
ಜನ್ಗಾಂ (ತೆಲಂಗಾಣ): ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ 15 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ದಾಳಿ ಮಾಡಿ ನುಂಗಲು ಯತ್ನಿಸಿರುವ ಘಟನೆ ತೆಲಂಗಾಣದ ಜನ್ಗಾಂ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಸಹಚರ ರೈತರು ಹಾಗೂ ಕೂಲಿ ಕಾರ್ಮಿಕರ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜನ್ಗಾಂ ಜಿಲ್ಲೆಯ ರಘುನಾಥಪಲ್ಲಿ ಮಂಡಲದ ಕಂಚನಪಲ್ಲಿ ಗ್ರಾಮದ ಸ್ವಪ್ನ ಎಂಬ ಮಹಿಳೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಹತ್ತಿರದ ಪೊದೆಯಿಂದ ಬಂದ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು (Python) ದಿಢೀರ್ ಅವರ ಮೇಲೆ ದಾಳಿ ಮಾಡಿದೆ. ಮಹಿಳೆಯನ್ನು ಸುತ್ತುವರಿದ ಹೆಬ್ಬಾವು ಅವರನ್ನು ನುಂಗಲು ಪ್ರಯತ್ನಿಸಿದೆ.
ಹೆಬ್ಬಾವಿನ ಹಿಡಿತಕ್ಕೆ ಸಿಲುಕಿದ ಸ್ವಪ್ನ ಜೋರಾಗಿ ಕೂಗಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ಇತರ ರೈತರು ಮತ್ತು ಕಾರ್ಮಿಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಹಾವಿನ ಮೇಲೆ ದಾಳಿ ಮಾಡಿ, ಸ್ವಪ್ನ ಅವರನ್ನು ಹೆಬ್ಬಾವಿನ ಸುಳಿಯಿಂದ ಮುಕ್ತಗೊಳಿಸಿದ್ದಾರೆ. ಕೇವಲ ಮಹಿಳೆಯನ್ನು ರಕ್ಷಿಸುವುದು ಮಾತ್ರವಲ್ಲದೆ ಯಾವ ಹಾವು ಕಚ್ಚಿದೆ ಎಂಬುದು ವೈದ್ಯರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಆ ಬೃಹತ್ ಹೆಬ್ಬಾವನ್ನು ಸೆರೆಹಿಡಿದು ಗೋಣಿ ಚೀಲದಲ್ಲಿ ತುಂಬಿದ್ದಾರೆ.
ಗಾಯಗೊಂಡ ಸ್ವಪ್ನ ಅವರನ್ನು ಚಿಕಿತ್ಸೆಗಾಗಿ ಜನ್ಗಾಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷವೆಂದರೆ ಗ್ರಾಮಸ್ಥರು ತಾವು ಸೆರೆಹಿಡಿದಿದ್ದ 15 ಅಡಿ ಉದ್ದದ ಹೆಬ್ಬಾವನ್ನು ಕೂಡ ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದಿದ್ದಾರೆ. ಇದನ್ನು ಕಂಡು ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಸದ್ಯ ಸ್ವಪ್ನ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ವೈದ್ಯ ಡಾ.ಬಿಕ್ಷಪತಿ, ಹೆಬ್ಬಾವುಗಳಲ್ಲಿ ವಿಷವಿರುವುದಿಲ್ಲ, ಆದರೆ ಇವು ಮನುಷ್ಯರನ್ನು ಅಥವಾ ಪ್ರಾಣಿಗಳನ್ನು ನುಂಗುವ ಸಾಮರ್ಥ್ಯ ಹೊಂದಿರುತ್ತವೆ. ಇಂತಹ ಹಾವುಗಳ ಬಗ್ಗೆ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ರೈತರು ಸ್ಪಂದಿಸದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಸದ್ಯ ಈ ಘಟನೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.