
ಸಾಮಾನ್ಯವಾಗಿ ಗೂಗಲ್‌ನಂತಹ ಜಾಗತಿಕ ಟೆಕ್ ದೈತ್ಯ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಸಿಗುವುದು ಲಕ್ಷಾಂತರ ಜನರ ಕನಸು. ಒಮ್ಮೆ ಅಂತಹ ಕೆಲಸ ಸಿಕ್ಕರೆ ಸಾಕು, ಜೀವನ ಸೆಟ್ ಆಯ್ತು ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, 23 ವರ್ಷದ ಭಾರತೀಯ ಮೂಲದ ಯುವತಿ ಆಶ್ನಾ ದೋಶಿ ಮಾತ್ರ ಈ ಆರಾಮದಾಯಕ ಜೀವನಕ್ಕೆ ಗುಡ್‌ಬೈ ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅಷ್ಟಕ್ಕೂ ಆಶ್ನಾ ಇಂತಹ ನಿರ್ಧಾರ ತಗೆದುಕೊಂಡಿದ್ದು ಏಕೆ? ಅವರ ಮುಂದಿನ ಪ್ಲಾನ್ ಏನು? ಇಲ್ಲಿದೆ ಸಂಪೂರ್ಣ ವಿವರ.
ಜಾರ್ಜಿಯಾ ಟೆಕ್‌ನಲ್ಲಿ ಪದವಿ ಮುಗಿಸಿದ ಆಶ್ನಾ ದೋಶಿ, ಫೆಬ್ರವರಿ 2024ರಲ್ಲಿ ಗೂಗಲ್ ಸೇರಿದ್ದರು. ನ್ಯೂಯಾರ್ಕ್ ನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು, ಅಲ್ಲಿನ ವೈವಿಧ್ಯಮಯ ವಾತಾವರಣವನ್ನು ಇಷ್ಟಪಟ್ಟಿದ್ದರು. ಆದರೆ, ಕೆಲಸ ಮಾಡುತ್ತಾ ಹೋದಂತೆ ಅವರಿಗೆ ಒಂದು ಅರಿವಾಯಿತು. 'ಬೃಹತ್ ಟೆಕ್ ಕಂಪನಿಯಲ್ಲಿ ನಾನು ಒಂದು ದೊಡ್ಡ ಯಂತ್ರದ ಅತ್ಯಂತ ಸಣ್ಣ ಭಾಗವಾಗಿದ್ದೆ. ನನ್ನ ಕೆಲಸದ ನೇರ ಪ್ರಭಾವ ಅಥವಾ ಇಂಪ್ಯಾಕ್ಟ್ ಏನು ಎಂಬುದು ತಿಳಿಯುತ್ತಿರಲಿಲ್ಲ' ಎಂದು ಆಶ್ನಾ ಹೇಳುತ್ತಾರೆ. ಅವರಿಗೆ ಕೋಡಿಂಗ್ ಹೊರತಾದ ಸೃಜನಶೀಲ ಹಾದಿಯಲ್ಲಿ ನಡೆಯುವ ತುಡಿತವಿತ್ತು.
ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವಾಗಲೇ ಆಶ್ನಾ ಅವರು ತಮ್ಮ ಸಹೋದ್ಯೋಗಿಯೊಂದಿಗೆ ಸೇರಿ '0 ಟು 1' (0 to 1) ಎಂಬ ಪಾಡ್‌ಕ್ಯಾಸ್ಟ್ ಆರಂಭಿಸಿದರು. ಈ ಪಾಡ್‌ಕ್ಯಾಸ್ಟ್ ಮೂಲಕ ಅಮೆಜಾನ್, ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪನಿಗಳ ಮುಖ್ಯಸ್ಥರು, ಸ್ಟಾರ್ಟಪ್ ಸಂಸ್ಥಾಪಕರು ಮತ್ತು ಕ್ರಿಯೇಟರ್‌ಗಳನ್ನು ಸಂದರ್ಶಿಸಿದರು. ಕೇವಲ ಒಂದು ವರ್ಷದಲ್ಲಿ ಇವರ ಪಾಡ್‌ಕ್ಯಾಸ್ಟ್ ಯೂಟ್ಯೂಬ್‌ನಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆಯಿತು. ಇದು ಅವರಲ್ಲಿ ಉದ್ಯಮಿಯಾಗುವ ಆತ್ಮವಿಶ್ವಾಸವನ್ನು ತುಂಬಿತು.
ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವ ಆಶ್ನಾ, 'ಹಣಕಾಸಿನ ಭದ್ರತೆ (Financial Security) ಎಂಬುದು ಆರಾಮದಾಯಕವಾಗಿರುತ್ತದೆ ನಿಜ, ಆದರೆ ಅದೊಂದು ರೀತಿಯ ಬಲೆ (Trap). ಅಲ್ಲಿಯೇ ಉಳಿದುಕೊಂಡರೆ ಜೀವನ ಪೂರ್ತಿ ನಮಗೆ ಬೇಕಾದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಗೂಗಲ್ ಬಿಡುವುದು ನನಗೆ ರಿಸ್ಕ್ ಅನಿಸಲಿಲ್ಲ. ಬದಲಾಗಿ ಅಲ್ಲಿಯೇ ಉಳಿದು ಮುಂದೆಂದೋ ಒಂದು ದಿನ 'ನಾನು ಆ ಕೆಲಸ ಮಾಡಿದ್ದರೆ ಏನಾಗುತ್ತಿತ್ತು?' ಎಂದು ಕೊರಗುತ್ತಾ ಕುಳಿತುಕೊಳ್ಳುವುದು ನನಗೆ ಹೆಚ್ಚು ಭಯಾನಕವೆಂದು ಅನಿಸಿತು' ಎನ್ನುತ್ತಾರೆ.
ಮೇ ತಿಂಗಳಲ್ಲಿ ಗೂಗಲ್ ಕೆಲಸಕ್ಕೆ ಅಧಿಕೃತವಾಗಿ ರಾಜಿನಾಮೆ ನೀಡಿದ ಆಶ್ನಾ, ಈಗ 'ಬೌಂಟಿ' (Bounty) ಎಂಬ ಎಐ ಆಧಾರಿತ ಸ್ಟಾರ್ಟಪ್ ಮೇಲೆ ಗಮನ ಹರಿಸಿದ್ದಾರೆ. ಇದು ಕಂಪನಿಗಳು ತಮ್ಮ ಕೆಲಸಗಳನ್ನು ಮಾಡಿಕೊಡಲು ಟಾಸ್ಕ್‌ಗಳನ್ನು ನೀಡುವ ಮತ್ತು ಫಲಿತಾಂಶ ಬಂದ ನಂತರವಷ್ಟೇ ಹಣ ಪಾವತಿಸುವ ವಿಭಿನ್ನ ವೇದಿಕೆಯಾಗಿದೆ. ಸದ್ಯಕ್ಕೆ ಗೂಗಲ್‌ನಲ್ಲಿ ಪಡೆಯುತ್ತಿದ್ದ ಸಂಬಳದ ಒಂದು ಸಣ್ಣ ಭಾಗವನ್ನೂ ಇವರು ಗಳಿಸುತ್ತಿಲ್ಲ. ಆದರೂ, ಏನಾದರೂ ದೊಡ್ಡದನ್ನು ಸಾಧಿಸುವ ಹಂಬಲ ಇವರನ್ನು ಮುನ್ನಡೆಸುತ್ತಿದೆ. ಈಗಿರುವ ವ್ಯವಸ್ಥೆಯನ್ನು ಬಿಟ್ಟು ಹೊಸ ಸಾಹಸಕ್ಕೆ ಕೈಹಾಕಿರುವ 23ರ ಹರೆಯದ ಈ ಯುವತಿಯ ಧೈರ್ಯ ಈಗ ಟೆಕ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.