
ಬೇಡರ ಕಣ್ಣಪ್ಪ. ಡಾಕ್ಟರ್ ರಾಜ್ ಗೆ ಹೀರೋ ಪಟ್ಟ ಕಟ್ಟಿಕೊಟ್ಟ ಸಿನಿಮಾ.. ತನ್ನ ಎರಡೂ ಕಣ್ಣುಗಳನ್ನು ಕಿತ್ತುಕೊಳ್ಳುವ ಮೂಲಕ ಹಿಂದೂ ದೇವರು ಶಿವನ ಮೇಲಿನ ತನ್ನ ತೀವ್ರ ಭಕ್ತಿಯನ್ನು ಸಾಬೀತುಪಡಿಸುವ ಪೌರಾಣಿಕ ಕಥೆಯ ಈ ಸಿನಿಮಾ ಅಣ್ಣಾವ್ರ ಹೆಸರಿನ ಕೀರ್ತಿ ಪತಾಕೆಯಲ್ಲೊಂದು. 1954ರಲ್ಲಿ ಬಂದ ಬೇಡರ ಕಣ್ಣಪ್ಪ ಸಿನಿಮಾ ಇಂದಿಗೂ ಜನ ಮಾನಸದಲ್ಲಿ ಅಚ್ಚೊತ್ತಿದೆ. ಇದೇ ಕಥೆ ಈಗ ಹೊಸ ರೂಪದಲ್ಲಿ ಸ್ಟಾರ್ ಹೀರೋಗಳ ಹೊಳಪಿನಲ್ಲಿ ಕಣ್ಣಪ್ಪನಾಗಿ ತೆರೆ ಮೇಲೆ ಮೇಳೈಸೋಕೆ ಬರುತ್ತಿದೆ.
ದೊಡ್ಡ ಸಿನಿಮಾಗಳೇ ಇಲ್ಲದ ಟೈಮ್ನಲ್ಲಿ ತೆಲುಗು ಚಿತ್ರರಂಗದಿಂದ ಪೌರಾಣಿಕ ಕಥೆಯ ಕಣ್ಣಪ್ಪ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರುತ್ತಿದೆ. ಡಾಕ್ಟರ್ ರಾಜ್ಕುಮಾರ್ರ ಕಣ್ಣಪ್ಪನನ್ನ ನೋಡಿದವರು ಈಗ ಹೊಸ ಟೆಕ್ನಾಲಜಿಯಲ್ಲಿ ಸಿದ್ಧವಾಗಿರೋ ಮಲ್ಟಿಸ್ಟಾರ್ ಕಣ್ಣಪ್ಪನ ಕತೆ ನೋಡಬಹುದು. ಈ ಸಿನಿಮಾದಲ್ಲಿ ಕಣ್ಣಪ್ಪನಾಗಿ ಮಂಚುವಿಷ್ಣು ನಟಿಸಿದ್ದಾರೆ. ಇವರ ಜೊತೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಮೋಹನ್ ಬಾಬು ಕಾಜೋಲ್ ಈ ಸಿನಿಮಾದಲ್ಲಿದ್ದಾರೆ.
ಡಾಕ್ಟರ್ ರಾಜ್ಕುಮಾರ್ರ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವಭಕ್ತ ಕಣ್ಣಪ್ಪನಾಗಿದ್ರು. ಶಿವನಿಗಾಗಿ ತನ್ನೆರಡೂ ಕಣ್ಣುಗಳನ್ನ ಕಿತ್ತುಕೊಟ್ಟಿದ್ರು. ಆದ್ರೆ ಈಗ ಬರ್ತಾ ಇರೋ ಕಣ್ಣಪ್ಪ ಶಿವಭಕ್ತ ಕಣ್ಣಪ್ಪ ಮಾತ್ರ ಅಲ್ಲ ಫೈಟರ್ ಕಣ್ಣಪ್ಪನೂ ಹೌದು. ಈ ಸಿನಿಮಾದಲ್ಲಿ ಆ್ಯಕ್ಷನ್ ಧಮಾಕ ಇದೆ. ಪ್ಯಾನ್ ಇಂಡಿಯಾ ಸ್ಟೈಲ್ಗೆ ತಕ್ಕಂತೆ ಕಣ್ಣಪ್ಪನನ್ನು ಆಕ್ಷನ್ ಹೀರೋ, ಮಾಸ್ ಹೀರೋ ಕಣ್ಣಪ್ಪನನ್ನಾಗಿಸಿದ್ದಾರೆ.
ಕಣ್ಣಪ್ಪ ಸಿನಿಮಾದಲ್ಲಿ ಮಂಚು ವಿಷ್ಣು ಭಯವಿಲ್ಲದ ಯೋಧನಿಂದ ಶಿವನ ಪರಮ ಭಕ್ತನಾಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಶಿವನ ರೋಲ್ ಮಾಡಿದ್ರೆ, ಕಾಜಲ್ ಅಗರ್ವಾಲ್ ಪಾರ್ವತಿ ಪಾತ್ರ ಮಾಡಿದ್ದಾರೆ. ಮೋಹನ್ ಲಾಲ್ ಕಿರಾತಕನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಪ್ರಭಾಸ್ ರುದ್ರ ರೋಲ್ ನೋಡೋ ಆಸೆಯಲ್ಲಿ ಅವರ ಫ್ಯಾನ್ಸ್ ಇದ್ದಾರೆ. ಈ ಸಿನಿಮಾದಲ್ಲಿ ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸಿದ್ದಾರೆ. ಮಂಚು ವಿಷ್ಣು ಮತ್ತು ಮೋಹನ್ಬಾಬು ಬಂಡವಾಳ ಹೂಡಿರೋ ಕಣ್ಣಪ್ಪ ಇದೇ ಜೂನ್ 27ಕ್ಕೆ ಅಂದರೆ ನಾಳೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ.