ವಿಜಯಪುರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!| ನಾಲ್ಕೂ ಮಕ್ಕಳು ತಲಾ ಒಂದೂವರೆ ಕೆಜಿ ತೂಕ| ವಿಜಯಪುರ ಮುದನೂರ ಆಸ್ಪತ್ರೆಯಲ್ಲಿ ಹೆರಿಗೆ
ವಿಜಯಪುರ[ಅ.19]: ನಗರದಲ್ಲಿ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆ ನಗರದ ಆಶ್ರಮ ರಸ್ತೆಯಲ್ಲಿರುವ ಮುದನೂರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನಾಲ್ಕೂ ಮಕ್ಕಳು ತಲಾ ಒಂದೂವರೆ ಕೆಜಿ ತೂಕವಿರುವುದು ವಿಶೇಷ. ಈ ನಾಲ್ಕರಲ್ಲಿ 2 ಹೆಣ್ಣು, 2 ಗಂಡು ಮಕ್ಕಳಿದ್ದು, ಆರೋಗ್ಯವಾಗಿವೆ. ಆದರೆ ಮುಂಜಾಗ್ರತವಾಗಿ ಮಕ್ಕಳನ್ನು ಬಿಎಲ್‌ಡಿಇ ಆಸ್ಪತ್ರೆಯ ಎನ್‌ಐಸಿನಲ್ಲಿ ಇಡಲಾಗಿದೆ.
ನಗರದ ಇಂಡಿ ರಸ್ತೆಯಲ್ಲಿರುವ ದಾಲಿಬಾಯಿ ಚಂದಾಲಾಲ್ ಸಂದೇಶ (40) ಎಂಬುವರೇ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಅವರು ಮೂಲತಃ ರಾಜಸ್ತಾನದವರು. ಪತಿ ಚಂದಾಲಾಲ್ ಹೋಂ ನೀಡ್ಸ್ ವರ್ತಕ. ಈ ದಂಪತಿಗೆ 4 ವರ್ಷದ ವಿಶೇಷ ಚೇತನ ಹೆಣ್ಣು ಮಗುವಿದೆ.
ಚಿಕ್ಕಮಗಳೂರು: 3 ಕರುಗಳಿಗೆ ಜನ್ಮ ನೀಡಿದ ಹಸು
ಪ್ರಣಾಳ ಶಿಶು ಚಿಕಿತ್ಸೆ: ಗಂಡು ಮಗು ಪಡೆಯಲು ಈ ದಂಪತಿ ಬೆಂಗಳೂರಿಗೆ ತೆರಳಿದ್ದರು. ಬಂಜೆ ನಿವಾರಣಾ ಚಿಕಿತ್ಸೆ ಪಡೆದಿದ್ದರು. ಅದಕ್ಕಾಗಿ ಈ ಮಹಿಳೆ ಪ್ರಣಾಳ ಶಿಶು ಚಿಕಿತ್ಸೆಗೂ ಒಳಪಟ್ಟಿದ್ದರು. ಬಳಿಕ ಗರ್ಭ ಧರಿಸಿದ ಮಹಿಳೆ ಕಳೆದ ಏಳೆಂಟು ತಿಂಗಳಿನಿಂದ ಇಲ್ಲಿನ ಮುದನೂರ ಆಸ್ಪತ್ರೆ ವೈದ್ಯರ ಬಳಿ ತಪಾಸಣೆ ಮಾಡಿಕೊಳ್ಳುತ್ತಿದ್ದರು.
ಸ್ಕ್ಯಾನಿಂಗ್‌ನಲ್ಲಿ 4 ಮಕ್ಕಳು: ಶುಕ್ರವಾರ ಬೆಳಗ್ಗೆ ತಪಾಸಣೆಗೆಂದು ಆಗಮಿಸಿದಾಗ ವೈದ್ಯರು ಅಲ್ಟಾ್ರಸೌಂಡ್ ಸ್ಕ್ಯಾನಿಂಗ್‌ಗೆ ಒಳಡಪಡಿಸಿದರು. ಆಗ ಮಹಿಳೆಯ ಗರ್ಭದಲ್ಲಿ ನಾಲ್ಕು ಶಿಶುಗಳಿರುವುದು ಪತ್ತೆಯಾಯಿತು. ರಾತ್ರಿ 9ಕ್ಕೆ ಹೆರಿಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದಂತೆಯೇ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ.
ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಅಪರೂಪ. 6 ಲಕ್ಷಕ್ಕೊಬ್ಬ ಮಹಿಳೆಯರಿಗೆ ನಾಲ್ಕು ಮಕ್ಕಳು ಜನಿಸುತ್ತವೆ ಎಂದು ಮುದನೂರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವೈದ್ಯ ಡಾ. ಎಸ್.ಆರ್. ಮುದನೂರ ತಿಳಿಸಿದರು.
ದೀಪಾವಳಿ ಹಬ್ಬಕ್ಕೆ ರೈತರಿಗೊಂದು ಬಂಪರ್ ಸುದ್ದಿ
10 ವರ್ಷಗಳ ಹಿಂದೆ ನಗರದ ಡಾ.ಜಯಶ್ರೀ ಎಂಬ ವೈದ್ಯೆ ಇದೇ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದನ್ನು ಡಾ. ಎಸ್.ಆರ್. ಮುದನೂರ ಸ್ಮರಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಮುದನೂರ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಎಸ್.ಆರ್. ಮುದನೂರ, ಡಾ. ಬಸವರಾಜ ಪಾಟೀಲ, ಅರವಳಿಕೆ ತಜ್ಞ ಡಾ. ವಿಜಯ ಕಟ್ಟಿ, ಸಿಬ್ಬಂದಿ ಪಾಲ್ಗೊಂಡಿದ್ದರು.