'ಸರ್ಕಾರಿ ಸೌಲಭ್ಯ ಜನರ ಮನೆಗೆ ಮುಟ್ಟಿ​ಸಲು ಸಂಕಲ್ಪ ಮಾಡ್ತೇನೆ'

By Web Desk  |  First Published Oct 26, 2019, 11:16 AM IST

ದಲ್ಲಾಳಿಗಳ ಹಾವಳಿ ತಪ್ಪಿಸಿ, ನೇರವಾಗಿ ಜನರ ಮನೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಸಂಕಲ್ಪ ಮಾಡಲಾಗಿದೆ ಎಂದ ಶಾಸಕ ಯತ್ನಾಳ| ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣೆ| ಸರ್ಕಾರಿ ಸೌಲಭ್ಯಗಳು ಜನರಿಗೆ ಸರಿಯಾಗಿ ತಲಪುತ್ತಿಲ್ಲ| ಇದರಿಂದ ಜನತೆ ಸೌಲಭ್ಯ ವಂಚಿತರಾಗುತ್ತಿದ್ದಾರೆ|


ವಿಜಯಪುರ(ಅ.26): ದಲ್ಲಾಳಿಗಳ ಹಾವಳಿ ತಪ್ಪಿಸಿ, ನೇರವಾಗಿ ಜನರ ಮನೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಸಂಕಲ್ಪ ಮಾಡಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ. 

ನಗರದ ವಾರ್ಡ ನಂ. 2ರ ವ್ಯಾಪ್ತಿಯ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ, ಮೈತ್ರಿ ವೇತನಕ್ಕೆ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

Latest Videos

undefined

ಸರ್ಕಾರಿ ಸೌಲಭ್ಯಗಳು ಜನರಿಗೆ ಸರಿಯಾಗಿ ತಲಪುತ್ತಿಲ್ಲ

ಸರ್ಕಾರಿ ಸೌಲಭ್ಯಗಳು ಜನರಿಗೆ ಸರಿಯಾಗಿ ತಲಪುತ್ತಿಲ್ಲ. ಇದರಿಂದ ಜನತೆ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಈ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡಲಾಗುವುದು. ಫಲಾನುಭವಿಗಳಿಗೆ ನೇರವಾಗಿ ಸರ್ಕಾರಿ ಸೌಲಭ್ಯ ತಲುಪಿಸಲು ಕ್ರಮ ಜರುಗಿಸಲಾಗುವುದು. ಅದಕ್ಕಾಗಿ ಈ ಕಾರ್ಯಕ್ರಮ ಅನಿವಾರ್ಯವಾಗಿವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಎಲ್ಲ ವರ್ಗದವರಿಗೆ ವಸತಿ, ವಾಜಪೇಯಿ ವಸತಿ, ಡಾ. ಬಿ.ಆರ್‌. ಅಂಬೇಡ್ಕರ ವಸತಿ, ಡಿ. ದೇವರಾಜ ಅರಸು ವಿಶೇಷ ವರ್ಗದ ವಸತಿ ಯೋಜನೆಯಡಿ ಸಹಾಯಧನ ನೀಡಲಾಗುವುದು. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಪಜಾ, ಪಪಂ ವರ್ಗದವರಿಗೆ ಉಚಿತ ಗ್ಯಾಸ್‌ ಹಂಚಿಕೆ, ಸಾಮಾಜಿಕ ಭದ್ರತಾ ಯೋಜನೆ ಅಡಿ ಪಿಂಚಣಿ ಯೋಜನೆಗಳು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾಕಲ್ಯಾಣ ನೀರಾವರಿ ಯೋಜನೆ ಸೇರಿದಂತೆ ಡಾ. ಬಿ.ಆರ್‌. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು ನೇರವಾಗಿ ಜನರಿಗೆ ತಲುಪಲಿವೆ ಎಂದರು.

ತಾಂಡಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು, ಪಪಂ ವಾಲ್ಮಿಕಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು, ಪಜಾ ಭೂವಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು, ಪಜಾ ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ನಿಗಮಗಳಿಂದ ಹಲವಾರು ಸೇವೆ ಜನರ ಮನೆಗೆ ತಲುಪಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್‌ ಮೋಹನಕುಮಾರಿ ಮಾತನಾಡಿ, ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ ಇದಾಗಿದೆ. ಎಲ್ಲ ಮಾಹಿತಿ ಪಡೆದು ಆರ್ಥಿಕ ಸಬಲರಾಗಬೇಕು ಎಂದರು.

ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಶೀತಲಕುಮಾರ ಓಗಿ, ರಮೇಶ ಪಡಸಲಗಿ, ವಿಕ್ರಮ ಗಾಯಕವಾಡ, ಪಾಂಡುಸಾಹುಕಾರ ದೊಡ್ಡಮನಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಅನೇ​ಕ​ರಿ​ದ್ದರು.
 

click me!