
ಈ ವರ್ಷ 'ಸು ಫ್ರಂ ಸೋ' ಮತ್ತು 'ಕಾಂತಾರ ಚಾಪ್ಟರ್-1' ನಂತಹ ಹಿಟ್‌ಗಳೊಂದಿಗೆ ಸ್ಯಾಂಡಲ್‌ವುಡ್ ಗೆದ್ದು ಬೀಗಿದೆ. ಮುಂಬರುವ ತಿಂಗಳುಗಳಲ್ಲಿ ದರ್ಶನ್, ಶಿವರಾಜ್‌ಕುಮಾರ್, ಮತ್ತು ಕಿಚ್ಚ ಸುದೀಪ್ ಅವರಂತಹ ಸ್ಟಾರ್ ನಟರ ದೊಡ್ಡ ಸಿನಿಮಾಗಳು ತೆರೆಗೆ ಬರಲಿದೆ.
ಕಳೆದ ವರ್ಷ ಮೊದಲಾರ್ಧ ಸೋತು ಸೊರಗಿದ್ದ ಸ್ಯಾಂಡಲ್‌ವುಡ್ ದ್ವಿತಿಯಾರ್ಧದಲ್ಲಿ ಗೆದ್ದು ಬೀಗಿತ್ತು. ಈ ವರ್ಷ ಕೂಡ ಅಂಥದ್ದೇ ರಿಸಲ್ಟ್ ಬರ್ತಾ ಇದೆ. ಅಸಲಿಗೆ ಈ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಹಿಟ್ ಸಿನಿಮಾ ಬಂದಿರಲಿಲ್ಲ. ಜುಲೈನಲ್ಲಿ ತೆರೆಗೆ ಬಂದ ಎಕ್ಕಾ, ಮತ್ತು ಜೂನಿಯರ್ ತಕ್ಕ ಮಟ್ಟಿಗೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆತಂದಿದ್ವು. ಆದ್ರೆ ಸಿನಿಪ್ರೀಯರನ್ನ ಸುನಾಮಿಯಂತೆ ಥಿಯೇಟರ್ಗೆ ನುಗ್ಗಿಸಿದ್ದು ಸು ಫ್ರಂ ಸೋ ಸಿನಿಮಾ.
ರಾಜ್ ಬಿ ಶೆಟ್ಟಿ ನಟನೆ ನಿರ್ಮಾಣದ ಸು ಫ್ರಂ ಸೋ ಸಿನಿಮಾ ಈ ವರ್ಷದ ಅಚ್ಚರಿಯ ಗೆಲುವು. ಜುಲೈ ಕೊನೆವಾರ ತೆರೆಗೆ ಬಂದ ಈ ಕಾಮಿಡಿ ಡ್ರಾಮಾ ನೋಡಲಿಕ್ಕೆ ರಾಜ್ಯಾದ್ಯಂತ ಸಿನಿಪ್ರಿಯರು ಥಿಯೇಟರ್ ಗೆ ನುಗ್ಗಿದ್ರು. 50 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಈ ಸಿನಿಮಾ ಪರಬಾಷೆಗಳಲ್ಲೂ ಕಮಾಲ್ ಮಾಡ್ತು, ಜಸ್ಟ್ 4 ಕೋಟಿ ಬಜೆಟ್ನ ಈ ಸಿನಿಮಾ ಗಳಿಸಿದ್ದು ಭರ್ತಿ 100 ಕೋಟಿ. ಇನ್ನೂ ಅಕ್ಟೋಬರ್ 2 ರಂದು ಬಂದ ಕಾಂತಾರ ಚಾಪ್ಟರ್-1 ಅಂತೂ ವಿಶ್ವದಾದ್ಯಂತ ಜಯಭೇರಿ ಬಾರಿಸ್ತಾ ಇದೆ. ಈಗಾಗ್ಲೇ 550 ಕೋಟಿಗೂ ಅಧಿಕ ಬಾಕ್ಸಾಫೀಸ್ ಗಳಿಕೆ ಮಾಡಿರೋ ಸಿನಿಮಾ ಎರಡನೇ ವಾರಾಂತ್ಯವೂ ಕಮಾಲ್ ಮಾಡಿದೆ.
ಹೌದು ಕಾಂತಾರ-1 ನಂತರ ಏನು..? ಅಂತ ಕೇಳೋದಾದ್ರೆ ದೊಡ್ಡ ಲಿಸ್ಟೇ ಇದೆ. ರಾಜ್ ಶೆಟ್ಟಿ, ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ, ಡಾರ್ಲಿಂಗ್ ಕೃಷ್ಣ ಶಶಾಂಕ್ ಜೋಡಿಯ ಬ್ರ್ಯಾಟ್ ಸಿನಿಮಾಗಳು ರಿಲೀಸ್ಗೆ ಸಜ್ಜಾಗಿವೆ. ಡಿಸೆಂಬರ್ನಲ್ಲಂತೂ ಕನ್ನಡದಲ್ಲಿ ಸಿನಿಮಾ ಹಬ್ಬವೇ ನಡೆಯಲಿದೆ. ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ತೆರೆಗೆ ಬರಲಿದೆ. ದಾಸ ಜೈಲಲ್ಲಿದ್ರೂ ದೊಡ್ಡ ಹಬ್ಬ ಮಾಡಬೇಕು ಅಂತ ಫ್ಯಾನ್ಸ್ ಸಜ್ಜಾಗಿದ್ದಾರೆ.
ಇನ್ನೂ ಡಿಸೆಂಬರ್ 20ಕ್ಕೆ 45 ಸಿನಿಮಾ ರಿಲೀಸ್ ಆಗಲಿದೆ. ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಶೆಟ್ಟಿ ನಟಿಸಿರೋ ಈ ಮಲ್ಟಿಸ್ಟಾರರ್ ಮೂವಿ ಬಗ್ಗೆಯೂ ದೊಡ್ಡ ನಿರೀಕ್ಷೆ ಇದೆ. ಇವೆಲ್ಲದರ ಜೊತೆಗೆ ವರ್ಷಾಂತ್ಯಕ್ಕೆ ರಂಜನೆಯ ಕಿಚ್ಚು ಹಚ್ಚೋದಕ್ಕೆ ಕಿಚ್ಚ ಎಂಟ್ರಿ ಕೊಡಲಿದ್ದಾರೆ. ಕ್ರಿಸ್ಮಸ್ಗೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಿಲೀಸ್ ಆಗಲಿದೆ. ಸ್ಯಾಂಡಲ್‌ವುಡ್ ಬರಲಿರೋ ಮೂರು ತಿಂಗಳಲ್ಲಿ ಮತ್ತೆ ನೂರಾರು ಕೋಟಿ ಲಾಭ ಮಾಡೋ ನಿರೀಕ್ಷೆಯಲ್ಲಿದೆ.