಿಸಿದ್ದ ಈ ಬೃಹತ್ ಸ್ಪರ್ಧೆಯಲ್ಲಿ ಮೊದಲ ವಾರದ ವಿಜೇತೆಯಾಗಿ ಆಯೇಷಾ ಆಯ್ಕೆಯಾದರು. ಆಕೆಗೆ ದುಬೈನಲ್ಲಿ ಒಂದು ಸುಂದರವಾದ ಸ್ಟುಡಿಯೋ ಅಪಾರ್ಟ್‌ಮೆಂಟ್ ಉಡುಗೊರೆಯಾಗಿ ಸಿಕ್ಕಿದೆ.

ಸ್ಕ್ಯಾಮ್ ಎಂದುಕೊಂಡು ಕರೆ ಕಟ್ ಮಾಡಿದ್ದರು!

ಇತ್ತೀಚಿನ ದಿನಗಳಲ್ಲಿ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ, ಮೊದಲು ಆಯೇಷಾ ಅವರಿಗೆ ವಿಜೇತರಾದ ಕರೆ ಬಂದಾಗ ಅವರು ಅದನ್ನು ನಂಬಲಿಲ್ಲ. ಯಾರೋ ಕಿಡಿಗೇಡಿಗಳು ತನ್ನನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಅಧಿಕೃತ ದಾಖಲೆಗಳೊಂದಿಗೆ ಕನ್ಫರ್ಮ್ ಇಮೇಲ್ ಬಂದಾಗ ಮಾತ್ರ ಆಕೆಗೆ ನಿಜವಾದ ಸತ್ಯ ಮನವರಿಕೆಯಾಯಿತು.

ಸರಿಯಾದ ಸಮಯದಲ್ಲಿ ಸಿಕ್ಕ ದೇವರ ವರ

ಆಯೇಷಾ ಮತ್ತು ಅವರ ಪತಿ ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ಸ್ವಂತ ಮನೆ ಖರೀದಿಸಬೇಕು ಎಂದುಕೊಂಡಿದ್ದರು. ಆದರೆ ಕೆಲವು ಆರ್ಥಿಕ ಕಾರಣಗಳಿಂದಾಗಿ ಆ ಪ್ಲಾನ್ ಅನ್ನು ಮುಂದೂಡಿದ್ದರು. "ನಾವು ಮನೆ ಖರೀದಿಸುವ ಆಸೆಯನ್ನು ಕೈಬಿಟ್ಟಿದ್ದ ಸಮಯದಲ್ಲಿಯೇ ದೇವರು ನಮಗೆ ಈ ಉಚಿತ ಮನೆಯನ್ನು ವರವಾಗಿ ನೀಡಿದ್ದಾನೆ. ದುಬೈ ನಗರವು ನಮ್ಮ ಜೀವನಕ್ಕೆ ಮರೆಯಲಾಗದ ಕೊಡುಗೆ ನೀಡಿದೆ," ಎಂದು ದಂಪತಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

PREV
Read more Articles on
click me!

Recommended Stories

Viral: ತಬ್ಬಿದ್ದು, ಕಿಸ್ ಕೊಟ್ಟಿದ್ದು ಲೇಡಿ ಪೊಲೀಸ್, ಅಮಾನತ್ತಾಗಿದ್ದು ಪೊಲೀಸಪ್ಪ! 'ಇದ್ಯಾವ ನ್ಯಾಯ ಸ್ವಾಮಿ' ಎಂದ ನೆಟಿಜೆನ್!
Prabhas Bahubali: 'ಬಾಹುಬಲಿ' ಸೂಪರ್ ಹಿಟ್ ಹಿಟ್‌ ಆದ್ಮೇಲೆ ನಟ ಪ್ರಭಾಸ್ 2-3 ವರ್ಷ ನಿದ್ದೆ ಮಾಡಲಾಗದೇ ಒದ್ದಾಡಿದ್ದು ಏಕೆ?