ವಿಜ್ಞಾನ, ಜಗತ್ತು ಎಷ್ಟೇ ಮುಂದುವರೆದಿದ್ದರೂ ಹೆಣ್ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ ಬಹುತೇಕ ಎಲ್ಲರೂ ಮೌನವಹಿಸುತ್ತಾರೆ. ಕಾರಣವಿಷ್ಟೇ ದಿನ ಬೆಳಗಾದರೆ ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ಹಣ್ಣು ಹಣ್ಣು ಮುದುಕಿಯರೂ ಅತ್ಯಾ*ಚಾರಕ್ಕೆ ಒಳಗಾಗಿರುವ ಸುದ್ದಿಯನ್ನ ಓದುತ್ತಲೇ ಇರುತ್ತೇವೆ, ಕೇಳುತ್ತಲೇ ಇರುತ್ತವೆ. ಇದನ್ನೆಲ್ಲಾ ಕಣ್ಣಾರೆ ನೋಡಿದ ಮೇಲೆ ಯಾವ ಪೋಷಕರು ತಾನೇ ಹೆಣ್ಮಕ್ಕಳನ್ನ ಆಚೆ ಕಳುಹಿಸುವ ಧೈರ್ಯ ಮಾಡ್ತಾರೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಭಯಾ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣ ವರದಿಯಾದಾಗ ದೇಶಕ್ಕೇ ದೇಶವೇ ಒಂದು ಕ್ಷಣ ದಿಗ್ಭ್ರಮೆಗೊಂಡಿತ್ತು.
ನಿರ್ಭಯಾ ಪ್ರಕರಣ ಮೊದಲೂ, ನಂತರವೂ ನಿರಂತರ ಅತ್ಯಾ*ಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಹಾಗಾಗಿಯೇ ಹೆಣ್ಮಕ್ಕಳನ್ನ ವಿಶೇಷವಾಗಿ ರಾತ್ರಿ ಸಮಯದಲ್ಲಿ ಆಚೆ ಕಳುಹಿಸಲು ಹೆದರುತ್ತಾರೆ. ಕೆಲವು ರಾಜ್ಯಗಳಲ್ಲಿ ರಾತ್ರಿ ಇರಲಿ, ಹಗಲು ಸಹ ಸೇಫ್ ಅಲ್ಲ ಎನ್ನಲಾಗುತ್ತದೆ. ಈ ವಿಚಾರದಲ್ಲಿ 'ನಮ್ಮ ಬೆಂಗಳೂರು' ಗ್ರೇಟ್ ಅಂತಾನೇ ಹೇಳಬಹುದು. ಹಾಗೆ ಹೇಳುತ್ತಿರುವುದು ಬೇರಾರೂ ಅಲ್ಲ, ಸ್ವತಃ ಬೆಂಗಳೂರಿನಲ್ಲಿ ರಾತ್ರಿ ಓಡಾಡುವ ಮಂದಿ. ಹೌದು. ಸದ್ಯ ಇನ್‌ಸ್ಟಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದರೆ ಇಂತಹ ಜನರು ನಮ್ಮ ನಡುವೆ ಇದ್ದಾರಾ ಅನ್ನೋ ಪ್ರಶ್ನೆ ಮೂಡುತ್ತದೆ.
ಇದು ಮನೆಯವರನ್ನೇ ನಂಬಲಿಕ್ಕೆ ಸಾಧ್ಯವಾಗದಂತಹ ಕಾಲ. ಏಕೆಂದರೆ ಸ್ವಂತ ತಂದೆಯೇ ಮಗಳ ಮೇಲೆ, ಅಣ್ಣನೇ ತಂಗಿಯ ಮೇಲೆ ಅತ್ಯಾ*ಚಾರ ಎಸಗುವುದನ್ನ ನಾವು ನೋಡಿದ್ದೇವೆ. ಅಂತಹುದರಲ್ಲಿ ಓರ್ವ ಆಟೋ ಚಾಲಕ ತನ್ನ ಆಟೋ ಒಳಗಡೆ "ನಾನೂ ಒಬ್ಬ ತಂದೆ, ಅಣ್ಣ ನಿಮ್ಮ ಸುರಕ್ಷತೆ ನನಗೆ ಮುಖ್ಯ. ಆರಾಮಾಗಿ ಕುಳಿತುಕೊಳ್ಳಿ" ಎಂದು ಬರೆದು ಅಂಟಿಸಿದ್ದಾರೆ. ಇದನ್ನ ಓರ್ವ ಮಹಿಳೆ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದು, ವಿಡಿಯೋ ನೋಡಿದ ನಂತರ ಪ್ರತಿಯೊಬ್ಬರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋ ನೋಡುವಾಗ ಓರ್ವ ಚಾಲಕ ಆಟೋ ಚಲಾಯಿಸುತ್ತಿದ್ದಾನೆ. ಆಟೋ ಒಳಗಡೆ ಬರೆದಿರುವುದನ್ನ ನೋಡುತ್ತಾ ಮಹಿಳೆ "ನಾನು ರಾಪಿಡೋ ಆಟೋ(Rapido Auto)ದಲ್ಲಿ ಪ್ರಯಾಣಿಸುತ್ತಿದ್ದೆ. ಬೆಂಗಳೂರಿನಲ್ಲಿ ರಾತ್ರಿ 12 ಗಂಟೆಯಾಗಿತ್ತು. ಆಗ ನಾನು ಇದನ್ನ ಓದಿದೆ. ನಿಜಕ್ಕೂ ನನಗೆ ಸುರಕ್ಷತಾ ಮನೋಭಾವ ಮೂಡಿತು. ಆರಾಮಾಗಿ ಓಡಾಡಬಹುದು ಅನಿಸಿತು" ಎಂದು ತಿಳಿಸಿದ್ದಾರೆ. ಸದ್ಯ ಚಾಲಕರ ಪೂರ್ಣ ಮಾಹಿತಿ ತಿಳಿದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಕೆಂಪು ಹೃದಯ, ಫೈಯರ್ ಇಮೋಜಿ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಕೆಲವರು ಇಂತಹ ವಿಡಿಯೋಗಳೇಕೆ ವೈರಲ್ ಆಗಲ್ಲ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವು ಕರ್ನಾಟಕ ಮಂದಿಯನ್ನ ಹೊಗಳುತ್ತಿದ್ದಾರೆ. ಅಂದಹಾಗೆ ಜನರು ಮಾಡಿರುವ ಕಾಮೆಂಟ್ಸ್ ಇಲ್ಲಿದೆ ನೋಡಿ..
*"ಈ ಪೋಸ್ಟರ್ ನೋಡಿದ ಮೇಲೆ ಒಂದಂತೂ ಕನ್‌ಫರ್ಮ್ ಆಯ್ತು. ನೀವು ತಂದೆ, ಅಣ್ಣನ ಸ್ಥಾನದಲ್ಲಿ ನಿಂತು ಹೆಣ್ಮಕ್ಕಳು ಓಡಾಡಲು ಸೇಫ್ ಎಂಬುದನ್ನ ಸಾಬೀತುಪಡಿಸಿದ್ದೀರಿ".
*"ನಾನು ಇಪ್ಪತ್ತು ವರ್ಷದಿಂದ ಈ ಸಿಟಿಯನ್ನ ನೋಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಸುರಕ್ಷಿತವಾದ ಸ್ಥಳ".
*"ಮೆಚ್ಚಿದೆ ಕಣಯ್ಯಾ".
*"ನಮ್ಮ ಬೆಂಗಳೂರು".
*"ಇದನ್ನೇ ನಾವು ಬಯಸಿದ್ದು, ಮಾಡಬೇಕಾಗಿದ್ದು".
*"ನಿಜಕ್ಕೂ ಗ್ರೇಟ್"
*"ಇಂತಹ ಜನರು ಇನ್ನೂ ಬೇಕು".
*"ಕನ್ನಡ ಕಲಿತರೆ ನೀವಿನ್ನೂ ಸೇಫ್"
*"ಇವರೇ ನೋಡಿ ನಮ್ಮ ನಿಜವಾದ ಬೆಂಗಳೂರು ಆಟೋ ಚಾಲಕರು. ಸಾಕಷ್ಟು ಜವಬ್ದಾರಿಯನ್ನ ಹೊಂದಿರುವವರು".
*"ನೋಡಿ ಮೇಡಂ, ನಿಜಕ್ಕೂ ಬೆಂಗಳೂರಿನಲ್ಲಿ ಜನ ಹೀಗೆ ಇರ್ತಾರೆ. ನಿಮಗೆ ಅಣ್ಣ, ತಮ್ಮನ ಹಾಗೆ ಫೀಲ್ ಆಗುತ್ತದೆ". ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನ ನಾವಿಲ್ಲಿ ನೋಡಬಹುದು.