
ಶಿವನ ಪವಿತ್ರ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿರುವ ಕಾಶಿ ನಗರದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಗಾ ನದಿಯ ಆಳದಲ್ಲಿ ಸುಮಾರು 2500 ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿರುವ ಬೃಹತ್ ಶಿವಲಿಂಗವೊಂದು ಪತ್ತೆಯಾಗಿದ್ದು, ಈ ಸುದ್ದಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಜಾಬಾದ್ ಪ್ರದೇಶದಲ್ಲಿ ಸ್ಥಳೀಯ ಮೀನುಗಾರರು ಗಂಗಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಈ ಅಪರೂಪದ ಆವಿಷ್ಕಾರ ನಡೆದಿದೆ. ಮೀನುಗಾರಿಕೆ ನಡೆಸುತ್ತಿದ್ದಾಗ ಅವರ ಬಲೆ ಏಕಾಏಕಿ ಭಾರವಾದ ವಸ್ತುವಿಗೆ ಸಿಲುಕಿದೆ. ಆರಂಭದಲ್ಲಿ ಅದು ದೊಡ್ಡ ಕಲ್ಲು ಅಥವಾ ಲೋಹದ ವಸ್ತು ಇರಬಹುದು ಎಂದು ಭಾವಿಸಿದ ಮೀನುಗಾರರು ನೀರಿನೊಳಗೆ ಇಳಿದು ಪರಿಶೀಲಿಸಿದಾಗ, ಅಲ್ಲಿ ಬೃಹತ್ ಗಾತ್ರದ ಕಪ್ಪು ಕಲ್ಲಿನ ಶಿವಲಿಂಗವಿರುವುದು ಕಂಡುಬಂದಿದೆ.
ಸುಮಾರು 200 ಕಿಲೋಗ್ರಾಂ ತೂಕವಿರುವ ಈ ಶಿವಲಿಂಗವನ್ನು ಹಲವು ಮಂದಿ ಸೇರಿ ಶ್ರಮಪಟ್ಟು ಹೊರತೆಗೆದು ಗಂಗಾ ದಡಕ್ಕೆ ತಂದಿದ್ದಾರೆ. ಶಿವಲಿಂಗ ಹೊರತೆಗೆದ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ವೈರಲ್ ವಿಡಿಯೋಗಳಲ್ಲಿ ಕೆಲ ಯುವಕರು ರಾತ್ರಿ ವೇಳೆ ಶಿವಲಿಂಗವನ್ನು ತೊಳೆದು ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಗಂಗಾ ದಡದಲ್ಲಿ ಪತ್ತೆಯಾದ ಈ ಶಿವಲಿಂಗವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಬೇಕು ಎಂಬ ಅಭಿಪ್ರಾಯವೂ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಶಿವಲಿಂಗದ ಚಿತ್ರಗಳು ಮತ್ತು ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಇದು ಸುಮಾರು 2500 ವರ್ಷಗಳಷ್ಟು ಹಳೆಯದಾಗಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದರ ನಿಖರ ಕಾಲಮಾನ ಹಾಗೂ ಐತಿಹಾಸಿಕ ಮಹತ್ವದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.
ಈ ನಡುವೆ, ಶಿವಭಕ್ತರು ಇದನ್ನು ಮಹಾದೇವನ ಪವಾಡವೆಂದು ಭಾವಿಸುತ್ತಿದ್ದು, ಶಿವಲಿಂಗದ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಗಂಗೆಯ ಗರ್ಭದಿಂದ ಹೊರಬಂದ ಈ ಅಪರೂಪದ ಶಿವಲಿಂಗ ಇದೀಗ ವಾರಣಾಸಿಯ ಪ್ರಮುಖ ಚರ್ಚೆಯ ವಿಷಯವಾಗಿದೆ.