
1990ರಲ್ಲಿ ಬಂದ 'ಆಶಿಕಿ' ಚಿತ್ರದಿಂದ ರಾತ್ರೋರಾತ್ರಿ ಸ್ಟಾರ್ ಆದ ನಟ ರಾಹುಲ್ ರಾಯ್ ಅವರದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡ್ತಿದೆ. ಮುಂಬೈನ ಬೀದಿಗಳಲ್ಲಿ ದೊಡ್ಡ ಬ್ಯಾಗೊಂದನ್ನು ಎಳೆದುಕೊಂಡು ಹೋಗುತ್ತಿರುವ ಈ ವಿಡಿಯೋದಲ್ಲಿ, ರಾಹುಲ್ ಉದ್ದ ಕೂದಲು ಬಿಟ್ಟು, ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿದ ಅನೇಕರಿಗೆ ಅಚ್ಚರಿಯಾಗಿದೆ.
1990ರಲ್ಲಿ ತೆರೆಕಂಡ 'ಆಶಿಕಿ' ಚಿತ್ರದಲ್ಲಿ ರಾಹುಲ್ ರಾಯ್ ನಿರ್ವಹಿಸಿದ್ದ ಪಾತ್ರ ಅವರಿಗೆ 'ಆಶಿಕಿ ಬಾಯ್' ಎಂಬ ಹೆಸರನ್ನೇ ತಂದುಕೊಟ್ಟಿತ್ತು. ಮಹೇಶ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅನು ಅಗರ್ವಾಲ್, ಅನಂಗ್ ದೇಸಾಯಿ, ಸುನೀಲ್ ರೆಗೆ ಮತ್ತು ರೀಮಾ ಲಾಗೂ ಪ್ರಮುಖ ಪಾತ್ರಗಳಲ್ಲಿದ್ದರು. ಇದೀಗ ಮುಂಬೈನಲ್ಲಿ ಕಾಣಿಸಿಕೊಂಡ ರಾಹುಲ್ ರಾಯ್ ಬಗ್ಗೆ ಜನ ಏನಂತಿದ್ದಾರೆ ಅನ್ನೋದನ್ನ ಮುಂದೆ ಓದಿ.
ವೈರಲ್ ಆಗಿರುವ ವಿಡಿಯೋದಲ್ಲಿ ರಾಹುಲ್, ಕ್ರೀಮ್ ಬಣ್ಣದ ಟೀ-ಶರ್ಟ್ ಮತ್ತು ನೀಲಿ ಡೆನಿಮ್ ಪ್ಯಾಂಟ್ ಧರಿಸಿದ್ದಾರೆ. ಉದ್ದ ಕೂದಲು ಬಿಟ್ಟಿರುವ ಅವರು, ಒಂದು ದೊಡ್ಡ ಬ್ಯಾಗ್ ಮತ್ತು ಬೆನ್ನಿಗೆ ಒಂದು ರಕ್‌ಸ್ಯಾಕ್ ಹಾಕಿಕೊಂಡು ಮುಂಬೈ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಸಾಮಾನ್ಯ ವ್ಯಕ್ತಿಯಂತೆ ಅವರು ನಡೆದು ಹೋಗುತ್ತಿರುವುದನ್ನು ನೋಡಿದ ಹಲವರು ನಿಂತು ವಿಡಿಯೋ ಮಾಡಿದ್ದಾರೆ.
ರಾಹುಲ್ ರಾಯ್ ಅವರ ಈ ವಿಡಿಯೋ ವೈರಲ್ ಆಗ್ತಿದ್ದಂತೆ, ಸೋಷಿಯಲ್ ಮೀಡಿಯಾ ಬಳಕೆದಾರರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು, 'ಅವರಿಗೆ ಬ್ಯಾಗ್ ಹೊತ್ತುಕೊಂಡು ಹೋಗಲು ಯಾರೂ ಸಹಾಯ ಮಾಡುತ್ತಿಲ್ಲ' ಎಂದು ವಿಡಿಯೋ ಮಾಡಿದವರನ್ನು ಟೀಕಿಸಿದ್ದಾರೆ. 'ಅವರೊಬ್ಬ ಸೆಲೆಬ್ರಿಟಿ, ದಯವಿಟ್ಟು ಅವರಿಗೆ ಗೌರವ ಕೊಡಿ' ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ನಟನ ಅಭಿನಯವನ್ನು ಹೊಗಳಿದ್ದಾರೆ. 'ಅವರೊಬ್ಬ ಅತ್ಯುತ್ತಮ ನಟ' ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ರಾಹುಲ್ ರಾಯ್ ಕೊನೆಯದಾಗಿ ಕಾನು ಬೆಹ್ಲ್ ನಿರ್ದೇಶನದ 'ಆಗ್ರಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮೋಹಿತ್ ಅಗರ್ವಾಲ್, ಪ್ರಿಯಾಂಕಾ ಬೋಸ್, ವಿಭಾ ಚಿಬ್ಬರ್ ಮತ್ತು ಆಂಚಲ್ ಗೋಸ್ವಾಮಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ