ರಸ್ತೆ ಬದಿ ಪಕೋಡಾವಾಲಾನ ಆದಾಯ ಕೇಳಿ ತಲೆ ಸುತ್ತಿ ಬಿದ್ದ ಟೆಕ್ಕಿ! ವರ್ಷಕ್ಕೆ ಈತ ದುಡೀತಿರೋದು ಎಷ್ಟು ಗೊತ್ತಾ

Published : Aug 06, 2026, 01:25 PM IST
Bread Pakoda

ಸಾರಾಂಶ

ಬೀದಿ ಬದಿಯಲ್ಲಿ ಬ್ರೆಡ್ ಪಕೋಡಾ ಮತ್ತು ಗುಲಾಬ್ ಜಾಮೂನ್ ಮಾರಾಟ ಮಾಡುವ ವ್ಯಾಪಾರಿಯೊಬ್ಬರು ವರ್ಷಕ್ಕೆ 30 ಲಕ್ಷಕ್ಕೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಕಥೆಯು, ಸಣ್ಣ ವ್ಯಾಪಾರಗಳ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದ ಫಲವನ್ನು ತೋರಿಸುತ್ತದೆ, ಇದು ಅನೇಕ ಕಾರ್ಪೊರೇಟ್ ಉದ್ಯೋಗಿಗಳಿಗಿಂತ ಹೆಚ್ಚಿನ ಗಳಿಕೆಯಾಗಿದೆ.

ಚಾಯ್​ವಾಲಾ, ಪಕೋಡಾವಾಲಾ... ಹೀಗೆ ಹೇಳಿದಾಕ್ಷಣ ಟೀಕೆ ಮಾಡುವವರೇ ಹೆಚ್ಚು. ಅದರಲ್ಲಿಯೂ ಸೋಷಿಯಲ್​ ಮೀಡಿಯಾದಲ್ಲಿ ಬೇರೆಯವರಿಗೆ ಟೀಕೆ ಮಾಡುವುದೇ ಇವರ ಕಾಯಕ. ಇತರರನ್ನು ಟೀಕಿಸುವ ಮೂಲಕ ವಿಕೃತ ಸಂತೋಷ ಪಡುವವರು ಕೆಲವರಿದ್ದಾರೆ. ತಮ್ಮ ಬಳಿ ಮಾಡಲು ಸರಿಯಾದ ಕೆಲಸ ಇಲ್ಲದಿದ್ದರೂ, ಬೇರೆಯವರನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿರುವವರು ಇದ್ದಾರೆ. ಅದೇ ಇನ್ನೊಂದು ವರ್ಗ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದರೂ ಹೊಟ್ಟೆ ತುಂಬುವಷ್ಟು ಸಂಪಾದನೆ ಮಾಡುವುದೇ ಕಷ್ಟ ಎನ್ನುವ ಸ್ಥಿತಿ ಇದೆ. ತಮ್ಮ ಶಿಕ್ಷಣಕ್ಕೆ ತಕ್ಕಂಥ ಉದ್ಯೋಗ ಇಲ್ಲ ಎಂದು ಎಲ್ಲಿಯೂ ಹೋಗದೇ, ಸರ್ಟಿಫಿಕೇಟ್​ ಹಿಡಿದು ಕೊನೆಗೆ ಸರ್ಕಾರಕ್ಕೆ ಶಾಪ ಹಾಕುವ ಎಜುಕೇಟೆಡ್​ ಮಂದಿ ಎಷ್ಟಿಲ್ಲ ಹೇಳಿ?

ಇಂಥವರ ನಡುವೆ, ಬೀದಿಬದಿಯ ವ್ಯಾಪಾರಿಗಳೇ ಇಂದಿಗೆ ಗ್ರೇಟ್​ ಆಗುತ್ತಿದ್ದಾರೆ. ಇದಾಗಲೇ ಪಾನೀಪುರಿ ಮಾರಾಟ ಮಾಡುವ ಲಕ್ಷಾಧಿಪತಿಗಳ ಸ್ಟೋರಿಗಳು ಸಾಕಷ್ಟು ವೈರಲ್​ ಆಗಿವೆ. ಅಂಥದ್ದೇ ಒಂದು ಸ್ಟೋರಿ ಇದು. ಬೀದಿ ಬದಿಯಲ್ಲಿ ಬ್ರೆಡ್​ ಪಕೋಡಾ ಮತ್ತು ಗುಲಾಬ್ ಜಾಮೂನ್‌ಗಳನ್ನು ಮಾರಾಟ ಮಾಡಿ, ಎಲ್ಲಾ ಖರ್ಚು ಕಳೆದು 30 ಲಕ್ಷಕ್ಕೂ ಅಧಿಕ ಲಾಭ ಗಳಿಸ್ತಿರೋ ವ್ಯಾಪಾರಿಯ ಪಾಸಿಟಿವ್​ ಸ್ಟೋರಿ ಇದು. ಸೋಷಿಯಲ್​ ಮೀಡಿಯಾದಲ್ಲಿ ಓರ್ವ ಗ್ರಾಹಕ ಈ ವ್ಯಕ್ತಿಯ ವಿಡಿಯೋ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಹೀಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಬಹಳಷ್ಟು ಗಳಿಸ್ತಿರುವವರ ದೊಡ್ಡ ವರ್ಗವೇ ಇದೆ. ಅಂಥವರಲ್ಲಿ ಕೆಲವೊಂದು ಮಾತ್ರ ಯಾರೋ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದಾಗ ದೊಡ್ಡ ಮಟ್ಟಿನ ಸುದ್ದಿಯಾಗುತ್ತದೆ.

ಅಂಕಿತ್ ಪಾಂಡೆ ಎನ್ನುವವರು ಪಕೋಡಾವಾಲನ ಸ್ಟೋರಿ ಹಂಚಿಕೊಂಡಿದ್ದಾರೆ. "ಈ ರಸ್ತೆಬದಿಯ ಬ್ರೆಡ್ ಪಕೋಡಾ ಮಾರಾಟಗಾರ 10 ವರ್ಷಗಳ ಕಾರ್ಪೊರೇಟ್ ಅನುಭವ ಹೊಂದಿರುವ ಅನೇಕ ಜನರಿಗಿಂತ ಹೆಚ್ಚು ಸಂಪಾದಿಸುತ್ತಾನೆ ಎಂದು ಬರೆದುಕೊಂಡಿದ್ದಾರೆ ಅವರು. 'ನಾನು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ. ಬ್ರೆಡ್ ಪಕೋಡಾ ಎಂಬ ಸಣ್ಣ ಅಂಗಡಿಯನ್ನು ನೋಡಿದೆ. ಜನ ತುಂಬಾ ಇದ್ದರು. ಆದ್ದರಿಂದ ನಾನು ಕಾರು ಅಲ್ಲಿ ನಿಲ್ಲಿಸಿದೆ. ಅದರ ಹೆಸರು ಮನೋಜ್ ಬ್ರೆಡ್ ಪಕೋಡಾ ಎಂದಿತ್ತು. ಸಮೀಪ ಹೋದಾಗ ಐಷಾರಾಮಿ ಒಳಾಂಗಣಗಳಿಲ್ಲ, ಹವಾನಿಯಂತ್ರಣವಿಲ್ಲ, ದುಬಾರಿ ಬ್ರ್ಯಾಂಡಿಂಗ್ ಇರಲಿಲ್ಲ. ಇದರ ಹೊರತಾಗಿಯೂ, ರುಚಿಕರವಾದ ಆಹಾರ ಮತ್ತು ಗ್ರಾಹಕರ ನಿರಂತರ ಹರಿವು ನನ್ನ ಗಮನ ಸೆಳೆಯಿತು' ಎಂದು ಬರೆದಿದ್ದಾರೆ.

ದಿನಕ್ಕೆ 400 ಗ್ರಾಹಕರು

"ಭಯ್ಯಾ ಪ್ರತಿದಿನ ಎಷ್ಟು ಗ್ರಾಹಕರು ಬರುತ್ತಾರೆ ಎಂದು ಪ್ರಶ್ನಿಸಿದೆ. ಅದಕ್ಕೆ ಆತ ನಗುತ್ತಾ "ಸುಮಾರು 400- 500 ಎಂದರು. ಹೆಚ್ಚಿನ ಗ್ರಾಹಕರು ಬ್ರೆಡ್ ಪಕೋಡಾ ಮತ್ತು ಗುಲಾಬ್ ಜಾಮೂನ್‌ಗಳನ್ನು ಆರ್ಡರ್ ಮಾಡುತ್ತಾರೆ ಎಂದಾಗ, ನಾನು ಲೆಕ್ಕಾಚಾರ ಹಾಕಿದೆ. ಸ್ಟಾಲ್‌ನ ಸಂಭಾವ್ಯ ದೈನಂದಿನ ಮಾರಾಟವನ್ನು ಅಂದಾಜು ಮಾಡಿದೆ ಎಂದಿರುವ ಅಂಕಿತ್​, ಈಗ ಸರಳ ಲೆಕ್ಕಾಚಾರ ಮಾಡೋಣ ಎಂದು ಲೆಕ್ಕ ಹೇಳಿದ್ದಾರೆ. ಬ್ರೆಡ್ ಪಕೋಡಾ ಬೆಲೆ 15 ರೂಪಾಯಿ ಮತ್ತು ಗುಲಾಬ್ ಜಾಮೂನ್‌ಗಳ ಬೆಲೆ 15 ರೂಪಾಯಿ. ಇದರರ್ಥ ಪ್ರತಿ ಗ್ರಾಹಕರ ಸರಾಸರಿ ಬಿಲ್ 30 ರೂ. ಪ್ರತಿದಿನ ಸುಮಾರು 400 ಗ್ರಾಹಕರು ಬಂದರೆ, ಅಂಗಡಿಯ ದೈನಂದಿನ ಮಾರಾಟ, 400 x 30, ಸುಮಾರು 12 ಸಾವಿರ ಎಂದಿದ್ದಾರೆ.

ದೈನಂದಿನ ವೆಚ್ಚಗಳನ್ನು ಲೆಕ್ಕಹಾಕಿದ ನಂತರವೂ, ಅಂಗಡಿಯವನಿಗೆ ಗಣನೀಯ ಉಳಿತಾಯವಿದೆ. ಆದಾಯವನ್ನು ನಿಖರವಾಗಿ ಲೆಕ್ಕಾಚಾರ ಮಾಡುವ ಮೊದಲು ಕಚ್ಚಾ ವಸ್ತುಗಳು, ತೈಲ, ಅನಿಲ, ಬಾಡಿಗೆ ಮತ್ತು ಇತರ ದೈನಂದಿನ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅಂಕಿತ್ ವಿವರಿಸಿದ್ದಾರೆ. ಈ ವೆಚ್ಚಗಳನ್ನು ಲೆಕ್ಕಹಾಕಿದ ನಂತರವೂ, ಅಂಗಡಿಯವನು ತನ್ನ ಒಟ್ಟು ಆದಾಯದ ಸುಮಾರು 70 ಪ್ರತಿಶತವನ್ನು ಉಳಿತಾಯವಾಗಿಯೇ ಉಳಿದಿದೆ ಎಂದು ಹೇಳಿಕೊಳ್ಳುತ್ತಾನೆ. "ಇದನ್ನು ನೋಡಿದರೆ, ಆತ ಸುಮಾರು 8,400 ರೂಪಾಯಿಗಳನ್ನು ದಿನಕ್ಕೆ ಉಳಿತಾಯ ಮಾಡುತ್ತಾನೆ. ಅಂದರೆ ತಿಂಗಳಿಗೆ ಸರಿಸುಮಾರು 2.5 ಲಕ್ಷ ರೂ. ಮತ್ತು ವರ್ಷಕ್ಕೆ ಸರಿಸುಮಾರು 30 ಲಕ್ಷ ರೂ. ಎಂದಿದ್ದಾರೆ. ಇದನ್ನು ಕೇಳಿ ನಾನು ಸುಸ್ತಾದೆ. ಅಬ್ಬಾ ನಮ್ಮದೂ ಒಂದು ಲೈಫಾ ಅನ್ನಿಸ್ತು ಎಂದಿದ್ದಾರೆ.

ಪೋಸ್ಟ್ ವೈರಲ್ ಆಗುತ್ತಿದೆ

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಉತ್ತಮ ಗುಣಮಟ್ಟ, ನ್ಯಾಯಯುತ ಬೆಲೆ ನಿಗದಿ ಮತ್ತು ಗ್ರಾಹಕರ ನಂಬಿಕೆಯ ಆಧಾರದ ಮೇಲೆ ಸಣ್ಣ ವ್ಯವಹಾರಗಳು ಸಹ ಗಮನಾರ್ಹ ಲಾಭವನ್ನು ಗಳಿಸಬಹುದು ಎಂದು ಅನೇಕ ಬಳಕೆದಾರರು ಗಮನಸೆಳೆದಿದ್ದಾರೆ. ಒಬ್ಬ ಬಳಕೆದಾರರು, "ಈ ವ್ಯವಹಾರವು ಖಂಡಿತವಾಗಿಯೂ ಲಾಭದಾಯಕವಾಗಿದೆ, ಆದರೆ ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ನಿಜವಾದ ಯಶಸ್ಸು ಮತ್ತು ಗಳಿಕೆಗೆ ಸ್ಥಿರವಾದ ಗುಣಮಟ್ಟ ಮತ್ತು ಸ್ಥಿರವಾದ ಅಭಿರುಚಿ ಪ್ರಮುಖ ಅಂಶಗಳಾಗಿವೆ" ಎಂದು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ಕೆಲಸ ಬಿಟ್ಟು ರಿಸ್ಕ್ ತೆಗೆದುಕೊಂಡ ಬೆಂಗಳೂರು ಯುವಕನಿಗೆ ಜಾಕ್‌ಪಾಟ್; ಈಗ ತಿಂಗಳಿಗೆ 2 ಕೋಟಿ ಆದಾಯ
ರೈತ ಮಹಿಳೆಯನ್ನ ನುಂಗಲು ಯತ್ನಿಸಿದ 15 ಅಡಿ ಉದ್ದದ ದೈತ್ಯ ಹೆಬ್ಬಾವು.. ಮುಂದೇನಾಯ್ತು..?