Oct 30, 2022, 6:05 PM IST
ಕಾಂತರಾ ಚಿತ್ರದಲ್ಲಿ ಪ್ರೇಕ್ಷಕರು ಅತಿಯಾಗಿ ಮೆಚ್ಚಿಕೊಂಡಿರುವ ಪಾತ್ರಗಳಲ್ಲಿ ನಾಯಕ ನಟ ಶಿವನ ತಾಯಿ ಕಮಲ ಪಾತ್ರ ಕೂಡ ಒಂದು. ಈ ಪಾತ್ರದಲ್ಲಿ ನಟಿಸಿರುವ ಮಾನಸಿ ಸುಧೀರ್ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ಅವರ ರಮ್ಯ ಚೈತ್ರ ಕಾಲ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದವರು. ನಾಡಿನ ಖ್ಯಾತ ವಿಮರ್ಶಕ ಮುರಳಿದರ ಉಪಾಧ್ಯ ಹಿರಿಯಡ್ಕ ಅವರ ಪುತ್ರಿಯಾಗಿರುವ ಮಾನಸಿ, ನಾಡಿನ ಖ್ಯಾತ ನೃತ್ಯ ವಿದುಷಿಯಾಗಿಯೂ, ಮಕ್ಕಳು ಇಷ್ಟಪಡುವ ಹಾಡುಗಳನ್ನು ದಾಖಲಿಸಿರುವ ಯೂಟ್ಯೂಬರ್ ಆಗಿಯೂ ಪ್ರಸಿದ್ಧರು. ಈ ಸಿನಿಮಾದ ಬಗ್ಗೆ ಮಾತನಾಡಿರುವ ಮಾನಸಿ, ಕಾಂತರಾ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ ಖುಷಿಯಾಗುತ್ತೆ.ನಾನು ಇನ್ನೂ ಕೂಡ ಕಾಂತಾರದ ಗುಂಗಿನಲ್ಲೇ ಇದ್ದೇನೆ.ನನ್ನ ವಯಸ್ಸಿಗಿಂತ ಜಾಸ್ತಿ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಿಂದ ಒಳ್ಳೇದಾಗುತ್ತೆ ಅನ್ನೋ ನಿರೀಕ್ಷೆ ಇತ್ತು. ಒಂದು ಹಂತದ ಸಕ್ಸಸ್ ಸಿಗುತ್ತೆ ಅನ್ನುವ ಗ್ಯಾರಂಟಿ ಇತ್ತು. ಆದರೆ ಈ ರೀತಿ ಸಕ್ಸಸ್ ಸಿಗುತ್ತೆ ಎಂದು ದೇವರಾಣೆ ಎಣಿಸಿರಲಿಲ್ಲ ಎಂದು ಹೇಳಿದ್ದಾರೆ.