ಗಬ್ಬೆದ್ದು ಹೋಗಿದೆ ಆಲಮೇಲ ಪಟ್ಟಣ| ವಿಪರೀತಗೊಂಡಿರುವ ಸೊಳ್ಳೆಗಳ ಕಾಟ| ಇಬ್ಬರಿಗೆ ಡೆಂಘೀ, ಉಲ್ಬಣಿಸುವ ಆತಂಕ| ನೂರಾರು ಜನಕ್ಕೆ ತೀವ್ರ ಜ್ವರ| ಯಾವುದೇ ಉಪಚಾರ ಮಾಡಿದರೂ ಜ್ವರ ಬರುವ ವೇಗ ಮಾತ್ರ ಕಡಿಮೆ ಆಗುತ್ತಿಲ್ಲ| ಕುಡಿಯುವ ನೀರಿನಿಂದಲೂ ಸಹಿತ ಜ್ವರ ಬರುತ್ತಿವೆ| ನೀರಿನ ನಲ್ಲಿಗಳು ಚರಂಡಿಯಲ್ಲಿವೆ|
ಆಲಮೇಲ(ಅ.18): ಪಟ್ಟಣದ ಎಲ್ಲ (19) ವಾರ್ಡ್‌ಗಳಲ್ಲೂ ಚರಂಡಿಗಳು ಗಲೀಜು ನೀರಿನಿಂದ ತುಂಬಿ ತುಳುಕುತ್ತಿದ್ದು, ಸೊಳ್ಳೆಗಳ ಕಾಟ ಮಿತಿಮೀರಿದೆ. ಈ ಸೊಳ್ಳೆಗಳ ಕಚ್ಚುವಿಕೆಯಿಂದ ನಿವಾಸಿಗಳು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಡೆಂಘೀ ಜ್ವರದ ಭೀತಿಯಲ್ಲಿ ದಿನ ನೂಕುತ್ತಿದ್ದಾರೆ.
ಪಟ್ಟಣದಲ್ಲಿ ಈಗಾಗಲೇ ಎರಡು ಪ್ರಕರಣಗಳು ಡೆಂಘೀ ಎಂದು ಸಾಬೀತವಾಗಿವೆ. ಇದರಿಂದ ಇನ್ನುಳಿದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿದಿನವೂ ಪಟ್ಟಣದ ಜನರು ಜ್ವರದಿಂದಾಗಿ ಆಸ್ಪತ್ರೆಗೆ ಹೋಗುವಂತಾಗಿದೆ. ಪಟ್ಟಣದ ಮಕ್ಕಳ ಆಸ್ಪತ್ರೆಗೆ ವಿವಿಧ ಕಾರಣಗಳಿಂದ ಚಿಕಿತ್ಸೆಗೆ ಹೋಗುವ 400ಕ್ಕೂ ಹೆಚ್ಚು ಮಕ್ಕಳಲ್ಲಿ 280 ಮಕ್ಕಳಿಗೆ ಜ್ವರವೇ ಕಂಡು ಬರುತ್ತಿದೆ. ಯಾವುದೇ ಉಪಚಾರ ಮಾಡಿದರೂ ಜ್ವರ ಬರುವ ವೇಗ ಮಾತ್ರ ಕಡಿಮೆ ಆಗುತ್ತಿಲ್ಲ ಎಂದು ಪಾಲಕರು ಹೇಳುತ್ತಾರೆ.
undefined
ಪಪಂ ಕ್ರಮಕೈಗೊಳ್ಳಲಿ:
ಪಟ್ಟಣದ ಪ್ರತಿಯೊಂದು ವಾರ್ಡ್ಗಳಲ್ಲಿ ಚರಂಡಿಗಳಲ್ಲಿನ ಗಲೀಜಿನಿಂದಾಗಿ ಸೊಳ್ಳೆಗಳು ವಿಪರೀತವಾಗಿದ್ದು, ಇವುಗಳ ನಿಯಂತ್ರಣಕ್ಕೆ ಪಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ನಿವಾಸಿಗಳಿಗೆ ಶುದ್ಧವಾದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕಾಗಿದೆ. ಪಟ್ಟಣದಲ್ಲಿ ಅಲ್ಲಲ್ಲಿ ತೆಗ್ಗಿನಲ್ಲಿ ನೀರು ನಿಲ್ಲದಂತೆಯೂ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಪಪಂ ನಿರ್ವಹಿಸಬೇಕಾಗಿದೆ.
ಆಲಮೇಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 500 ಕ್ಕೂ ಹೆಚ್ಚು ರೋಗಿಗಳು ವಿವಿಧ ಕಾರಣವಾಗಿ ಚಿಕಿತ್ಸೆಗೆ ಬರುತ್ತಿರುತ್ತಾರೆ. ಆದರೆ ವೈದ್ಯರು ಮಾತ್ರ ಒಬ್ಬರೇ ಇದ್ದಾರೆ. ಇವರಿಂದ ಅಷ್ಟೂ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಅಸಾಧ್ಯ. ಆದ್ದರಿಂದ ಆಸ್ಪತ್ರೆಗೆ ಅವಶ್ಯವಿರುವ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ವೈದ್ಯರಿಗೆ ಸಹಾಯಕರಾಗಬೇಕಾದ ಸಿಬ್ಬಂದಿ ಕೂಡ ಇಲ್ಲ. ಹೀಗಾಗಿ ಎಲ್ಲ ಹೊಣೆ ಒಬ್ಬರ ಮೇಲೆ ಬೀಳುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು ಎಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಶೋಕ ಕೋಲಾರಿ ಆಗ್ರಹಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ:
ಆಲಮೇಲ ಪಟ್ಟಣದಲ್ಲಿ ಒಟ್ಟು 14ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಒಂದು ಚಿಕ್ಕಮಕ್ಕಳ ಆಸ್ಪತ್ರೆ ಇದೆ. ಅಲ್ಲಿಯೂ ಪ್ರತಿದಿನ ನೂರಾರು ರೋಗಿಗಳು ಬರುತ್ತಿದ್ದು ಅವರಲ್ಲಿ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಎರಡು ತಿಂಗಳಿಂದ ರೋಗಿಗಳ ಸಂಖ್ಯೆ ಹೆಚ್ಚಿದ್ದು ಜನರು ಆತಂಕಗೊಂಡಿದ್ದಾರೆ. ಪಪಂಗೆ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದ್ದರಿಂದ ನಾವು ನಮ್ಮ ಸಮಸ್ಯೆ ಹೇಳಲು ಸಾಧ್ಯವಾಗುತ್ತಿಲ್ಲ. ಒಂದು ಸಭೆಯೂ ನಡೆದಿಲ್ಲ. ಮುಖ್ಯಾಧಿಕಾರಿಗಳೂ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಆರೋಗ್ಯ ವಾತಾವರಣ ಹದಗೆಟ್ಟಿದೆ. ಕುಡಿಯುವ ನೀರಿನಿಂದಲೂ ಸಹಿತ ಜ್ವರ ಬರುತ್ತಿವೆ. ನೀರಿನ ನಲ್ಲಿಗಳು ಚರಂಡಿಯಲ್ಲಿವೆ. ಕೂಡಲೇ ಅಧಿಕಾರಿಗಳು ಜನರ ಆರೋಗ್ಯ ದೃಷ್ಟಿಯಿಂದ ಸ್ವಚ್ಛಪಡಿಸಿ ಶುದ್ಧವಾದ ವಾತಾವರಣ ನಿರ್ಮಿಸಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳ ಒಕ್ಕೂಟದಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ವಿವಿಧ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಆಲಮೇಲದ ವೈದ್ಯಾಧಿಕಾರಿ ಪ್ರಶಾಂತ ದೂಮಗೊಂಡ ಅವರು, ಪ್ರತಿ ದಿನ ಸರ್ಕಾರಿ ಆಸ್ಪತ್ರೆಗೆ 500 ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ಇಲ್ಲಿ ಸಿಬ್ಬಂದಿ ಕೊರತೆ ಇದೆ. ವೈದ್ಯರ ಕೊರತೆಯೂ ಇದೆ. ಇಲ್ಲಿ ಪರೀಕ್ಷೆ ಮಾಡಿಸಿಕೊಂಡ ರೋಗಿಗಳಲ್ಲಿ ಇಬ್ಬರಿಗೆ ಡೆಂಘೀ ಇದೆ ಎಂಬುದು ಖಚಿತವಾಗಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದಲ್ಲಿನ ಸ್ವಚ್ಛತೆ ಬಗ್ಗೆ ಪಪಂಗೆ ಹಲವಾರು ಬಾರಿ ಮನವಿ ನೀಡಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಆಲಮೇಲ ಪಪಂ ಮುಖ್ಯಾಧಿಕಾರಿ ಸುನೀಲ್ ಸಾಂಬೋಜಿ ಅವರು, ಆಲಮೇಲ ಪಟ್ಟಣದಲ್ಲಿರುವ ಎಲ್ಲ ವಾರ್ಡಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಪಚ್ಛತೆ ಮಾಡಲು ಹೇಳುತ್ತೇನೆ. ಶುದ್ಧ ನೀರು ಪೂರೈಸಲು ಸಿಬ್ಬಂದಿಗೆ ಸೂಚಿಸಲಾಗುವುದು. ಚರಂಡಿ ಹಾಗೂ ಇತರೆಡೆ ಸಂಗ್ರಹವಾದ ನೀರಲ್ಲಿ ಮತ್ತು ಕೊಳಚೆ ಪ್ರದೇಶದಲ್ಲಿ ಸೊಳ್ಳೆ ನಾಶಕ ಔಷಧಿ ಸಿಂಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.